ಪಾವಗಡ : ಬಾಲ್ಯವಿವಾಹ ಮಾಡಲ್ಲ, ಮಾಡಲು ಬಿಡೂವುದು ಇಲ್ಲ- ಇದು ಇಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡವರು ಮಾಡಿದ ಶಪಥ.
ಬಾಲ್ಯವಿವಾಹ ಕುರಿತಾಗಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲಿನ ಮಕ್ಕಳಿಗೆ ಅರಿವು ಕಾರ್ಯಕ್ರವನ್ನು ಮಾಡುವುದು ಅವಶ್ಯಕ ಎಂದು ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ಹೇಳಿದರು.
ಮಂಗಳವಾರ ಪಟ್ಟಣದ ಗುರುಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ತುಮಕೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಸಹಾಯವಾಣಿ-1098, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಾಂತ್ವನ ಕೇಂದ್ರ ಪಾವಗಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತಾಲ್ಲೂಕು ಪಂಚಾಯಿತಿ ಪಾವಗಡ ಮತ್ತು ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾವಗಡ ಇವರುಗಳ ಸಹಭಾಗಿತ್ವದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಯುವ ಜನಾಂಗದಲ್ಲಿ ಅರಿವು ಮೂಡಿಸಲು ತಾಲೂಕು ಮಟ್ಟದ ಯುವಮೇಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಜ್ಞಾವಿಧಿ ಸ್ವೀಕಾರ: ಭಾರತದ ಪ್ರಜೆಯಾದ ನಾನು ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗಿ ಅವರ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ತಿಳಿದಿರುವುದರಿಂದ ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ಬದ್ದನಾಗಿದ್ದೇನೆ/ಳಾಗಿದ್ದೇನೆ.
ನನ್ನ ವೈಯಕ್ತಿಕ ನೆಲೆಯಿಂದ ಮತ್ತು ಸಮಾಜದಲ್ಲಿನ ನನ್ನ ಸ್ಥಾನ ಮಾನದ ನೆಲೆಯಿಂದ ನನ್ನ ಕುಟುಂಬದಲ್ಲಿ ಬಂಧು ಬಳಗದಲ್ಲಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ನಾನು ಬಾಲ್ಯ ವಿವಾಹಗಳನ್ನು ವಿರೋಧಿಸುತ್ತೇನೆ.
18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ನಡೆಸುವ ಸಾಧ್ಯತೆ ಕಂಡು ಬಂದಲ್ಲಿ ಅದನ್ನು ತಡೆಯುತ್ತೇನೆ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಪೊಲೀಸರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಚೈಲ್ಡ್ ಲೈನ್ 1098 ಗೆ ಮಾಹಿತಿ ನೀಡುತ್ತೇನೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ವಾಗಿರುವುದರಿಂದ ನಮ್ಮ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ದಿಸೆಯಲ್ಲಿ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆಂದು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ ಎಂದು ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ಅವರು ಪ್ರಮಾಣ ವಚನವನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಧನಲಕ್ಷ್ಮಿ,ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಟಿ ಹೆಚ್ ಓ ತಿರುಪತಯ್ಯ, ಸಿಪಿಐ ಅಜಯ್ ಸಾರಥಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೈಯದ್ ರಿಕೀಮ್, ಇಲಾಖೆಯ ಮೇಲ್ವಿಚಾರಕೀಯರುಗಳಾದ ಭಾಗ್ಯಲಕ್ಷ್ಮಿ, ವಿಜಯಲಕ್ಷ್ಮಿ, ಜಯಲಕ್ಷ್ಮಿ, ಮಮತಾ, ಸುಧಾ, ಸೇರಿದಂತೆ ಶಾಲಾ ಕಾಲೇಜುನ ಮಕ್ಕಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾವಗಡ ಗುರುಭವನದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬಾಲ್ಯ ವಿವಾಹ ವಿವಾಹ ನಿಷೇಧ ಕುರಿತು ಯುವ ಜನಾಂಗದಲ್ಲಿ ಅರಿವು ಮೂಡಿಸಲು ತಾಲೂಕು ಮಟ್ಟದ ಯುವಮೇಳ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ
ವರದಿ :ಕುಮಾರ ನಾಗಲಾಪುರ