Tuesday, December 3, 2024
Google search engine
Homeಸಣ್ಣಕಥೆವೈದ್ಯ ಜಗತ್ತಿಗೆ ಸವಾಲು ಒಡ್ಡಿದ ಮಲೆನಾಡಿನ ರೋಗ

ವೈದ್ಯ ಜಗತ್ತಿಗೆ ಸವಾಲು ಒಡ್ಡಿದ ಮಲೆನಾಡಿನ ರೋಗ

ಇಂಟ್ರೋ: ವೈದ್ಯಕೀಯ ವಿಜ್ಞಾನ ಮತ್ತು ಔಷಧ ವಿಜ್ಞಾನಗಳು ಕೋರೊನಾದ ಮುಂದಷ್ಟೇ ಕೈ ಕಟ್ಟಿ ಕುಳಿತಿಲ್ಲ. ಹಂದಿಗೋಡಿನ ಎದುರೂ ಮಂಡಿಯೂರಿ ಕುಳಿತಿವೆ. ಮಲೆನಾಡಿನ ಕ್ಯಾಸನೂರು ಕಾಡಿನ ಕಾಯಿಲೆ ಕೂಡ ಇದಕ್ಕೆ ಹೊರತಾಗಿಲ್ಲ. ಮಂಗನಿಂದ ಮಾನವ ಎನ್ನುವುದಕ್ಕೆ ವ್ಯತಿರಿಕ್ತ ಎಂಬಂತೆ ಕ್ಯಾಸನೂರು ಕಾಯಿಲೆಯ ಮೂಲ ಮಂಗ. ಇದು ಕೋವಿಡ್‌ಗಿಂತ ಭೀಕರವಾಗಿ ಮಲೆನಾಡಿಗರನ್ನು ಬಾಧಿಸಿದೆ. ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಶಿವಮೊಗ್ಗ ಜಿಲ್ಲೆ ದೇಶದ ಇತಿಹಾಸಕ್ಕೆ ಏನೆಲ್ಲ ಕಾಣಿಕೆಯನ್ನು ನೀಡಿದೆ. ಆ ಕೀರ್ತಿಗೆ ಕ್ಯಾಸನೂರು ಮತ್ತು ಹಂದಿಗೋಡು ಅಪಕೀರ್ತಿ. ಮಲೆನಾಡಿನ ಹಚ್ಚ ಹಸಿರಿನ ಸೆರಗಿನಲ್ಲಿ ಕೆಂಡದುಂಡೆಯಾಗಿ ಸುಡುತ್ತಲೇ ಇವೆ. ನಾಲ್ಕು ದಶಕದಿಂದ ಸಾಮಾಜಿಕವಾಗಿ ಹಿಂದುಳಿದ ಜಾತಿ –ಸಮುದಾಯದವರ ಜೀವವನ್ನು ಹಿಂಡಿ ಹಿಪ್ಪೆ ಮಾಡಿರುವ ಹಂದಿಗೋಡು ರೋಗದ ಭೀಕರತೆಯ ಕರಾಳ ನೋಟವಿದು..
–ತ್ಯಾಗಟೂರು ಸಿದ್ದೇಶ್‌

ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ… ಎಂಬ ಕುವೆಂಪುವರ ಪದ್ಯವನ್ನು ಕೇಳಿದ ತಕ್ಷಣ ಮನಸು ಪುಳಕಿತವಾಗುತ್ತದೆ. ನಿಸರ್ಗ ರಮಣೀಯ ಪರ್ವತ ಶ್ರೇಣಿ ನೋಡಿದ ಕ್ಷಣ ಅದು ನೀಡುವ ಆಹ್ಲಾದದ ಆನಂದ ನಮ್ಮ ಹೃದಯ ಮನಸುಗಳಿಗೆ ತಂಪನ್ನು ಎರೆಯುವಂತೆಯೇ ಕುವೆಂಪು ಕವಿತೆಯೂ. ಮಲೆ ಪರ್ವತಗಳ ಮಳೆ ಕಾಡಿನ ಮಡಿಲು ದೇಶದ ಅನೇಕ ಜನಪರ ಚಳವಳಿಗೆ ಒಡಲು ನೀಡಿದ ಕರ್ಮಭೂಮಿ. ಕಲೆ– ಸಾಹಿತ್ಯದ ಪರಂಪರೆಗೆ ಮುಂಚೂಣಿಯ ಮಿಂಚಿನ ಹೊಳೆಯ ತೂಗು ಉಯ್ಯಾಲೆಯನ್ನು ಹರಿಸಿದ ತುಂಗೆಯೂ ಹೌದು. ಅಂತಹ ಮಣ್ಣಿನಲ್ಲಿಯೇ ಜನರನ್ನು ನಿರಂತರ ಬಾಧಿಸುವ ನಂಜಿನ ಕುಳಿಗಳೂ ಇವೆ. ರಾಜ್ಯಕ್ಕೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದ ಈ ಜಿಲ್ಲೆಯ ಒಡಲಿನಲ್ಲಿ ನಾಲ್ಕು ದಶಕದಿಂದಲೂ ಜನರನ್ನು ಕಾಡುತ್ತಿರುವ ಹಂದಿಗೋಡು ಕಾಯಿಲೆಯ ನೋವಿಗೆ ಕರುಣಾಹೀನ ಕಹಾನಿ ಇದು.

ದೊಡ್ಡ ದೊಡ್ಡ ಸಾಹಿತಿ ಚಿಂತಕರನ್ನೂ ನೀಡಿದ ಪುಣ್ಯಭೂಮಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯ ಕಣ್ಣೀರ ಕಥೆ ಇಲ್ಲಿದೆ. ರಮಣೀಯ ನಿಸರ್ಗದ ಸೆರಗಿನಲ್ಲಿ ಭಯಾನಕ ಹಂದಿಗೋಡಿನ ರೌದ್ರಾವತರವೂ ನೆಲೆಗೊಂಡಿದೆ. ಇದು ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಂದಿಗೋಡು ಎಂಬ ಗ್ರಾಮದಿಂದ ಹಬ್ಬಿರುವ ವಿಷಬಳ್ಳಿಯ ವರ್ತುಲದಲ್ಲಿ ಸಿಲುಕಿ ಯಮಯಾತನೆಯನ್ನು ಅನುಭವಿಸುತ್ತಿರುವವರ ನೋವಿಗೆ ಮಿಡಿಯುವ ಪ್ರಯತ್ನ ನಮ್ಮದಾಗಿದೆ.

ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಸಮೀಪದಲ್ಲಿರುವ ಹಂದಿಗೋಡು ಎಂಬ ಗ್ರಾಮದಲ್ಲಿ ಯಾರನ್ನೇ ಸಾವಕಾಶದಿಂದ ಒಂದು ಕ್ಷಣ ನೀವು ಮಾತನಾಡಿಸಿದ್ದೇ ಆದರೆ ಅವರ ಕರುಣಾಜನಕ ಕಥೆ ನಿಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ. ಊರಿನಲ್ಲಿ ಕುಟುಂತ– ತೆವಳುತ್ತಾ ಸಾಗುವವರು ಸಿಗುತ್ತಾರೆ. ಅವರನ್ನು ಕ್ಷಣ ನಿಲ್ಲಿಸಿ ಕೇಳಿದರೆ ದಶಕಗಳ ಕಾಲ ಅವರು ಅನುಭವಿಸುತ್ತಿರುವ ವೇದನೆ ಮನದಟ್ಟಾಗುತ್ತದೆ. ತಮ್ಮ ಆ ಸ್ಥಿತಿಗೆ ತಮ್ಮಷ್ಟಕ್ಕೆ ತಾವೇ ಪಶ್ಚಾತ್ತಾಪದಲ್ಲಿ ಕೊರಗುತ್ತಾರೆ. ಕೆಲವರು ತಮಗೆ ಯಾವ ಜನ್ಮದ ಶಾಪ ತಟ್ಟಿದೆಯೋ ಎಂದು ಕುರುಬುತ್ತಾರೆ. ಈ ಜನರ ನೋವು– ಸಂಕಟ, ಅವಮಾನ– ಅಪಮಾನವನ್ನು ಇಲ್ಲಿ ಹೇಳುವುದಕ್ಕೂ ಸಂಕಟವಾಗುತ್ತಿದೆ.
ಏಕೆಂದರೆ ನಾವಿಲ್ಲಿ ನಿಮಗೆ ಹೇಳುತ್ತಿರುವ ಆ ಸತ್ಯ ಘಟನೆಗಳು ಮಲೆನಾಡಿನ ಈ ಹಂದಿಗೋಡು ಎಂಬ ಗ್ರಾಮದ ಗರ್ಭದಲ್ಲಿ ಹುಟ್ಟಿದ ವಿಚಿತ್ರ ಕಾಯಿಲೆಯಿಂದಲೇ ಬೆಳೆದಿವೆ. ಆ ಕಾರಣಕ್ಕಾಗಿಯೇ ಆ ಕಾಯಿಲೆಗೂ ಆ ಗ್ರಾಮದ ಹೆಸರನ್ನೇ ತಜ್ಞರು ಅಂಟಿಸಿದ್ದಾರೆ. ಅಲ್ಲೊಂದು ಇಲ್ಲೊಂದು ಮನೆ ಇರುವ ಈ ಹಳ್ಳಿಯ ಬಹುತೇಕ ಮನೆಗಳಲ್ಲಿ ಹಂದಿಗೋಡು ಪೀಡಿತರು ಒಬ್ಬರಲ್ಲ ಒಬ್ಬರು ಸಿಗುತ್ತಾರೆ. ಆ ರೋಗ ಹುಟ್ಟಿಸುವ ಕೌತುಕ ಈ ಆಧುನಿಕ ವಿಜ್ಞಾನ ಜಗತ್ತಿಗೆ ಸವಾಲೇ ಸರಿ. ಏಕೆಂದರೆ ಈ ಹಂದಿಗೋಡಿನ ಜಾಡ್ಯ ಸಾಮಾಜಿಕವಾಗಿ ಹಿಂದುಳಿದ ಜಾತಿಗಳ ಕುಟುಂಬಗಳನ್ನಷ್ಟೇ ಜಾಲಾಡಿದೆ. ಇದು ಏಕೆ ಹೀಗಾಗಿದೆ? ಎನ್ನುವುದೂ ಮಲೆನಾಡಿನ ರಮಣೀಯ ವಿಸ್ಮಯದ ಕುತೂಹಲದ ಪ್ರಶ್ನೆಯಷ್ಟೇ ರಹಸ್ಯ.

ವಯಸ್ಸಿನ ತಾರತಮ್ಯ ಇಲ್ಲದೆ ಅನೇಕರು ಇದರ ಬಾಧೆಗೆ ತುತ್ತಾಗಿದ್ದಾರೆ. ಈ ಕಾಯಿಲೆಗೆ ತುತ್ತಾದವರಿಗೆ ಶ್ರಮವಹಿಸಿ ಕೆಲಸ ಮಾಡಲು ಆಗುವುದಿಲ್ಲ. ನಡೆದಾಡಲು ದುಃಸ್ಸಾಹಸ ಪಡಬೇಕು. ಅವರ ದೈಹಿಕ ಬೆಳವಣಿಗೆ ಸ್ಥಗಿತವಾಗಿರುತ್ತದೆ. ಕೈಕಾಲು ಚಿಕ್ಕದಾಗಿ ಕುಬ್ಜರಾಗುತ್ತಾರೆ. ರೋಗ ಕರಾಳತೆ ಹೇಗಿದೆ ಎಂದರೆ ನಿಂತವರು ಕುಳಿತುಕೊಳ್ಳಲು ಆಗದೆ, ನಿಂತವರು ನಡೆದಾಡಲು ಆಗದೆ ಒದ್ದಾಡುತ್ತಾರೆ. ಮಲ ಮೂತ್ರವನ್ನೂ ನಿಂತೇ ಮಾಡಬೇಕಾಗುತ್ತದೆ. ಈತನಕ ಹಂದಿಗೋಡು ರೋಗ ನಿವಾರಣೆಗೆ ಯಾವ ಚಿಕಿತ್ಸೆಯನ್ನು ಕಂಡುಕೊಳ್ಳಲು ಸಾಧ್ಯ ಅಗಿಲ್ಲ. ರೋಗಪೀಡಿತರು ಸಾಯದೇ ಬದುಕಿ ಇರಬೇಕು ಎಂದರೆ ನಿರಂತರವಾಗಿ ಸಮಸ್ಯೆಯ ನಿಯಂತ್ರಣಕ್ಕೆ ಔಷಧೋಪವಚಾರ ಮಾಡಿಕೊಂಡು ರೊಗದ ಜೊತೆ ನರಳುತ್ತಲೇ ಇರಬೇಕು. ಅವರ ಬೆನ್ನ ಹಿಂದೆ ಹೊಂಚು ಹಾಕಿ ಕುಳಿತ ಸಾವಿನ ಹಾದಿ ತಪ್ಪಿಸಿ ಅದಕ್ಕೆ ಒಂದಷ್ಟು ಬಳಸು ಹಾದಿ ಹಿಡಿಸಲು ಅಷ್ಟೇ ಈ ಚಿಕಿತ್ಸೆ ಎಂಬ ಉಪಾಯ.

