Publicstory
ತುರುವೇಕೆರೆ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ಕೊಡುವುದೇ ಅತ್ಯಂತ ಸಾರ್ಥಕವಾದ ಬದುಕು. ‘ತನಗಾಗಿ ಸ್ವಲ್ಪ ಮತ್ತು ಸಮಾಜಕ್ಕಾಗಿ ಸರ್ವಸ್ವ’ ಎಂಬ ಧ್ಯೇಯದೊಂದಿಗೆ ಬದುಕಿ ಬಾಳಿರುವ ಸಮಾಜ ಸೇವಕ ಹಾಗೂ ಹಿರಿಯ ರಂಗಕರ್ಮಿ ಟಿ.ಎನ್.ಸತೀಶ್ ಅವರು ಅನುಕರಣೀಯ ಮಾದರಿ ಆಗಿದ್ದಾರೆ ಎಂದು ಮಾಜಿ ಶಾಸಕ ಎಸ್.ರುದ್ರಪ್ಪ ಹೇಳಿದರು.
ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನಮಂಟಪದಲ್ಲಿ ಸತ್ಯಗಣಪತಿ ಗ್ರಾಮಾಂತರ ಕಲಾಮಂಡಳಿ ಇತರೆ ಸಂಘಟನೆಗಳು ಹಾಗೂ ಕಲಾಪೋಷಕರು, ಸಾರ್ವಜನಿಕರ ಸಹಯೋಗದೊಂದಿಗೆ ಏರ್ಪಡಿಸಿದ್ದ ರಜತ ಕಿರೀಟ ಧಾರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ‘ ಕಲಾವಿದರ ಬದುಕು ಕಷ್ಟಕಾರ್ಪಣ್ಯಗಳ ಮಧ್ಯೆಯೇ ಸಾಗುತ್ತಿರುತ್ತದೆ. ಅಂತಹ ಕಲಾವಿದರಿಗೆ ಆಸರೆಯಾಗಿ ನಿಂತು ಸಮಾಜಸೇವೆ ಹಾಗೂ ರಂಗಭೂಮಿಯ ಪುನಶ್ಚೇತನಕ್ಕೆ ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿರುವ ಸತೀಶ್ ಅಂತಹವರನ್ನು ಗೌರವಿಸುವುದು ಸಮಾಜ ತನ್ನನ್ನು ತಾನು ಗೌರವಿಸಿಕೊಂಡಂತೆ ಎಂದರು.
ಸಮಾರಂಭದಲ್ಲಿ ರಂಗಕರ್ಮಿ ಟಿ.ಎನ್.ಸತೀಶ್ ಅವರಿಗೆ ಸಾರ್ವಜನಿಕರ ಸಮ್ಮುಖದಲ್ಲಿ ಬೆಳ್ಳಿ ಕಿರೀಟಧಾರಣೆ ಮಾಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸತೀಶ್ ತಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣರಾದ ಎಲ್ಲಾ ಪ್ರೇರಕ ವ್ಯಕ್ತಿಗಳಿಗೆ, ಸಂಘಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರಾದ ಡಾ.ಎ. ನಾಗರಾಜ್ ಮತ್ತು ನಾಟಿ ವೈದ್ಯೆ ರೆಹನಾ ಬೇಗಂ, ಗಂಗಮ್ಮ, ಯಶೋಧಮ್ಮ, ಸುಜಾತಾ ಅವರನ್ನು ಸನ್ಮಾನಿಸಲಾಯಿತು. ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್(ರಾಜು)ಅಧ್ಯಕ್ಷತೆ ವಹಿಸಿದ್ದರು. ಬಿ.ಮಂಜುನಾಥ ಶಾಸ್ತ್ರೀ, ಬಿ.ಎಂ.ಚಿಕ್ಕೀರಪ್ಪ,ಪ.ಪಂ.ಅಧ್ಯಕ್ಷ ಟಿ.ಕೆ. ಚಿದಾನಂದ್, ಬಿಜೆಪಿ ಯುವ ಮುಖಂಡ ವಿ.ಬಿ.ಸುರೇಶ್, ಎಚ್.ಆರ್. ರಾಮೇಗೌಡ, ಕೆ.ನರಸಿಂಹಮೂರ್ತಿ, ಟಿ.ಎಸ್.ಬೋರೇಗೌಡ, ರಾಮಚಂದ್ರಯ್ಯ, ರಾಘವೇಂದ್ರ. ಇತರರು ಉಪಸ್ಥಿತರಿದ್ದರು. ಜೆ.ಬಿ. ನವೀನ್ ಕುಮಾರ್ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಕೆ.ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಹಾಗೂ ರಂಗಕಲಾವಿದ ಅಮಾನಿಕೆರೆ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕಿನ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ನಾಗರಿಕರು ಸತೀಶ್ ಅವರನ್ನು ಅಭಿನಂದಿಸಿದರು.