Tuesday, April 23, 2024
Google search engine
Homeಪುಸ್ತಕ ಬಿಡುಗಡೆಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆ ಕಳೆದುಕೊಂಡಿದ್ದೇವೆ: ಕೆ ರಾಮಯ್ಯ ವಿಷಾದ

ಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆ ಕಳೆದುಕೊಂಡಿದ್ದೇವೆ: ಕೆ ರಾಮಯ್ಯ ವಿಷಾದ

‘ಬಹುರೂಪಿ’ಯ 10 ಮಕ್ಕಳ ಕೃತಿಗಳ ಬಿಡುಗಡೆ

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅನ್ಯಾಯ ಮತ್ತು ತಾರತಮ್ಯಗಳು ಅಡಕವಾಗಿವೆ. ಮಕ್ಕಳಿಗೆ ಶಿಕ್ಷಣ ನೀಡುವ ನೈತಿಕತೆಯೇ ನಮಗೆ ಇಲ್ಲವಾಗಿದೆ. ಹೀಗಿರುವಾಗ ಮಕ್ಕಳಿಗೆ ಯಾವ ರೀತಿಯ ನೀತಿ ಶಿಕ್ಷಣ ನೀಡಲು ಸಾಧ್ಯವಿದೆ. ವಾಸ್ತವದಲ್ಲಿ ಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆಯನ್ನೇ ನಾವು ಕಳೆದುಕೊಂಡಿದ್ದೇವೆ ಎಂದು ಹಿರಿಯ ಲೇಖಕ, ‘ಆದಿಮ’ದ ಸಂಸ್ಥಾಪಕರಾದ ಕೋಟಗಾನಹಳ್ಳಿ ರಾಮಯ್ಯ ವಿಷಾದಿಸಿದರು.

‘ಬಹುರೂಪಿ’ ಪ್ರಕಾಶನ ಬೆಂಗಳೂರಿನಲ್ಲಿ ಇಂದು ಪರಾಗ್, ಪರಿ, ಕರಡಿ ಟೇಲ್ಸ್, ಕಲ್ಪವೃಕ್ಷ, ಏಕತಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 10 ಮಕ್ಕಳ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ ಪಠ್ಯ ಪುಸ್ತಕಗಳು, ಕಥೆ ಪುಸ್ತಕಗಳ ಮೂಲಕ ಬಹು ಹಿಂದಿನಿಂದಲೂ ಮೈಕ್ರೋ ಫ್ಯಾಸಿಸಂ ಅನ್ನು ಬಿತ್ತಲಾಗುತ್ತಿದೆ. ಆದನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ

ಮಕ್ಕಳು ಏನು ಓದಬೇಕು, ಏನನ್ನು ಓದಬಾರದು ಎಂಬುದನ್ನು ತೀರ್ಮಾನಿಸುವವರು ಯಾರು? ಇಂಥ ತೀರ್ಮಾನ ಕೈಗೊಳ್ಳಲು ನಮಗೆ ಅರ್ಹತೆ ಇದೆಯೇ? ಈ ಬಗ್ಗೆ ಮಕ್ಕಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದೆಯೇ ಎಂಬ ಸಂಕೀರ್ಣ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಖ್ಯಾತ ಗಾಯಕಿ ಎಂ ಡಿ ಪಲ್ಲವಿ ಅವರು ಮಾತನಾಡಿ ಮಕ್ಕಳ ಎಳೆ ಮನಸ್ಸಿನಲ್ಲಿ ಜಾತಿ, ಬಡವ, ಶ್ರೀಮಂತ ಇತ್ಯಾದಿ ಭೇದಭಾವಗಳು ಯಾವುದೂ ಇರುವುದಿಲ್ಲ. ಆದರೆ, ಮಕ್ಕಳನ್ನು ಬೆಳೆಸುವ ಹಾದಿಯಲ್ಲಿ ಈ ರೀತಿಯ ತಾರತಮ್ಯ ಮೂಡಿಸುತ್ತಿದ್ದೇವೆ. ಅವರ ಮನಸ್ಸನ್ನು ಸಂಕೀರ್ಣಗೊಳಿಸುವ ಬದಲು ಹಿಗ್ಗಿಸಲು ಪ್ರಯತ್ನಿಸಿದಾಗ ಉತ್ತಮ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಭಾಷೆಯಲ್ಲಿ ಮಕ್ಕಳ ಪುಸ್ತಕಗಳು ತುಂಬಾ ಕಡಿಮೆ ಇವೆ. ಈ ವಿಷಯದಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಹಾಗಾಗಿ, ಬರವಣಿಗೆ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುವ ಆಸೆ ಇರುವುದಾಗಿ ಹೇಳಿದರು.