ಈ ಊರಿನ ಒಂದು ಕೇಸ್‌ ಸ್ಟಡಿ ಒಂದನ್ನು ನೋಡುವುದಾದರೆ, 15 ವರ್ಷದ ಅರುಣಾಕ್ಷಿ (ಹೆಸರು ಬದಲಾಗಿದೆ) ಎಂಬ ಬಾಲಕಿ ಜನ್ಮತಃ ಆರೋಗ್ಯವಾಗಿದ್ದಳು. ಲವಲವಿಕೆಯಿಂದ ಆಡುತ್ತಿದ್ದ ಆಕೆಗೆ ತನ್ನ ಎಂಟನೇ ವಯಸ್ಸಿನಲ್ಲಿ ಮೈ–ಕೈ ನೋವಿನ ಅನುಭವ ಆಗುತ್ತದೆ. ಕೆಲವೇ ದಿನಗಳಲ್ಲಿ ಆಕೆಯ ಕೈ ಕಾಲುಗಳು ಸೆಟೆದುಕೊಳ್ಳುತ್ತವೆ. ನೋಡು ನೋಡುತ್ತಿದ್ದಂತೆ ದೇಹದ ಬೆಳವಣಿಗೆ ಕೂಡ ನಿಂತು ಹೋಗುತ್ತದೆ. ಅರುಣಾಕ್ಷಿಯ ಅಂಗಾಂಗಗಳು ಊನವಾಗುತ್ತವೆ. ಖುಷಿಯಿಂದ ಶಾಲೆಗೆ ಹೋಗಬೇಕಾದ ಬಾಲಕಿಯ ವರ್ಣಮಾಲೆಯ ಕನಸು ಗಗನ ಕುಸುಮವಾಗಿ ಈಗಲೂ ಕಮರುತ್ತಿದೆ. ಆಕೆಯನ್ನು ನೋಡಿದರೆ ಮಾನಸಿಕ ಅಸ್ವಸ್ಥಳಂತೆ ಕಾಣಿತ್ತಾಳೆ ಹಂದಿಗೋಡು ಕಾಯಿಲೆ ಆಕೆಯ ಬಾಳನ್ನು ಸಂಪೂರ್ಣ ಕತ್ತಲೆಗೆ ತಳ್ಳಿದೆ. ಕೂಲಿ ಮಾಡಿ ಬದುಕುತ್ತಿರುವ ಆಕೆಯ ಪೋಷಕರು ಹಾಸಿಗೆ ಹಿಡಿದ ಮಗಳನ್ನು ಸಾಕುವುದರಲ್ಲೇ ತಮ್ಮ ಜೀವವನ್ನು ಸವೆಸುತ್ತಿದ್ದಾರೆ. ಅರುಣಾಕ್ಷಿಯ ಊಟ ವಿಸರ್ಜನೆ ವಿಶ್ರಾಂತಿ ಎಲ್ಲವೂ ಹಾಸಿಗೆಯಲ್ಲೇ ಆಗುತ್ತಿದೆ. ಆಗಾಗ ಮನೆಯ ಒಳಗಿನಿಂದ ಅಂಗಳಕ್ಕೆ ಅವಳನ್ನು ಕರೆತರಬೇಕು ಎಂದರೆ ಯಾರಾದರೂ ಆಕೆಯನ್ನು ಹೊತ್ತು ತರಬೇಕು.
***

ಅಷ್ಟಕ್ಕೂ ಈ ಹಂದಿಗೋಡು ಕಾಯಿಲೆ ಎಂದರೆ ಏನು? ದೇಶದ ಬೇರೆ ಎಲ್ಲೂ ಕಾಣದ ಈ ವಿಸ್ಮಯ ಪಿಡುಗು ಇಲ್ಲಿಗೆ ಬಂದಿದ್ದಾರೂ ಹೇಗೆ? ಎನ್ನುವ ಪ್ರಶ್ನೆ ಜಗತ್ತಿನ ತಜ್ಞರನ್ನು ಕಾಡದೆ ಬಿಟ್ಟಿಲ್ಲ. ಹಂದಿಗೋಡು ಎಂಬ ಪುಟ್ಟ ಊರಿನದು ನಿಜಕ್ಕೂ ದುರಂತ ಕಥೆ. ಈ ಕಾಯಿಲೆ ಕಾಣಿಸಿಕೊಂಡಿದ್ದು 1975ರಲ್ಲಿ ಅದಕ್ಕೂ ಮುನ್ನ ಅಲ್ಲಿನ ಜನ ಎಲ್ಲರಂತೆ ಆರೋಗ್ಯವಂತರೇ ಆಗಿದ್ದರು. ಇದ್ದಕ್ಕಿದ್ದಂತೆ ಕೆಲವರಲ್ಲಿ ಕುಬ್ಜ ಪಿಡುಗು ಬಾಧಿಸತೊಡಗಿತು. ಅದನ್ನು ಕಂಡು ಗಾಬರಿಗೊಂಡ ಅದೇ ಗ್ರಾಮದ ನಿವಾಸಿ ಚಂದ್ರಶೇಖರ್‌ ಭಟ್‌ ಎಚ್ಚೆತ್ತು ಅದನ್ನು ಭೇದಿಸಲು ಬದ್ಧರಾಗುತ್ತಾರೆ. ಪವಾಡಂದತಹ ಈ ಬೆರಗಿನ ಕಾಯಿಲೆಯ ಮೂಲವನ್ನು ಹುಡುಕಲು ಮುಂದಾಗುತ್ತಾರೆ. ಅದರ ತೀವ್ರತೆಯನ್ನು ಅರಿತು ರಾಜ್ಯ ಆರೋಗ್ಯ ಸಚಿವಾಲಯ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರಗಳನ್ನು ಮೇಲಿಂದ ಮೇಲೆ ಬರೆದು ಒತ್ತಡವನ್ನು ಹೇರುತ್ತಾರೆ. ಅವತ್ತಿನ ಸ್ಥಳೀಯ ಶಾಸಕ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನೂ ನೀಡುತ್ತಾರೆ. ಸಮಸ್ಯೆಯನ್ನು ಅರಿತ ಶಾಸಕರು ಆ ಕ್ಷಣ ಜನರ ನೋವಿಗೆ ಮಮ್ಮಲ ಮರಗುತ್ತಾರೆ.

