Public story
ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಇದೇ 16ರಂದು ಬೆಂಗಳೂರಿಗೆ ಬರುತ್ತಿರುವ ಪಕ್ಷದ ರಾಜ್ಯ ಉಸ್ತುವಾರಿ “ಅರುಣ್ ಸಿಂಗ್ ಗೋ ಬ್ಯಾಕ್” ಚಳವಳಿ ನಡೆಸಲು ಬಿಜೆಪಿ ಪಕ್ಷನಿಷ್ಠರ ಗುಂಪು ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದುರಾಡಳಿತದ ವಿರುದ್ಧ ಧ್ವನಿ ಎತ್ತಿರುವ ಈ ಪಕ್ಷ ನಿಷ್ಠರ ಗುಂಪಿನಲ್ಲಿ ಪ್ರಮುಖವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಕಾರ್ಕಳ ಶಾಸಕರೂ ಆದ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ಇನ್ನೂ ಕೆಲವು ಪ್ರಮುಖರು ಇದ್ದಾರೆ. ಇವರೆಲ್ಲಾ ಅರುಣ್ ಸಿಂಗ್ 16ರಂದು ಬೆಂಗಳೂರಿಗೆ ಬಂದ ನಂತರ ನಡೆಸಲಿರುವ ಮಂತ್ರಿಮಂಡಲ ಸಭೆಯನ್ನು ಬಹಿಷ್ಕರಿಸುವಂತೆ ಕರೆ ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಅರುಣ್ ಸಿಂಗ್ ಅವರು ಮಂತ್ರಿಮಂಡಲದ ಸಭೆ ನಡೆಸುವುದಕ್ಕೂ ಮೊದಲು ಶಾಸಕರ ಸಭೆ ನಡೆಸಿ ಶಾಸಕರ ಅಭಿಪ್ರಾಯ ಪಡೆದ ನಂತರವೇ ಸಚಿವರ ಸಭೆ ನಡೆಸಬೇಕು ಎಂದು ಪಟ್ಟು ಹಿಡಿಯಲು ಎಲ್ಲ ಪಕ್ಷನಿಷ್ಠರು ತೆರೆಯ ಮರೆಯಲ್ಲಿ ಸಿದ್ಧತೆ ನಡೆಸಿದ್ದು ಕೆಲವರು ಆಜ್ಞಾತ ಸ್ಥಳದಲ್ಲಿ ಗುಟ್ಟಾಗಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
“ಸಚಿವರ ಸಭೆ ನಡೆಸುವುದಕ್ಕೂ ಮೊದಲು ಶಾಸಕರ ಅಭಿಪ್ರಾಯವನ್ನು ಪಡೆಯಬೇಕು. ಯಾಕೆಂದರೆ ಸಚಿವರು ಎಲ್ಲಾ ತೃಪ್ತಿಕರವಾಗಿ ನಡೆಯುತ್ತಿದೆ ಎಂದು ಹೇಳಿಬಿಟ್ಟರೆ ಅರುಣ್ ಸಿಂಗ್,
ಶಾಸಕರ ಜೊತೆ ಚರ್ಚೆಯನ್ನೇ ನಡೆಸದೆ ದೆಹಲಿಗೆ ತೆರಳಿ ಎಲ್ಲಾ ಸರಿ ಇದೆ ಎಂಬ ವರದಿ ಕೊಟ್ಟು ಬಿಡುತ್ತಾರೆ” ಎಂಬ ಆತಂಕವಿದೆ ಎಂದು ಹೆಸರು ಹೇಳಲು ಇಚ್ಛಿಸದ ಶಾಸಕರೊಬ್ಬರು ವಿವರಿಸಿದ್ದಾರೆ.
ಭಿನ್ನ ಶಾಸಕರು ಅರುಣ್ ಸಿಂಗ್ ಅವರಿಗೆ ಏನು ಕೇಳಲಿದ್ದಾರೆ ಮತ್ತು ಹೇಳಲಿದ್ದಾರೆ?
* ನೀವು ಬಂದ ತಕ್ಷಣ ನೇರವಾಗಿ ಮಂತ್ರಿಗಳ ಸಭೆ ಕರೆಯಬಾರದು.
