Tuesday, December 3, 2024
Google search engine
HomeUncategorizedಇವರೇ ನಮ್ಮ ಡಾಕ್ಟ್ರು; : ದೇವರೇ ಬಂದ್ರೂ ರಜನಿ ಡಾಕ್ಟರೇ ಹೇಳ್ ಬೇಕು!

ಇವರೇ ನಮ್ಮ ಡಾಕ್ಟ್ರು; : ದೇವರೇ ಬಂದ್ರೂ ರಜನಿ ಡಾಕ್ಟರೇ ಹೇಳ್ ಬೇಕು!

ಮಹೇಂದ್ರಕೃಷ್ಣಮೂರ್ತಿ


ಆ ದೇವರು ಬಂದು ಹೇಳಿದ್ರು ಇವ್ರು ನಂಬಲ್ಲ ಬಿಡಿ ಡಾಕ್ಟರ್. ರಜನಿ ಡಾಕ್ಟ್ರೇ ಹೇಳ್ ಬೇಕು. ಆಗಷ್ಟೇ ಇವರಿಗೆ ನಂಬಿಕೆ.

ಶ್ವೇತಾ ಮಾತು ಕೇಳಿದ ಡಾ. ಮಹೇಶ ಗಾಂಧಿ ಅವರು ಕೆಲಕ್ಷಣ ಗಲಿಬಿಲಿಗೊಂಡರು.ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ನನಗೆ ನೆಲಮಂಗಲದ ಮಾತೃಶ್ರೀ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ನೀಡುತ್ತಿದ್ದರು.

ಅವರೂ ಸಹ ಪರಿಚಿತರೇ. ತಮಾಷೆಯ ಡಾಕ್ಟರ್ ಅವರು. ತುಂಬಾ ಮೃದು ಮನುಷ್ಯರು. ಬಡವರನ್ನು ಕಂಡರೆ ಪ್ರೀತಿ ಹೆಚ್ಚು. ನೆಲಮಂಗಲದಲ್ಲೇ ಕಡಿಮೆ ವೆಚ್ಚದ ಆಸ್ಪತ್ರೆ ಅವರದು. ಹೇ ನಾನು ಅದೇ ಮೆಡಿಷನ್ ನೇ ಹಾಕಿರೋದು ಅಂದ್ರು.‌ ಮಹೇಂದ್ರ ಅವರೇ ಜಾಸ್ತಿ ಎದುರುತ್ತಿದ್ದಾರೆ ಅಂದ್ರು.

ಬೆಂಗಳೂರಿನಿಂದ ಡಾಕ್ಟರ್ ಅವರನ್ನು ಕರೆಸಿದ್ರು. ಆದ್ರು, ಕೊನೆಗೂ ಅವರಿಗೆ ಗೊತ್ತಾಗಿ ಬಿಟ್ಟಿತು. ರಜನಿ ಡಾಕ್ಟರೇ ಬರಬೇಕು ಅಂತಾ!!

ಮರು ದಿನ, ರಜನಿ ಡಾಕ್ಟರಿಗೆ ಶ್ವೇತಾ ಕಡೆಯಿಂದ ಫೋನ್ ಮಾಡಿಸಿದ್ರು.‌ ನನ್ನ ಮುಂದೇನೆ ಮಾತನಾಡಿದ್ರು. ಹತ್ತು ಹದಿನೈದು ನಿಮಿಷ. ಇಬ್ಬರು ಫೋನ್ ನಲ್ಲೇ ನಗಾಡಿದರು. ಕಡೇಗೆ ಯಾವ, ಯಾವ ಮೆಡಿಷನ್ ಕೊಡಲಾಗಿದೆ ಎಂದು ಫೋನ್ ನಲ್ಲೇ ವಿವರಿಸಿದರು. ರಜನಿ ಅವರು ಅತ್ತ ಕಡೆಯಿಂದ ಹೇಳಿದ ಮತ್ತೊಂದು ಮೆಡಿಷನ್ ಬರೆದುಕೊಂಡರು. ಸಂಜೆ ವೇಳೆಗೆ ಆರೋಗ್ಯ ಸುಧಾರಿಸತೊಡಗಿತು.

ಗುಬ್ಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ಡಾ. ರಜನಿ ಅವರು ಮನೆ ಮಾತಾಗಿದ್ದರು. ಅದರಲ್ಲೂ ಮಕ್ಕಳ ಚಿಕಿತ್ಸೆಯಲ್ಲಿ ಅವರದು ಎತ್ತಿದ ಕೈ.

ಅವರು ನನಗೆ ಹೇಗೆ ಪರಿಚಿತರಾದರು ಎನ್ನುವುದು ನೆನಪಿನಲ್ಲಿ ಉಳಿದಿಲ್ಲ. ತುಮಕೂರು ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕರಾಗಿದ್ದ ಸಂದರ್ಭದಲ್ಲಿ ಸುದ್ದಿ ವಿಚಾರವಾಗಿ ಅವರ ಪರಿಚಯ ಹೆಚ್ಚಾಯಿತು. ನಂತರದಲ್ಲಿ ನಾನು ಅವರ ಪರ್ಮನೆಂಟ್ ರೋಗಿಯಾದೆ!!