ಶಾಸಕರ ನಿರ್ದೇಶನದಂತೆ ಆರೋಗ್ಯ ಇಲಾಖೆಯ ವೈದ್ಯರ ಒಂದು ತಂಡ ಗ್ರಾಮಕ್ಕೆ ಭೇಟಿ ನೀಡುತ್ತದೆ. ಆ ತಂಡ ಅಲ್ಲಿನ ಜನರ ಇತಿಹಾಸವನ್ನು ಕೆದಕಿ ಕಾಯಿಲೆಯ ಮೂಲದ ಆವಿಷ್ಕಾರಕ್ಕೆ ಕೈ ಹಾಕುತ್ತದೆ. ಆದರೆ ಅವರಿಗೆ ಯಾವ ಸುಳಿವೂ ನಿಖರವಾಗಿ ಸಿಗದೆ, ಸಾಧ್ಯತೆಗಳಿಗಷ್ಟೇ ಸಮಾಧಾನ ಮಾಡಿಕೊಳ್ಳುತ್ತಾರೆ. ಹಾಗೆಂದು ಕೈಕಟ್ಟಿ ಕುಳಿತರೆ ಸಮಸ್ಯೆ ಪರಿಹಾರವಾದೀತೆ? ನಂತರ ರೋಗ ಲಕ್ಷಣಗಳನ್ನು ಗುರುತಿಸಿ ಅದರ ಶಮನಕ್ಕೆ ಔಷಧ ಉಪಚಾರವನ್ನು ಮಾಡಲು ಮುಂದಾಗುತ್ತಾರೆ. ಕಾಯಿಲೆ ಸಂಬಂಧ ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ. ಅವತ್ತಿನ ಕಾಲಕ್ಕೆ ಕಾಯಿಲೆಯ ಮೂಲ ಬಿಡಿಸಲಾರದ ಕಗ್ಗಂಟಾಗಿಯೇ ಉಳಿಯುತ್ತದೆ. ಅಕ್ಕಪಕ್ಕದ ಗ್ರಾಮಗಳಲ್ಲೂ ಸಮೀಕ್ಷೆಯನ್ನು ಮಾಡುತ್ತಾರೆ. ಆಗ ಅವರಿಗೆ ಮತ್ತೊಂದು ಸವಾಲು ಗೋಚರಿಸುತ್ತದೆ. ಆ ಕಾಯಿಲೆ ಹಂದಿಗೋಡಿನ ಸರಹದ್ದನ್ನು ಹಾರಿ ಅಕ್ಕ ಪಕ್ಕದ ಹತ್ತಾರು ಗ್ರಾಮಗಳಿಗೆ ಒಕ್ಕರಿಸಿ ತನ್ನ ಕುರುಹುಗಳನ್ನು ಚಿಗುರಿಸಿರುತ್ತದೆ. ಆಗಲೇ ಆ ವೈದ್ಯ ತಂಡ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತದೆ. ಆ ತಂಡದ ಶಿಫಾರಸಿನ ಮೇಲೆ ರಾಜ್ಯ ಸರ್ಕಾರ ಕಾಯಿಲೆಯಿಂದ ಬಳಲುವವರಿಗೆ ಚಿಕಿತ್ಸೆ ನೀಡಲು ಮುಂದಾಗುತ್ತದೆ. ಚಿಕಿತ್ಸೆ ನೀಡಲು ಮುಂದಾದರೂ ರೋಗ ಯಾವುದು? ಇದರ ಮೂಲ ಏನು? ನಿಯಂತ್ರಣಕ್ಕಾಗಲಿ ನಿವಾರಣೆಗಾಗಲಿ ಏನನ್ನು ಮಾಡಬೇಕು ಎಂಬ ಯಾವ ಪರಿಹಾರ ಉಪಾಯಗಳು ವೈದ್ಯರಿಗೆ ಅಂದೂ ಇರಲಿಲ್ಲ ಇಂದೂ ಇಲ್ಲ. ಆದರೆ ಕಾಯಿಲೆ ಮಾತ್ರ ಹಾಗೆಯೇ ಜೀವಂತ ಇದೆ. ಅಂದ ಮೇಲೆ ಸಂಪೂರ್ಣ ರೋಗವನ್ನು ವಾಸಿಮಾಡುವುದಾದರೂ ಹೇಗೆ?

