ತುಮಕೂರು:
ರಾಜ್ಯದಲ್ಲಿ ಅವಧಿ ಮುಗಿದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಶೀಘ್ರ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್‌ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎಸ್. ಓಕಾ, ನ್ಯಾಯಮೂರ್ತಿ ಎನ್.ಎಸ್. ಸಂಜಯ್ ಗೌಡ ಅವರಿದ್ದ ಪೀಠ ಈ ಆದೇಶ ನೀಡಿದೆ. ಇದೇ ವೇಳೆ ಚುನಾವಣೆ ಮುಂದೂ ಡುವ ಸರ್ಕಾರದ ನಿರ್ಣಯಕ್ಕೆ ಚುನಾವಣಾ ಆಯೋಗ ಬದ್ಧವಾಗಿರಬೇಕೆಂದೇನೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ, ವಿಚಾರಣೆಯನ್ನು ಆ. 13ಕ್ಕೆ ಮುಂದೂಡಿದೆ.
ಡಿಸೆಂಬರ್ ಅಂತ್ಯಕ್ಕೆ ಮುಂದೂಡಿಕೆ:
ಸರ್ಕಾರದ ಪರ ವಕೀಲರು ಹಾಜರಾಗಿ, ಕೋವಿಡ್ 2ನೇ ಅಲೆ ಉಲ್ಬಣಿಸಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಡಿಸೆಂಬರ್ ಅಂತ್ಯದವರೆಗೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಮೇ 17ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ ಎಂದರು. ನಿರ್ಣಯದ ದಾಖಲೆಯನ್ನು ನ್ಯಾಯಪೀಠಕ್ಕೆ ಒದಗಿಸಿದರು.
ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಚುನಾವಣೆಗಳನ್ನು ಮುಂದೂಡುವುದಕ್ಕೆ ಸರ್ಕಾರ ಕೋವಿಡ್ ನೆಪ ಹೇಳಿದೆ. ಪ.ಬಂಗಾಲದಲ್ಲಿ ಸಾಧ್ಯವಾಗುವುದಾದರೆ ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಲ್ಲದೆ ಸಚಿವ ಸಂಪುಟದ ನಿರ್ಣಯಕ್ಕೆ ಸಮರ್ಥನೆ ನೀಡುವಂತೆ ಸರಕಾರಕ್ಕೆ ಸೂಚಿಸಿತು.
ಚುನಾವಣಾ ಆಯೋಗಕ್ಕೆ ನಿರ್ದೇಶನ :
ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾಯಿತ ಅವಧಿ ಪೂರ್ಣಗೊಂಡಿದೆ. ಸಂವಿಧಾನದ ಪರಿಚ್ಛೇದ 243(ಯು) ಪ್ರಕಾರ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಬೇಕೆಂದು ಈ ಹಿಂದೆಯೇ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದ್ದರಿಂದ ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿತು.