ತುಮಕೂರು: ಅಂಕೆಗೆ ಸಿಗದಂತೆ ನಾಗಾಲೋಟದಲ್ಲಿ ಓಡುತ್ತಿರುವ ಸೋಂಕಿನ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಹೊಸ ರೂಲ್ಸ್ ಇಂದಿನಿಂದ ಜಾರಿಗೆ ಬಂದಿದೆ.
ಇಂದಿನಿಂದ ಎಲ್ಲೆಂದರಲ್ಲಿ ಸೋಂಕಿತರನ್ನು ಪತ್ತೆ ಹಚ್ಚಲು ನಡೆಸುತ್ತಿದ್ದ ರಾಂಡಮ್ ಪರೀಕ್ಷೆ ನಡೆಸಿದಿರುವಂತೆ ರಾಜ್ಯ ಸರ್ಕಾರ ಆದೇಶಿಸಿ ಸುತ್ತೋಲೆ ಹೊರಡಿಸಿದೆ.
ಸೋಂಕು ಪತ್ತೆ ಹಚ್ಚಲು ಬಸ್ ನಿಲ್ದಾಣಗಳು, ಮನೆಗಳಿಗೆ ತೆರಳಿ ಜನರು ಕೇಳಲಿ, ಬಿಡಲಿ ಅವರನ್ನು ಪರೀಕ್ಷೆಗೆ ಒಳಪಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು.
ಇದೇ ಕಾರಣದಿಂದ ಪರೀಕ್ಷೆಯ ವರದಿ ವಿಳಂಬವಾಗುತ್ತಿತ್ತು. ಇದು ರೋಗಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ರೋಗ ವಾಸಿಯಾದರೂ ಪರೀಕ್ಷಾ ವರದಿ ಬರುವುದಿಲ್ಲ ಎಂಬಂತಾಗಿತ್ತು.
ಇದರಿಂದ ಹೆಚ್ಚೆತ್ತುಕೊಂಡಿರುವ ಸರ್ಕಾರ, ತಜ್ಞರ ವರದಿಯಂತೆ ಇನ್ನು ಮುಂದೆ ರೋಗ ಲಕ್ಷಣಗಳಿರುವವರು, ಸೋಂಕಿತ ವ್ಯಕ್ತಿಗಳ ಮನೆಯ ಸದಸ್ಯರು, ಅವರ ನೇರ ಸಂಪರ್ಕಕ್ಕೆ ಬಂದವರನ್ನು ಮಾತ್ರವೇ ಪರೀಕ್ಷೆ ನಡೆಸಬೇಕೆಂದು ಸೂಚಿಸಿದೆ.
ಇದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಕಮ್ಮಿಯಾಗಲಿದ್ದು, ಒಂದೇ ದಿನದಲ್ಲಿ ವರದಿ ನೀಡಬಹುದಾಗಿದೆ. ಇದು ರೋಗ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.