ಇದು ಆರೋಗ್ಯ ಆಂದೋಲನ

1980ರಲ್ಲಿ ಚಂದ್ರಶೇಖರ್‌ ಭಟ್‌ ಅವರನ್ನೂ ಒಳಗೊಂಡಂತೆ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಸಮಸ್ಯೆಯ ಬಗ್ಗೆ ವಿಸ್ತಾರವಾದ ವಿವರಣೆಯ ಪತ್ರವನ್ನು ಬರೆಯುತ್ತಾರೆ. ನಿರಂತರ ಒತ್ತಡಕ್ಕೆ ಮಣಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು 12 ತಂಡಗಳನ್ನು ಸಾಗರಕ್ಕೆ ಭೇಟಿ ನೀಡುತ್ತವೆ. ಕೇಂದ್ರದಿಂದ ಬಂದ ಆ ತಂಡಗಳಿಗೆ ರಾಜ್ಯದ ಒಂಬತ್ತು ತಂಡಗಳು ಕೈ ಜೋಡಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗುತ್ತವೆ. ಆ ಕಾಯಿಲೆ ಮೊದಲು ಪತ್ತೆಯಾಗಿದ್ದು ಹಂದಿಗೋಡು ಗ್ರಾಮದಲ್ಲಿ ಆಗಿದ್ದರಿಂದ ಆ ರೋಗಕ್ಕೆ ಅದೇ ಹೆಸರಿನಲ್ಲಿ ನಾಮಕರಣ ಮಾಡುತ್ತಾರೆ.
ವೈದ್ಯರು ಈ ನಿಗೂಢ ಕಾಯಿಲೆಯ ವ್ಯಾಪ್ತಿಯನ್ನು ಜಾಲಾಡಲು ಶುರು ಮಾಡುತ್ತಾರೆ. ಅದು ಕೇವಲ ಶಿವಮೊಗ್ಗದ ಸಾಗರ ತಾಲ್ಲೂಕಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮಲೆನಾಡ ಹಚ್ಚ ಹಸುರಿನ ಸೆರಗಿನಗುಂಟ ಚಿಕ್ಕಮಗಳೂರು ಜಿಲ್ಲೆಗೂ ವ್ಯಾಪಿಸಿರುತ್ತದೆ. ಉಭಯ ಜಿಲ್ಲೆಯ 66 ಗ್ರಾಮಗಳಲ್ಲಿ ಈ ಕಾಯಿಲೆಯ ರುದ್ರನರ್ತನ ಗೋಚರಿಸುತ್ತದೆ. ಈ ಕಾಯಿಲೆಯಿಂದ ಬಳಲುವ ರೋಗಿಗಳು ಜಗತ್ತಿಗೂ ವಿಸ್ಮಯ ಎನ್ನುವುದನ್ನು ಆ ತಂಡ ಗುರುತಿಸುತ್ತವೆ. ಅದೇ ಸಂದರ್ಭದಲ್ಲಿ ಹೈದರಾಬಾದಿನ ‘‘ರಾಷ್ಟ್ರೀಯ ಆಹಾರ ಪೋಷಕಾಂಶ ಸಂಸ್ಥೆ’’ ಹಾಗೂ ಬೆಂಗಳೂರಿನ ‘‘ನಿಮಾನ್ಸ್‌ ಆರೋಗ್ಯ ಸಂಸ್ಥೆ’’ಗಳು ಜಂಟಿಯಾಗಿ ಸಂಶೋಧನೆಗೆ ಮುಂದಾಗುತ್ತವೆ. ಅದರ ಫಲಶ್ರುತಿಯಾಗಿ ಕೆಲವೊಂದು ಮಹತ್ವದ ಸುಳಿವುಗಳು ಕಾಣಸಿಗುತ್ತವೆ.

ಕಾಯಿಲೆಗೆ ಮೂಲ ಅಂತೆ ಕಂತೆ ಎಂಬ ಸಾದ್ಯತೆಗಳ ಸತ್ತ ಸುತ್ತುತ್ತದೆ. ಸತ್ತ ಏಡಿ ಮತ್ತು ಮೀನು ಸೇವನೆಯೇ ಇದಕ್ಕೆ ಕಾರಣ ಎನ್ನುವ ಅಂಶವನ್ನು ದಾಖಲಿಸಲಾಗುತ್ತದೆ. ಜೊತೆಗೆ ರೋಗ ವಂಶ ಪಾರಂಪರ್ಯವಾಗಿಯೂ ಬಂದಿರಬಹುದು ಎನ್ನುವ ಅನುಮಾನವೂ ಅಧ್ಯಯನ ತಂಡಕ್ಕೆ ಎದುರಾಗುತ್ತದೆ. ಕೊನೆಗೆ ಇದು ಮೂಳೆ ಮತ್ತು ಕೀಲು ಸಂಬಂಧಿ ಕಾಯಿಲೆ ಎಂದು ತೀರ್ಮಾನಿಸುತ್ತಾರೆ. ಸಂಶೋಧನೆಯ ಪ್ರಯೋಗಗಳು ಇಷ್ಟೆಲ್ಲ ಪ್ರಾಯಾಸಪಟ್ಟರೂ ಅದರ ನಿಯಂತ್ರಣಕ್ಕೆ ಯಾವ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ವಿಷಯದಲ್ಲಿ ನಮ್ಮ ಎಲ್ಲ ಆಧುನಿಕ ವೈದ್ಯಕೀಯ ಮತ್ತು ಔಷಧ ವಿಜ್ಞಾನಗಳು ಕೋರೊನಾದ ಮುಂದಷ್ಟೇ ಕೈ ಕಟ್ಟಿ ಕುಳಿತಿಲ್ಲ ಹಂದಿಗೋಡಿನ ಎದುರೂ ಮಂಡಿಯೂರಿ ಕುಳಿತಿವೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ.

ಕುತೂಹಲದ ಮತ್ತೊಂದು ಸಂಗತಿ ಏನೆಂದರೆ, ಹಂದಿಗೋಡು ಕಾಯಿಲೆ ಎನ್ನುವುದು ಸಾಂಕ್ರಾಮಿಕ ಬೇನೆಯೂ ಅಲ್ಲ. ಅಂಟು ರೋಗವೂ ಅಲ್ಲ. ಆದರೆ ಕೆಲವೇ ಕೆಲವು ಸಮುದಾಯಗಳಲ್ಲಿ ಮಾತ್ರ ಕಂಡುಬಂದಿರುವುದು ವಿಚಿತ್ರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಕೆಲವು ಹಿಂದುಳಿದ ಜಾತಿಗಳ ಎಲ್ಲೆಯೊಳಗೆ ಈ ಕಾಯಿಲೆ ದಶಕಗಳಿಂದ ಕಾಡುತ್ತಿದೆ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳಲ್ಲಿಯೇ ಏಕೆ ಈ ಕಾಯಿಲೆಯ ಕಾಡಾಟ ಎನ್ನುವುದೂ ನಿಗೂಢವಾಗಿಯೇ ಉಳಿದಿದೆ. ಏನೇ ಆದರೂ ಇಲ್ಲಿನ ಜನ ಮಾತ್ರ ಛಲ ಬಿಡದೆ ಈ ರೋಗದ ವಿರುದ್ಧ ಹೋರಾಡುತ್ತಲೇ ಇದ್ದಾರೆ. ತಜ್ಞರ ತಂಡ ಹಂದಿಗೋಡು ಪೀಡಿತ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವುದು ಒಂದು ಪರಿಹಾರ ಎಂದು ಸೂಚಿಸಿದೆ.

ಇಂತಹ ಶಿಫಾರಸಿನ ಸೂಚನೆ ಅರ್ಥಹೀನ ಎನ್ನುವುದನ್ನು ಅರಿತ ಜನ ತಮ್ಮ ಜೀವದ ಜೊತೆ ಬೆಸೆದ ಆ ಮಣ್ಣಿನಲ್ಲೆ ನೆಲಸುತ್ತಿದ್ದಾರೆ. ಕಾಯಿಲೆ ಪೀಡಿತರಿಗೆ ಭರವಸೆಯಾಗಿ ಚಂದ್ರಶೇಖರ್‌ ಭಟ್‌ ಮುಂದೆ ನಿಲ್ಲುತ್ತಾರೆ. ಅವರ ಜೊತೆ ಕಾಯಿಲೆ ಪೀಡಿತ ವಿ.ಆರ್‌. ರಾಜೇಂದ್ರ ಸಾತ್‌ ನೀಡುತ್ತಾರೆ. ಕಾಯಿಲೆ ಪೀಡಿತರ ಹಿತ ಕಾಪಾಡಲು ಹೋರಾಟಕ್ಕೆ ಮುಂದಾಗುತ್ತಾರೆ. ಕೆಲವು ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ ಕಾಯಿಲೆ ಪೀಡಿತರಿಗೆ ಒಂದಿಷ್ಟು ಸೌಲಭ್ಯಗಳು ಬರುತ್ತವೆ. ಪರಿಹಾರದ ಫಲಿತಾಂಶ ಮಾತ್ರ ಶೂನ್ಯ. ಈಗಲೂ ಆ ಕಾಯಿಲೆಗೆ ತುತ್ತಾದವರು ಬದುಕಲೇಬೇಕು ಬದುಕುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ಆಡುತ್ತಾರೆ.

ಹಂದಿಗೋಡು ಚಕ್ರವ್ಯೂಹದಲ್ಲಿ ಅಭಿಮನ್ಯು

ರಾಜ್ಯದಲ್ಲಿ ಕಂಡ ಭಯಾನಕ ಕಾಯಿಲೆಯನ್ನು ಮೊದಲಬಾರಿಗೆ ಪತ್ತೆಹಚ್ಚಿದ್ದು ಚಂದ್ರಶೇಖರ್‌ ಬಟ್‌ ಇಂದು ಈ ಕಾಯಿಲೆಯಿಂದ ಬಳಲುವವರ ಆಶಾಕಿರಣವಾಗಿ ಅವರು ಕಾಣಿಸುತ್ತಿದ್ದಾರೆ. ಬಡಜನರ ನೋವು ಕಂಡು ತಮ್ಮ ಖರ್ಚಿನಲ್ಲಿಯೇ ಚಿಕಿತ್ಸೆ ಕೊಡಿಸಲು ಮುಂದಾಗುತ್ತಾರೆ. ಈ ಕಾಯಿಲೆಗೆ ಶಾಶ್ವತ ಪರಿಹಾರಕ್ಕಾಗಿ ನಿರಂತರ ಹೋರಾಟವನ್ನು ಈ ಕ್ಷಣಕ್ಕೂ ಅವರು ಮಾಡುತ್ತಿದ್ದಾರೆ. ಆ ವ್ಯಕ್ತಿಯಲ್ಲಿ ಇರುವ ಅಚಲ ಛಲ ಮಾತ್ರ ಪ್ರಶಂಸನೀಯ.