* ಅದಕ್ಕೂ ಮೊದಲು ಎಲ್ಲ ಶಾಸಕರ ಸಭೆ ನಡೆಸಬೇಕು.
* ಶಾಸಕರ ಸಭೆಯಲ್ಲಿ ನೀವು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಅವು ಯಾವುವೆಂದರೆ:
+ ಯಡಿಯೂರಪ್ಪ ಅವರೇ ಇನ್ನೂ ಎರಡು ವರ್ಷ ಸಿ.ಎಂ ಆಗಿ ಮುಂದುವರೆಯತ್ತಾರೆ ಎಂದು ನೀವು ಇತ್ತೀಚೆಗೆ ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಂತೆ ನಿಮಗೆ ಅಧಿಕಾರ ಕೊಟ್ಟವರು ಯಾರು?
+ ಒಂದು ವೇಳೆ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದಾದರೆ ಈಗ ನೀವು ಇಲ್ಲಿಗೆ ಯಾಕೆ ಬಂದಿರಿ?
+ ಬಹುತೇಕ ಶಾಸಕರು ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಡಿಯೂರಪ್ಪ ಅವರನ್ನೇ ಮುಂದುವರೆಸಿದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆಯನ್ನು ನೀವು ಹೊರಲು ಸಿದ್ಧರಿದ್ದೀರಾ?
+ ಯಡಿಯೂರಪ್ಪನವರ ಕುರಿತಾದ್ದು ಎನ್ನಲಾದ ಸಿ.ಡಿಯನ್ನು ನೀವು ಈಗಾಗಲೇ ನೋಡಿದ್ದೀರಿ ಎಂದು ನಮಗೆ ತಿಳಿದು ಬಂದಿದೆ. ಆ ಅಶ್ಲೀಲ ಸಿಡಿಯನ್ನು ವೀಕ್ಷಿಸಿದ ಬಳಿಕವೂ ನೀವು ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯನ್ನು ಈತನಕ ಯಾಕೆ ಪಡೆದಿಲ್ಲ. ಈ ಸಿಡಿ ಪಕ್ಷಕ್ಕೆ ಮುಜುಗರ ತರುವಂತಿಲ್ಲವೇ? ಇದು
ನಿಮ್ಮ ಕರ್ತವ್ಯ ಲೋಪ ಆಗುವುದಿಲ್ಲವೇ?
+ ಅಥವಾ ನೀವು ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು ಒಡ್ಡಿರುವ ಯಾವುದಾದರೂ ಆಮಿಷಗಳಿಗೆ ಬಲಿಯಾಗಿದ್ದೀರಾ ಎಂಬ ಬಲವಾದ ಅನುಮಾನ ನಮ್ಮನ್ನು ಕಾಡುತ್ತಿದೆ.
+ ನಮ್ಮ ಈ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಸಮಜಾಯಿಷಿ ನೀಡಬೇಕು. ಈ ಸರ್ಕಾರದ ವ್ಯಭಿಚಾರ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, 20 ಪರ್ಸೆಂಟ್ ಕಮಿಷನ್, ಕಾಂಗ್ರೆಸ್ನ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀವು ಪರೋಕ್ಷವಾಗಿ ಮಾಡುತ್ತಿರುವ ನೆರವು, ಸಹಕಾರಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸುತ್ತಿರುವ ಎಲ್ಲ ಶಾಸಕರನ್ನು ಸಮಾಧಾನಪಡಿಸಿದ ಬಳಿಕವೇ ಮುಂದಿನ ಸಭೆ ನಡೆಸಿ ದೆಹಲಿ ವರಿಷ್ಠರಿಗೆ ಪ್ರಾಮಾಣಿಕವಾದ ಮತ್ತು ವಸ್ತುನಿಷ್ಠ ವರದಿ ಸಲ್ಲಿಸಬೇಕು. ಇಲ್ಲವಾದರೆ ನೀವು ವಾಪಸ್ ತೆರಳಿ ಎಂದು “ಗೋ ಬ್ಯಾಕ್ ಚಳವಳಿ” ನಡೆಸುತ್ತೇವೆ ಶಾಸಕರೊಬ್ಬರು ಪಬ್ಲಿಕ್ ಸ್ಟೋರಿಗೆ ತಿಳಿಸಿದರು.