ಮಕ್ಕಳ ಪುಸ್ತಕಗಳನ್ನು ಹೇಗೋ ರೂಪಿಸಬಹುದು. ಆದರೆ, ಅವುಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಹಲವಾರು ಅಡೆತಡೆಗಳು ಸೃಷ್ಟಿಯಾಗಿವೆ. ಒಂದೆಡೆ ಶಾಲೆಗಳೇ ಕಣ್ಮರೆಯಾಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಮಕ್ಕಳೇ ಕಣ್ಮರೆಯಾಗುತ್ತಿದ್ದಾರೆ ಎಂದು ವಿಜ್ಞಾನ ಬರಹಗಾರರಾದ ನಾಗೇಶ ಹೆಗಡೆ ಅವರು ಅಭಿಪ್ರಾಯಪಟ್ಟರು.

ಮಕ್ಕಳ ಪುಸ್ತಕಗಳನ್ನು ಮಕ್ಕಳಿಗೆ ತಲುಪಿಸುವ ನಿಟ್ಟಿನಲ್ಲಿ ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರ ಸೇರಿದಂತೆ ಸರ್ಕಾರದ ಸಂಸ್ಥೆಗಳು ಕೆಲಸ ಮಾಡಬೇಕಿತ್ತು. ಆದರೆ, ಈ ವಿಷಯದಲ್ಲಿ ಅವೆಲ್ಲವೂ ವಿಫಲವಾಗಿವೆ ಎಂದರು

ಬಹುರೂಪಿ ಸಂಸ್ಥೆಯು ಹೊರತಂದಿರುವ 10 ಪುಸ್ತಕಗಳು ಮಕ್ಕಳಿಗೆ ವಾಸ್ತವತೆಯ ಕಥೆಯನ್ನು ಹೇಳುತ್ತಲೇ ಅವರಿಗೆ ಹೊಸ ಜಗತ್ತಿಗೆ ಪ್ರವೇಶ ಕಲ್ಪಿಸುತ್ತದೆ. ಸಾಮಾಜಿಕ ವರದಿಗಳಿಗೆ ಕಲ್ಪನೆ ಬೆರೆಸಿ ಕಥೆಗಳ ರೂಪವನ್ನು ನೀಡಲಾಗಿದೆ. ಇದೊಂದು ಮಹತ್ವದ ಕೆಲಸ ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಾಹಿತ್ಯಕ್ಕೆ ಸಮಕಾಲೀನ ಸ್ಪರ್ಶ: ಅನುವಾದದ ಮಹತ್ವ ಕುರಿತು ಸಂವಾದ ಜರುಗಿತು. ಮಕ್ಕಳ ಹಕ್ಕುಗಳ ಟ್ರಸ್ಟ್ ನ ವಾಸುದೇವ ಶರ್ಮಾ, ನಾಗೇಶ್ ಹೆಗಡೆ, ಕಲಾವಿದ ಗುಜ್ಜಾರ್, ಶಿಕ್ಷಣ ತಜ್ಞರಾದ ವೀಣಾ ಮೋಹನ್, ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ‘ಪರಿ’ಯ ಪ್ರೀತಿ ಡೇವಿಡ್ ಅವರು ಸಂವಾದದಲ್ಲಿದ್ದರು

ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್, ಪರಾಗ್ ನ ಲಕ್ಷ್ಮಿ ಕರುಣಾಕರನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಹುರೂಪಿ ಪ್ರಕಾಶನ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳ 10 ಕೃತಿಗಳನ್ನು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರು ಬಿಡುಗಡೆ ಮಾಡಿದರು. ಹಿರಿಯ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಗಾಯಕಿ ಎಂ ಡಿ ಪಲ್ಲವಿ, ಸಾಹಿತಿ ವಿ ಗಾಯತ್ರಿ, ಪರಾಗ್ ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಜಿ ಎನ್ ಮೋಹನ್, ಶ್ರೀಜಾ ವಿ ಎನ್ ಉಪಸ್ಥಿತರಿದ್ದರು.

ಬಿಡುಗಡೆಯಾದ ಕೃತಿಗಳು:

ಈ ಪಿಕ್ ಯಾರ ಕ್ಲಿಕ್ ಬೆಲೆ: ರೂ 160
ಸೀರೆ ಉಡುವ ರಾಕ್ ಸ್ಟಾರ್ ಬೆಲೆ: ರೂ 160
ಲೇಡಿ ಟಾರ್ಜಾನ್ ಬೆಲೆ: ರೂ 120
ಮರ ಏರಲಾಗದ ಗುಮ್ಮ ಬೆಲೆ: ರೂ 160
ಸುಂದರಬಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ ಬೆಲೆ: ರೂ 140
ಮರಳಿ ಮನೆಗೆ ಬೆಲೆ: ರೂ 125
ಟಿಕೆಟ್ ಇಲ್ಲ, ಪ್ರಯಾಣ ನಿಲ್ಲಲ್ಲ ಬೆಲೆ: ರೂ 125
ಸ್ನೇಹಗ್ರಾಮದ ಸಂಸತ್ತು ಬೆಲೆ: ರೂ 150
ನಂದಿನಿ ಎಂಬ ಜಾಣೆ ಬೆಲೆ: ರೂ 150
ಗೆದ್ದೇ ಬಿಟ್ಟೆ! ಬೆಲೆ: ರೂ 125

ಸಂಪರ್ಕ: 70191 82729

.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?