ಹಂದಿಗೋಡು ಎಂಬ ಚಕ್ರವ್ಯೂಹ ಭೇದಿಸುವ ಅಭಿಮನ್ಯುವಿನಂತೆ ಚಂದ್ರಶೇಖರ್‌ ಭಟ್‌ ಅಲ್ಲಿನ ಜನರಿಗೆ ಕಾಣಿಸಿದ್ದಾರೆ. ಚಂದ್ರಶೇಖರ್‌ ಮೂಲತಃ ಅದೇ ಗ್ರಾಮದವರು. ತಂದೆ ಮಹಾಬಲ ಭಟ್‌, ತಾಯಿ ಶಾರದಮ್ಮ. ಅವರದು ಕೃಷಿ ಕುಟುಂಬ. ಪರಂಪರಾಗತವಾಗಿ ಬಂದ ಭೂಮಿಯಲ್ಲಿ ಕೃಷಿ ಮಾಡುವ ಚಂದ್ರಶೇಖರ್‌ ಭಟ್‌ ಅವರಿಗೆ ಸಾಮಾಜಿಕ ಕೆಲಸದಲ್ಲಿ ಮೊದಲಿನಿಂದಲೂ ಆಸಕ್ತಿ. ಹಂದಿಗೋಡು ಕಾಯಿಲೆ ಬೆಳಕಿಗೆ ಬರುತ್ತಿದ್ದಂತೆ ಜನರ ನೆರವಿಗೆ ಧಾವಿಸಿ ನಿಲ್ಲುತ್ತಾರೆ. ಓದಿದ್ದು ಎಸ್ಎಸ್ಎಲ್ಸಿ ಆದರೂ ಕಾಯಿಲೆ ಕುರಿತು ಅಧ್ಯಯನಕ್ಕೆ ಮುಂದಾಗುತ್ತಾರೆ. ಸಾವಿರಾರು ಹಳ್ಳಿಗಳನ್ನು ಸುತ್ತಿ ಕಾಯಿಲೆ ಪೀಡಿತರನ್ನು ಗುರುತಿಸುತ್ತಾರೆ. ಆ ಜನರ ನೋವಿಗೆ ಸ್ಪದಿಸುತ್ತಾರೆ. ಅವರ ದುಃಖ ದುಮ್ಮಾನಗಳಿಗೆ ಕಿವಿಯಾಗಿ ಅವರ ಬದುಕಿಗೆ ಊರುಗೋಲಾಗಿ ನಿಲ್ಲುತ್ತಾರೆ. ಸರ್ಕಾರದ ಗಮನ ಸೆಳೆದು ಹಂದಿಗೋಡು ಕಾಯಿಲೆ ಪೀಡಿತರಿಗೆ ಅಂಗವಿಕಲರಿಗೆ ಸಿಗುವ ಸೌಲಭ್ಯ ಸೌಕರ್ಯವನ್ನು ನೀಡುವಂತೆ ಮಾಡುತ್ತಾರೆ. ಅದಕ್ಕಾಗಿ ಅವರು ಹತ್ತಾರು ವರ್ಷ ಹೋರಾಟವನ್ನು ಮಾಡಬೇಕಾಗುತ್ತದೆ. ತಮ್ಮ ಹೋರಾಟಕ್ಕಾಗಿ ಸಾಕಷ್ಟು ಹಣ ಮತ್ತು ಸಮಯವನ್ನು ಖರ್ಚುಮಾಡುತ್ತಾರೆ. ಹೀಗಾಗಿ ಇಲ್ಲಿನ ಜನರಿಗೆ ಚಂದ್ರಶೇಖರ್‌ ಭಟ್‌ ಮೇಲೆ ವಿಶೇಷ ಪ್ರೀತಿ ಮತ್ತು ವಿಶ್ವಾಸದ ಅಭಿಮಾನ.
ಚಂದ್ರಶೇಖರ್‌ ಹೋರಾಟದ ಫಲವಾಗಿ ಹಂದಿಗೋಡು ಪೀಡಿತರಿಗೆ ಚಿಕಿತ್ಸೆ ನೀಡಲೆಂದು ಪ್ರತ್ಯೇಕ ಆಸ್ಪತ್ರೆಯನ್ನು ಆರಂಭವಾಗಿದೆ. ಇದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯ ಸೌಲಭ್ಯವನ್ನೇ ಸಂಚರಿಸುವಂತೆ ಮಾಡಲಾಗಿದೆ. ಎಷ್ಟೋ ಬಾರಿ ಚಂದ್ರಶೇಖರ್‌ ಅವರೇ ಕುಗ್ರಾಮಗಳಿಗೆ ವೈದ್ಯರನ್ನು ಕರೆದುಕೊಂಡು ಹೋಗಿ ಚಿಕಿತ್ಸೆಯನ್ನೂ ಚಂದ್ರಶೇಖರ್‌ ಕೊಡಿಸುತ್ತಾ ಬಂದಿದ್ದಾರೆ. ಕಾಯಿಲೆ ಪೀಡಿತರ ಮನೆ ಬಾಗಿಲಿಗೆ ಪಡಿತರ ಬರುವಂತೆ ಆಗಿದೆ. ಸ್ಥಳಿಯವಾಗಿ ಉದ್ಯೋಗ ಕಲ್ಪಿಸಲು ಹ್ಯಾಡ್‌ಲೂಮ್‌ ಚಟುವಟಿಕೆಯನ್ನೂ ವಿಸ್ತರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಈ ಕಾಯಿಲೆ ಮುಂದಿನ ಪೀಳಿಗೆಯಲ್ಲಿಯೂ ತನ್ನ ಕರಾಳ ಕಣ್ಣನ್ನು ಪಿಳಿ ಪಿಳಿ ಬಿಟ್ಟು ನಿಲ್ಲಬಾರದು ಎನ್ನುವ ಕಾರಣಕ್ಕೆ ಪ್ರತ್ಯೇಕ ಹಾಸ್ಟೆಲ್‌ ಆರಂಭಿಸಿದ್ದಾರೆ. ಅಲ್ಲಿ ಕಾಯಿಲೆ ಪೀಡಿತ ಸಮುದಾಯದ ಮಕ್ಕಳಿಗೆ ಪೋಷ್ಟಿಕ ಆಹಾರ ಹಾಗೂ ಸುಸಜ್ಜಿತ ಶಿಕ್ಷಣ ನೀಡಲಾಗುತ್ತಿದೆ. ಚಂದ್ರಶೇಖರ್‌ ಭಟ್‌ ಅವರ ಅವಿಶ್ರಾಂತ ನಿಸ್ವಾರ್ಥ ಸೇವೆಗೆ ಭಾರತೀಯ ವಿಜ್ಞಾನಿಗಳ ಪರಿಷತ್‌ ‘‘ಸ್ವಾಸ್ತ್ಯ ಸೇವಾ ರತ್ನ ಪ್ರಶಸ್ತಿ’’ ನೀಡಿ ಪುರಸ್ಕರಿಸಿದೆ. ರಾಜ್ಯ ಸರ್ಕಾರ ‘‘ರಾಜ್ಯೋತ್ಸವ’’ ಪ್ರಶಸ್ತಿಯನ್ನು ನೀಡಿದೆ ಇಂತಹ ಹಲವು ಪುರಸ್ಕಾರಗಳು ಅವರ ಸೇವೆಯ ಸೆರಗನ್ನು ತುಂಬಿವೆ. ಈಗ ಅವರಿಗೆ 80ರ ಪ್ರಾಯ. ಇಂತಹ ಸೇವಾ ರತ್ನಕ್ಕೆ ನಮ್ಮದೊಂದು ಸಲಾಂ.

ಬಾಕ್ಸ್‌

ಮತ ರಾಜಕಾರಣಕ್ಕೆ ರೋಗಕ್ಕಿಂತ ಸಂಖ್ಯೆ ಮಾತ್ರ ಮುಖ್ಯ!

