ತುರುವೇಕೆರೆ: ‘ನಾನು ಪ್ರಾಮಾಣಿಕನಾಗಿದ್ದು ಎಲ್ಲಿಯೂ ದಲ್ಲಾಳಿ ಕೆಲಸ ಮಾಡಿಲ್ಲ ಪಟ್ಟಣದ ಉಡಿಸಲಮ್ಮ ದೇವಸ್ಥಾನದಲ್ಲಿ ತಂದೆ-ತಾಯಿ ಹೆಸರಿನಲ್ಲಿ ಕರ್ಪೂರ ತೆಗೆದುಕೊಳ್ಳುವೆ; ಅದೇ ರೀತಿ ಸಬ್ ಇನ್ಸ್ಪೆಕ್ಟರ್ ಕೂಡ ಸರ್ಕಾರದ ಸಂಬಳದ ಹೊರತಾಗಿ ಯಾರಿಂದಲೂ ಬಿಡಿಗಾಸು ಹಣ ಪಡೆಯದೆ ಪ್ರಾಮಾಣಿಕನಾಗಿರುವೆನೆಂದು ದೇವಾಲಯದಲ್ಲಿ ಕರ್ಪೂರ ತೆಗೆದುಕೊಳ್ಳಲೆಂದು’ ಮುಖಂಡ ಅರಳೀಕೆರೆ ರವಿಕುಮಾರ್ ಆಹ್ವಾನ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘಟನೆ, ಜಯಕರ್ನಾಟ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಸಾರ್ವಜನಿಕರು, ರೈತರು ತಮ್ಮ ಸಮಸ್ಯೆಗಳನ್ನು ಹೊತ್ತು ಪಟ್ಟಣದ ಪೊಲೀಸ್ ಠಾಣೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಲ್ಲಿನ ಸಬ್ ಇನ್ಸ್ಪೆಕ್ಟರ್ ಅವರು ಹೊಸದಾಗಿ ತಾಲ್ಲೂಕಿಗೆ ಬಂದ ವೇಳೆ ನಾನು ಬಹಳ ಶಿಸ್ತು, ಪ್ರಾಮಾಣಿಕ, ಭ್ರಷ್ಟಾಚಾರದ ವಿರೋಧಿ ಎಂದು ಬಿಂಬಿಸಿಕೊಂಡು ಈಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿದರು.
ಜನರ ಸಮಸ್ಯೆಗಳು ಠಾಣೆಯಲ್ಲಿ ಬಗೆಹರಿದರೆ ನಮ್ಮಂತಹ ಮುಖಂಡರು, ಜನಪ್ರತಿನಿಧಿಗಳನ್ನು ಠಾಣೆಗೆ ಕರೆದುಕೊಂಡು ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ.
ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ದೇವಾಲಯಗಳು, ಮನೆಗಳು, ಬೈಕ್ ಗಳು ಹಾಗು ಸರ ಕಳ್ಳತನ ನಡೆಯುತಿದ್ದರೂ ಈ ಬಗ್ಗೆ ಸಾರ್ವಜನಿಕರಲ್ಲಿ ಇವರು ಜಾಗೃತಿ ಮೂಡಿಸಿಲ್ಲ. ಜೊತೆಗೆ ಕಳ್ಳರನ್ನು ಹಿಡಿಯುವ ಕೆಲಸವೂ ಆಗಿಲ್ಲ. ಸಾರ್ವಜನಿಕರೇ ಹೇಳುವಂತೆ ಸಬ್ ಇನ್ಸ್ಪೆಕ್ಟರ್ ಅವರ ಮೇಲೆ ಮಾಡುತ್ತಿರುವ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಬ್ ಇನ್ಸ್ಪೆಕ್ಟರ್ ಅವರು ಕಳ್ಳರನ್ನು ಹಿಡಿಯುವುದರಲ್ಲಿ ಪ್ರಾಮಾಣಿಕತೆ ತೋರಲಿ. ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಲಿ.
ಈಚೆಗೆ ನಡೆದ ತೊರೆಮಾವಿನಹಳ್ಳಿ ಹಲ್ಲೆ ಪ್ರಕರಣದಲ್ಲಿಯೂ ನೊಂದವರಿಗೆ ನ್ಯಾಯಕೊಡಿಸದೆ ಉಡಾಫೆ ಉತ್ತರಕೊಡುತ್ತಾರೆ. ನನ್ನನ್ನು ದಲ್ಲಾಳ್ಳಿ ಮಾಡುತ್ತಿದ್ದೀಯೆಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದರು.
ತಾಲ್ಲೂಕಿನ ಜನತೆಗೆ ನನ್ನ ಬಗ್ಗೆ ಗೊತ್ತಿದೆ. ನನ್ನ ಮನೆ ಹಣದಿಂದ ರಾಜಕೀಯ ಮಾಡುತ್ತಿದ್ದೇನೆ. ಹಣ ಮಾಡುವ ಉದ್ದೇಶವಿಲ್ಲ. ಸಬ್ ಇನ್ಸ್ಪೆಕ್ಟರ್ ದುರ್ವತನೆಯ ಬಗ್ಗೆ ಎಸ್ಪಿ, ಸಚಿವರು, ಮುಖ್ಯಮಂತ್ರಿಗಳು, ಶಾಸಕರಿಗೆ ಪತ್ರ ಬರೆದು ಇಂತಹ ಅಧಿಕಾರಿಗಳ ವರ್ಗಾ ಮಾಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಜಯಕರ್ನಾಟಕ ಸಂಘಟನೆ ಸುರೇಶ್, ರೈತ ಸಂಘದ ಶ್ರೀನಿವಾಸ್, ಅಸ್ಲಾಂಪಾಷಾ, ಮುಖಂಡ ಕೊಳಾಲಗಂಗಾಧರ್, ಪುಟ್ಟರಾಜು, ಕಾಂತರಾಜು, ಬುಗಡನಹಳ್ಳಿ ಕೃಷ್ಣಮೂರ್ತಿ, ನಂದೀಶ್ ತೊರೆಮಾವಿನಹಳ್ಳಿ ಗ್ರಾಮಸ್ಥರು ಇದ್ದರು.