ತುರುವೇಕೆರೆ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಡಿ.7ರಂದು ಪಾದಯಾತ್ರೆ ಹಮ್ಮಿಕೊಂಡಿದ್ದು ಕ್ಷೇತ್ರದ ಎಲ್ಲ ರೈತರು ಪಕ್ಷಾತೀತವಾಗಿ ಭಾಗವಹಿಸಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗು ಮಾಜಿ ಶಾಸಕ ಮಸಾಲೆ ಜಯರಾಮ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಂಟಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಸಿ.ಎಸ್.ಪುರ, ತುರುವೇಕೆರೆ ಕ್ಷೇತ್ರದ ರೈತರು ಹಾಗು ಕಾಂಗ್ರೆಸ್ ರೈತರೂ ಪಕ್ಷಬೇಧ ಮರೆತು ಹೇಮಾವತಿ ನಾಲೆ ಡಿ.206ನ ಸಾಗರನಹಳ್ಳಿ ಗೇಟ್ ನಿಂದ ಶನಿವಾರ 10:30 ಗಂಟೆಗೆ ಪಾದಯಾತ್ರೆ ಪ್ರಾರಂಭಗೊಂಡು ಭಾನುವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಸೇರಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಎನ್.ಡಿ.ಎ ಹೋರಾಟ ನಿಲ್ಲದು. ಯಾವುದೇ ಕಾರಣಕ್ಕೂ ಸರ್ಕಾರದೊಂದಿಗೆ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಮಗಾರಿ ನಿಲ್ಲಸಿದರೆ ಮಾತ್ರ ಸರ್ಕಾರದ ನಡೆಯನ್ನು ಗೌರವಿಸುತ್ತೇವೆ. ಕಾಂಗ್ರೆಸ್ ಸರ್ಕಾರ ತುಮಕೂರು ಜಿಲ್ಲೆಯ ರೈತರ ಪಾಲಿಗೆ ರೈತ ವಿರೋಧಿಯಾಗಿದೆ.
ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರುದ್ದ ಕಳೆದ ಆರೇಳು ತಿಂಗಳುಗಳಿಂದ ಮೈತ್ರಿ ಪಕ್ಷಗಳು ಸತತ ಹೋರಾಟ ಮಾಡಿ ನಿಲ್ಲಿಸಿದ್ದೆವು. ಆದರೆ ಈಗ ಪುನಃ ಕಾಮಗಾರಿ ಪ್ರಾರಂಭಿಸಿರುವುದು ಖಂಡನೀಯ. ಈ ಕಾಮಗಾರಿ ತುಮಕೂರು ಜಿಲ್ಲೆಯ ರೈತರಿಗೆ ಮರಣ ಶಾಸನವಾಗಲಿದೆ.
ಗೊರೂರು ಡ್ಯಾಮ್ ನಿಂದ ಮಾಗಡಿಗೆ ನೇರ ಪೈಪ್ ಲೈನ್ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲಿ ಅದಕ್ಕೆ ಅಭ್ಯಂತರವಿಲ್ಲ. 24 ಟಿಎಂಸಿ ನೀರನ್ನು ಕುಣಿಗಲ್, ಮಾಗಡಿ ಸೇರಿಯೇ ನಾಲಾ ನೀರು ಹಂಚಿಕೆ ಮಾಡಲಾಗಿದೆ. 12 ಅಡಿ ವಿನ್ಯಾಸವುಳ್ಳ ಪೈಪ್ ನಲ್ಲಿ ಸುಮಾರು 70 ಕಿ.ಮೀ ನೀರು ತೆಗೆದುಕೊಂಡು ಹೋದರೆ ಗ್ರಾವಿಟಿ ಮೂಲಕ ಎಲ್ಲಾ ನೀರು ಮಾಗಡಿ ಸೇರಿದರೆ ಇಲ್ಲಿನ ಎರಡು ತಾಲ್ಲೂಕಿನ ರೈತರ ಗತಿ ಏನು? ಜೊತೆಗೆ ಇಡೀ ಕಾಮಗಾರಿಯೇ ಅವೈಜ್ಞಾನಿಕವಾದದ್ದು.
ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಯಾಗಿದ್ದಅವಧಿಯಲ್ಲೇ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೈಜ್ಞಾನಿಕವಾದುದಲ್ಲ ಎಂದು ಹೇಳಿದರು. ನಂತರ ಬಂದ ಬಿ.ಎಸ್.ಯಡಿಯೂರಪ್ಪನವರು ಕೂಡ ಈ ಕಾಮಗಾರಿ ರದ್ದುಮಾಡಿದರು. ಈ ನಡುವೆ ಕಾಮಗಾರಿ ತಾಂತ್ರಿಕ ಅಧಿಕಾರಿಗಳು ಜಿಲ್ಲೆಯ ಶಾಸಕರನ್ನು ಕರೆದಿದ್ದರು ನಾವು ತಿರಸ್ಕರಿಸಿದ್ದೇವೆ.
ಈ ಸರ್ಕಾರ ಈ ಭಾಗದ ರೈತರ ಶವಗಳ ಮೇಲೆ ನೀರು ತೆಗೆದುಕೊಂಡು ಹೋಗುಬೇಕಷ್ಟೇ. ಪ್ರಾಣಬಿಟ್ಟರೂ ನೀರು ಬಿಡೆವು. ಕುಣಿಗಲ್ ತಾಲ್ಲೂಕಿಗೆ ನಾಲುವೆ ಮಾಡಿಕೊಂಡು ನೀರು ತೆಗೆದುಕೊಂಡು ಹೋಗಲು ಯಾವ ಶಾಸಕರ ವಿರೋಧವೂ ಇಲ್ಲ. ಮುಂದಿನ ದಿನಗಳಲ್ಲಿ ಮೈತ್ರಿ ಪಕ್ಷಗಳು ಸೇರಿಕೊಂಡು ಬೆಂಗಳೂರು ವಿಧಾಸಭೆ ಚಲೋ ಚಳವಳಿ ಹಮ್ಮಿಕೊಳ್ಳಲಾಗುವುದೆಂದು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಒಕ್ಕೊರಲಿನಿಂದ ಸರ್ಕಾರಕ್ಕೆ ಎಚ್ಚರಿಗೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮೃತ್ಯುಂಜಯ ಮತ್ತು ಮೈತ್ರಿ ಕಾರ್ಯಕರ್ತರು ಇದ್ದರು.