ಅಮ್ಮಂದಿರು ಸಾಯುವುದಿಲ್ಲ. ಪ್ರತಿ ದಿನ
ನೆನಪಾಗುತ್ತಾರೆ ಅವರ ಜೀವನೋತ್ಸಾಹದ
ಬದುಕಿನಿಂದ. ಅವರ ಬದುಕಿನ ಹೋರಾಟದಿಂದ,
ತಿನ್ನಿಸಿದ ಕೈ ತುತ್ತಿನಿಂದ, ಕಲಾತ್ಮಕತೆಯಿಂದ,
ಕಕ್ಕುಲತೆ ಇಂದ. ಯಾಂತ್ರಿಕ ಬದುಕು ಸರಳ ಸಂತೋಷದ ಅಮ್ಮಂದಿರನ್ನು ಕಿತ್ತುಕೊಂಡಿದೆ ಅನಿಸುತ್ತಿದೆ. ಹಾಗಾಗದಿರಲಿ.
ಪ್ರತಿ ಮಗುವಿಗೂ ಅಮ್ಮನ ಭಾಗ್ಯ ದೊರಕಲಿ
ಎಂಬ ಮಾರ್ಮಿಕ ಬೇಡಿಕೆಯನ್ನು ದೇವರಿಗೆ
ಮೊರೆಯಿಟ್ಟಿದ್ದಾರೆ ಮಕ್ಕಳ ತಜ್ಞೆ, ಕವಯಿತ್ರಿ
ಡಾ. ರಜನಿ ಎಂ
ತಾಯಿಗೆ ದಿನವೆಂಬುದಿಲ್ಲ…
ಮಗು ನಗುತ್ತಾ ಇದ್ದ ದಿನವೇ
ತಾಯಂದಿರ ದಿನ.
ಅಮ್ಮಾ
ನೀನು ಸತ್ತು
ಹೋಗಿದ್ದೀಯಾ
ಎಂದು ನನಗೆ ಗೊತ್ತೆ ಇಲ್ಲಾ…
ನಿನ್ನೆ ಮೊನ್ನೆ ನಡೆದ
ಘಟನೆಗಳ ನೆನಪಲ್ಲಿ
ನಿನ್ನನ್ನು ಸೇರಿಸಿಯೇ
ನನ್ನ ಮೆದುಳು ಲೆಕ್ಕಾಚಾರ
ಹಾಕಿದೆ…
ಅರೇ
ಏನಾದರೂ
ತಪ್ಪು ಮಾಡುವಾಗ
ನೀನು ಬೈಯ್ಯುತ್ತಿಯಾ ….
ಎಂದು
ಅನಿಸುತ್ತಿರುತ್ತದೆ.
ಒಬ್ಬಟ್ಟು
ಅಂಚಿಗೆ ಕಣಕ
ಮೆತ್ತದಂತೆ
ನಿನ್ನಂತೆ
ಯಾರೂ
ಒಬ್ಬಟ್ಟು ಮಾಡಿಲ್ಲ.
ರಂಗೋಲಿ
ನಿನ್ನ
ಎರಡೆಳೆ
ನಕ್ಷತ್ರ ರಂಗೋಲಿ
ನಿನಗಿದ್ದ ಕೆಲಸದ
ಒತ್ತಡದ ಸಂಕೇತ.
ಭಯ
ನಿನ್ನ
ಸಿಂಡರಿಸಿದ
ಮುಖ ನೋಡುವ
ಭಯ…
ನನಗೆ ಬೇರೆ
ಯಾವುದಕ್ಕೂ ಇಲ್ಲ.
ಮೆಣಸಿನ ಸಾರು
ಯಾವ ಮಾತ್ರೆಗೂ
ಜ್ವರ ಬಿಡಿಸುವ
ಶಕ್ತಿ
ನಿನ್ನ ಮೆಣಸಿನ
ಸಾರಿನಷ್ಟು ಇಲ್ಲ.
ಶರಶಯ್ಯೆ
ಡಯಾಲಿಸಿಸ್
ಮಾಡುವಾಗ
ನಿನ್ನ ಸ್ಥಿತ ಪ್ರಜ್ಞೆ
ಆ ಶರಶಯ್ಯೆಯ
ಭೀಷ್ಮ.
ಸಡ್ಡು
ಸವಾಲುಗಳಿಗೆ
ಸಡ್ಡು
ಹೊಡೆಯುವುದನ್ನು
ಕಲಿಸಿದ್ದು
ನೀನೆ.
ಕ್ಲಿಯೋಪಾತ್ರ
ನೀನು ಹೊಲಿಸಿದ್ಧ ಕೆಂಪು
‘ಕ್ಲಿಯೋಪಾತ್ರ’ ಬಟ್ಟೆಯಫ್ರಾಕು …
ಇಟ್ಟ ಕಣ್ಣು ಕಪ್ಪು..
ಹೃದಯದ ಡಾಲರ್
ಸರ…
ಹೇಳುತ್ತದೆ…
ಓ ದೇವರೆ
ಅಮ್ಮ ಇಲ್ಲದ
ಮಕ್ಕಳು
ಎಷ್ಟು
ನತದೃಷ್ಟ ರೆಂದು…
ಅಮ್ಮ
ಇಲ್ಲದವರಿಗೆ
ಯಾರಾದರೂ
ಅಮ್ಮ
ಸಿಗಲಿ🙏
ಡಾ. ರಜನಿ
ಅಮ್ಮನ ನೆನಪಲ್ಲಿ ….