ಸರ್ಕಾರ ಅಂಕಿ ಅಂಶಗಳ ಪ್ರಕಾರ ಹಂದಿಗೋಡು ಕಾಯಿಲೆಗೆ ಇದುವರೆಗೆ 160 ಜನ ಮರಣವನ್ನು ಹೊಂದಿದ್ದಾರೆ. ಅಸಲಿ ಸಂಖ್ಯೆ ಜಾಸ್ತಿ ಇದೆ. ಸರ್ಕಾರ 65 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ. ನಿಮಗೆ ಗೊತ್ತಿರಲಿ ಈ ಹಂದಿಗೋಡು ಪೀಡಿತ ಯಾವೊಬ್ಬರು 60 ವರ್ಷಕ್ಕಿಂತ ಹೆಚ್ಚು ಕಾಲ ಬದುಕಿಲ್ಲ.
ಯಾವ ಸಂಶೋಧನೆ– ಅಧ್ಯಯನಗಳು ನಿಖರವಾಗಿ ಕಾಯಿಲೆಗೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಂಡಿಲ್ಲ. ಕಾಡಂಚಿನ ಈ ಸಮುದಾಯಗಳಿಗೆ ಕಾಡಿನ ಮೂಲದಿಂದ ಎಲ್ಲೋ ಬಂದಿರಬಹುದು ಎನ್ನುವ ಊಹೆ ಶಂಕೆಗಳು ಸಂಶೋಧನಾ ಹೂರಣದಲ್ಲೂ ಅಡಗಿದೆ.
ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗ್ರಾಮ ವಾಸ್ತವ್ಯ ಹೂಡಿದ ಗ್ರಾಮಗಳಲ್ಲಿ ಹಂದಿಗೋಡು ಕೂಡ ಒಂದು. ಇದರಿಂದ ರಸ್ತೆಯ ಮಾರ್ಗ ಸುಧಾರಿಸಿತೇ ಹೊರತು ಜನರ ವೇದನೆ ಮಾತ್ರ ಸುಧಾರಿಸಲೇ ಇಲ್ಲ. ಅನೇಕ ಬಾರಿ ವಿಧಾನ ಸೌಧದದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳು ತಜ್ಞ ವೈದ್ಯರನ್ನು ಕರೆಸಿ ಕಾಯಿಲೆಗೆ ಕಾರಣವನ್ನು ಕೆದಕಿದರೆ ಹೊರತು ಅದರಿಂದ ಯಾವ ಪ್ರಯೋಜನವನ್ನು ಕಂಡುಕೊಂಡಿಲ್ಲ. ಜಾತಿಯ ಜೊತೆ ಕಾಯಿಲೆ ಕಳಂಕದಿಂದಿದಲೂ ಹಂದಿಗೋಡು ಪೀಡಿತರು ನಿರಂತರ ಯಾತನೆಯಲ್ಲೇ ಬದುಕುವಂತೆ ಆಗಿದೆ. ಎಲ್ಲವನ್ನೂ ವೋಟಿನ ಮೂಲಕವೇ ನೋಡುವ ನಮ್ಮ ರಾಜಕಾರಣಿಗಳು ರೋಗದ ತೀವ್ರತೆಗಿಂತ ರೋಗಿಗಳ ಸಂಖ್ಯೆಯ ಮೇಲೆ ಲೆಕ್ಕ ಹಾಕುವುದರಿಂದ ಇದು ದೊಡ್ಡ ಸಮಸ್ಯೆ ಎಂದು ಅವರಿಗೆ ಅನಿಸಿಯೇ ಇಲ್ಲ ಎಂದು ಅನಿಸುತ್ತದೆ. ಹಂದಿಗೋಡು ಕಾಯಿಲೆ ಪೀಡಿತರಿಗೆ ನೋವು ನಿವಾರಕ ಔಷಧ ಮತ್ತು ಅಂಗವಿಕಲ ಪರಿಹಾರ ಭತ್ಯೆ ನೀಡುವ ಸಂತ್ರಸ್ಥ ಮಕ್ಕಳಿಗೆ ಹಾಸ್ಟೆಲ್‌ ಸೌಲಭ್ಯ ಹೊರತುಪಡಿಸಿ ಇನ್ನೇನೂ ಮಾಡಲು ಸಾಧ್ಯ ಆಗಿಲ್ಲ.

ಬದುಕನೇ ಕತ್ತಲಿಗೆ ತಳ್ಳುವ ಈ ಕಾಯಿಲೆಗೆ ವೈಜ್ಞಾನಿಕ ಕಾರಣ ಮತ್ತು ಪರಿಹಾರವನ್ನು ಮೊದಲು ಕಂಡುಕೊಳ್ಳಬೇಕಿದೆ. ಔಷಧ ಕಂಡುಕೊಂಡರೆ ಮಾತ್ರ ಹಂದಿಗೋಡಿನ ಈ ಶಾಪ ಪರಿಹಾರಿಸಲು ಸಾಧ್ಯ. ನಾಲ್ಕು ದಶಕದಿಂದ ಈ ಕಾಯಿಲೆಯಿಂದ ನಲುಗಿದ ಆ ಪ್ರದೇಶದಲ್ಲಿ ಒಂದಿಷ್ಟು ಸುಧಾರಣಾ ಚಟುವಟಿಕೆಗಳು ನಡೆಯುತ್ತಿವೆ. ಭೂ ರಹಿತ ಅನರಕ್ಷಸ್ಥ ಹಿಂದುಳಿದ ಜಾತಿಯ ಜನರನ್ನು ಈ ಕಾಯಿಲೆ ಕಾಡುತ್ತಿರುವುದು ಮಾತ್ರ ದೊಡ್ಡ ದುರಂತ. ಶಿವಮೊಗ್ಗ ಜಿಲ್ಲೆ ದೇಶದ ಇತಿಹಾಸಕ್ಕೆ ಏನೆಲ್ಲ ಕಾಣಿಕೆಯನ್ನು ನೀಡಿದೆ. ಕೆಎಫ್‌ಡಿ ಎಂದು ಕರೆಯುವ ಕ್ಯಾಸನೂರು ಕಾಡಿನ ಕಾಯಿಲೆ ಮತ್ತು ಹಂದಿಗೋಡು ಕಾಯಿಲೆ ನಿಜಕ್ಕೂ ಮಲೆನಾಡಿನ ಹಚ್ಚ ಹಸಿರಿನ ಸೆರಗಿನಲ್ಲಿ ಕಟ್ಟಿ ಇಟ್ಟ ಕೆಂಡದ ಉಂಡೆಯಂತೆಯೇ ಭಾಸವಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?