ಪಬ್ಲಿಕ್ ಸ್ಟೋರಿ.ಇನ್
ತುಮಕೂರು: ಅಲ್ಲಿ ಹಳೆಯ ಹಲವು ನೆನಪುಗಳ ಮೆಲುಕು. ನಗು, ಕಣ್ಣಂಚಿನಲ್ಲಿ ಸ್ನೇಹದ ಅಭಿಮಾನ. ಹಾರ, ತುರಾಯಿಯ ನಡುವೆ ಆಲಿಂಗನದ ಅಪ್ಪುಗೆ.
ಇದೆಲ್ಲ ಕಂಡು ಬಂದಿದ್ದು ನಗರದಲ್ಲಿ ನಡೆದ ಜಾನುವಾರು ಅಭಿವೃದ್ಧಿ ಅಧಿಕಾರಿ ಗೂಳೂರು ನಟರಾಜ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ.
ಪಶುವೈದ್ಯಕೀಯ ವೈದ್ಯರ ಸಂಘದ ಅಧ್ಯಕ್ಷರೂ ಆಗಿದ್ದ ಗೂಳೂರು ನಟರಾಜ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ಕಾರಣ ಸ್ನೇಹಿತರೆಲ್ಲ ಸೇರಿ ಅವರನ್ನು ಬೀಳ್ಕೊಟ್ಟರು.
ಮಾಜಿ ಸಚಿವ ವೈ.ಕೆ.ರಾಮಯ್ಯ, ಮಾಜಿ ಶಾಸಕರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಅಚ್ಚುಮೆಚ್ಚಿನ ಶಿಷ್ಯರು. ಗೂಳೂರು ನಟರಾಜ್ ಯಾರಿಗೂ ಜಗ್ಗದವರಲ್ಲ, ಬಗ್ಗದವರಲ್ಲ. ಇಲಾಖೆಯ ಭ್ರಷ್ಟಾಚಾರದ ಬಗ್ಗೆಯು ದೊಡ್ಡಮಟ್ಟದ ದನಿ ತೆಗೆದವರು. ಬಡ್ತಿ ವಿಚಾರವೇ ಇರಲಿ, ವೈದ್ಯರ ಬೇಡಿಕೆಗಳೇ ಇರಲಿ ಎಲ್ಲದರಲ್ಲೂ ಅವರದೇ ಮುಂದಾಳು. ಈ ಎಲ್ಲ ನೆನಪುಗಳನ್ನು ಸ್ನೇಹಿತರು ನೆನಪಿನ ಬುತ್ತಿಯಿಂದ ಮೊಗೆಮೊಗೆದು ಹಂಚಿದರು.
ಪಶು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್ ಅವರು ನಟರಾಜ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಅವರ ಕಾರ್ಯವೈಖರಿಯ ನೆನಪು ಮಾಡಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಟರಾಜ್, ಇನ್ಮುಂದೆ ಸಾಮಾಜಿಕರಂಗದಲ್ಲಿ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ಅವರೇ ನನ್ನ ಗುರುಗಳು. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಸಮಾಜ ಸಂಘಟನೆಯಲ್ಲಿ ತೊಡುಗುವೆ. ನಾನು ರಾಜಣ್ಣ ಅವರ ಕಟ್ಟಾ ಬೆಂಬಲಿಗ. ಅವರಷ್ಟು ಸಮಾಜಮುಖಿ ರಾಜಕಾರಣಿಯನ್ನು ನಾನು ನೋಡಿಲ್ಲ. ವೈಕೆಆರ್ ಬಿಟ್ಟರೆ ರಾಜಣ್ಣ ಅವರೊಬ್ಬರೇ ಜಿಲ್ಲೆಯಲ್ಲಿರುವ ಜೀವಪರ, ಸಮಾಜಮುಖಿ ರಾಜಕಾರಣಿಯಾಗಿದ್ದಾರೆ ಎಂದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಎ.ಸಿ. ದಿವಾಕರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್, ನಿವೃತ್ತ ಜಾನುವಾರು ಅಧಿಕಾರಿ ನಾಗರಾಜು, ಮಹದೇವ್, ಕಾಂತರಾಜು ಇದ್ದರು. ಕೊನೆಯಲ್ಲಿ ನಟರಾಜ್ ಅವರನ್ನು ಸನ್ಮಾನಿಸಲಾಯಿತು.