Publicstory
ತುರುವೇಕೆರೆ: ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಸಂಕಷ್ಟದಲ್ಲಿರುವ ಕಡು ಬಡವರ ಚಿಕಿತ್ಸಾ ವೆಚ್ಚದ ಸಹಾಯವನ್ನೂ ಮಾಡಲು ಸಿದ್ದನಿದ್ದೇನೆಂದು ಶಾಸಕ ಮಸಾಲಜಯರಾಂ ಹೇಳಿದರು.
ಪಟ್ಟಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗು ವಾಕ್ಸಿನ್ ತೆಗೆದುಕೊಳ್ಳಲು ಸ್ವ-ಇಚ್ಛೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರು ಮುಖ ಕಾಣುತ್ತಿರುವುದರಿಂದ ತಾಲ್ಲೂಕಿನಾದ್ಯಂತ ಈಗಾಗಲೇ ಅತಿ ಅಗತ್ಯವಾದ ಅಂಗಡಿಗಳನ್ನು ಹೊರತು ಪಡಿಸಿ ಇನ್ನುಳಿದ ಅಂಗಡಿ ಮುಂಗಟ್ಟುಗಳನ್ನು ಮೇ.4 ವರೆಗೆ ಬಂದ್ ಮಾಡಲಾಗಿದೆ.
ಸರ್ಕಾರ ವಾರಾಂತ್ಯದ ಕರ್ಪ್ಯೂ ವಿದಿಸಿದ್ದು ಅದಕ್ಕೆ ಕ್ಷೇತ್ರದ ಜನರು ಮನೆಯಲ್ಲಿಯೇ ಇರುವ ಮೂಲಕ ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಹಾಸಿಗೆಗಳು ಭರ್ತಿಯಾಗಿದ್ದು ಮುಂಜಾಗ್ರತೆಯಾಗಿ ಗುಡ್ಡೇನಹಳ್ಳಿ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ನೂರಕ್ಕೂ ಹೆಚ್ಚಿನ ಆಸನದ ವ್ಯವಸ್ಥೆಯುಳ್ಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಅದೂ ಸಾಲದಿದ್ದರೆ ಪಟ್ಟಣದಲ್ಲಿನ ಮತ್ತೊಂದು ಹಾಸ್ಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು. ಇಲ್ಲಿನ ರೋಗಿಗಳಿಗೆ ಔಷಧಿಗಳು ಮತ್ತು ಆಕ್ಸಿಜನ್ ಪೂರೈಸಲು ಆರೋಗ್ಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು ಅದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಒಂದು ವೇಳೆ ರೋಗಿಗಳಿಗೆ ಆಮ್ಲಜನಕದ ಸಮಸ್ಯೆ ತಲೆದೋರಿದರೆ ಅದಕ್ಕೆ ಪೂರ್ವಭಾವಿಯಾಗಿ ಖಾಸಗಿ ಆಕ್ಸಿಜನ್ ಕಂಪನಿಯೊಂದದಿಗೆ ಮಾತುಕತೆ ನಡೆಸಿದ್ದು ಅಗತ್ಯ ಬಿದ್ದರೆ ಸ್ವಂತ ಖರ್ಚಿನಿಂದ ಆಮ್ಲಜನಕ ಖರೀದಿಸುವೆ. ಜನರು ಹೆದರಬಾರದು ಎಂದು ಹೇಳಿದರು.
ಸೋಮವಾರ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದು, ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ವಿ.ಬಿ.ಸುರೇಶ್, ದಿನೇಶ್, ಸುರೇಶ್, ಮಂಜಣ್ಣ ಇದ್ದರು.