ಅವರೊಮ್ಮೆ ರೋಗಿಗೆ ತಮ್ಮದೇ ರಕ್ತ ನೀಡುತ್ತಾ ಚಿಕಿತ್ಸೆಯನ್ನೂ ನೀಡಿ ಬದುಕಿಸಿದ್ದು ತುಂಬಾ ಜನರಿಗೆ ಗೊತ್ತಿಲ್ಲ!

ಡಾಕ್ಟರ್ ಗಳು ಸಾಮಾನ್ಯವಾಗಿ ಜೋರು ಇರುವುದಿಲ್ಲ. ಇವರು ಬಹಳ ಜೋರಿನ ಡೋಂಟ್ ಕೇರ್ ಡಾಕ್ಟರ್. ಇವರನ್ನು ಕಂಡರೆ ಇಲಾಖೆಯಲ್ಲಿ ಸಾಕಷ್ಟು ಜನರಿಗೆ ಭಯ, ಮತ್ತಷ್ಟು ಜನರಿಗೆ ಹೊಟ್ಟೆಕಿಚ್ಚು! ಒಳ್ಳೆಯ ಕವಿಯತ್ರಿಯೂ ಆಗಿರುವ ಅವರು ಡಾ. ಬೆಸಗರಹಳ್ಳಿ ರಾಮಣ್ಣ ಅವರ ಶಿಷ್ಯೆ.

ರಸ್ತೆಯಲ್ಲಿ ನಿಂತುಕೊಂಡರೂ ಸಹ ರೋಗಿಗಳು ಬಂದು ಚಿಕಿತ್ಸೆ ಪಡೆಯುವಷ್ಟು ರೋಗಿಗಳಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ.

ಮಧ್ಯ ರಾತ್ರಿ, ಬೆಳಗಿನ ಜಾವ ಯಾವಾಗ ಬೇಕಾದರೂ ರೋಗಿಗಳಿಗೆ ಲಭ್ಯ. ಒಂದೊಮ್ಮೆ ದೆಹಲಿ ಹೋಗಬೇಕಾದವರು ಬೆಂಗಳೂರಿನಿಂದ ಕಾರು ಬಾಡಿಗೆ ಪಡೆದು ನನ್ನ ಮಗನನ್ನು ನೋಡಿ ಸೀದಾ ಏರ್ ಪೋರ್ಟ್ ಗೆ ಹೋಗಿದ್ದರು.

ನಮ್ಮನೆಯಲ್ಲಿ ಯಾವಾಗಲೂ ತಮಾಷೆ ಮಾಡ್ತಾರೆ. ಅವನಿಗೆ ರಜನಿ ಡಾಕ್ಟರ್ ಹೇಳಿದ್ರೆ ಸಾಕು ಅಂತಾ. ಬೆಂಗಳೂರಲ್ಲೇ ಇರಲಿ, ಊರಲ್ಲೇ ಇರಲಿ ಆರೋಗ್ಯ ಕೆಟ್ಟರೆ ರಜನಿ ಡಾಕ್ಟರ್ ಇರುವಲ್ಲಿ ಹೋಗಬೇಕು.

ಡಾಕ್ಟರ್ ಗಳು ದೇವರಾಗೋದು ಹೀಗೇನೆ. ನಾನು ನೋಡಿದ, ಕೇಳಿದ, ನೋಡದೇ ಇರುವ,‌ಕೇಳದೇ ಇರುವ ಎಲ್ಲ ಡಾಕ್ಟರ್ ಗಳಿಗೆ ವೈದ್ಯರ ದಿನದ ಶುಭಾಷಯಗಳು.

ಇನ್ನೊಂದು ಮಾತು ಮರೆತಿದ್ದೆ. ನಾನು ಸಣ್ಣವನಿದ್ದಾಗ ನಮ್ಮೂರಿನ ಆಸ್ಪತ್ರೆಯಲ್ಲಿ ಮಹಮದ್ ಗೌಸ್ +( ಇದೇ ಹೆಸರು ಇರಬಹುದು) ಇದ್ದರು. ಜ್ವರದಿಂದ ಬಳಲುತ್ತಿದ್ದ ನನಗೆ ಇಂಜೆಕ್ಷನ್ ಚುಚ್ಚಲು ಹೋದಾಗ ಅವರನ್ನು ಒದೆದಿದ್ದೆ. ಆದರೂ ಅವರ ಪ್ರೀತಿಯ ನಗುಮುಖ ಬದಲಾಗಲಿಲ್ಲ. ಆನಂತರ ತುಂಬಾ ವರ್ಷಗಳ ಕಾಲ, ಈಗಲೂ ಆ ಘಟನೆ ನನ್ನನ್ನು ಕಾಡುತ್ತಿದೆ. ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಅವರು ನೆನಪು ಸದಾ ನನ್ನೊಳಗಿದೆ. ಆರೇಳು ಹಳ್ಳಿಗಳ ಅದೆಷ್ಟು ಸಾವಿರ ಜನರನ್ನು ಉಳಿಸಿದ್ದಾರೆ ಅವರು.

RELATED ARTICLES

1 COMMENT

  1. ಹೌದು Dr. ರಜನಿ mam ತುಂಬಾ ವೊಳ್ಳೆಯವರು ನಾನು ಕೂಡ ಅವರ ಬಿಗ್ fan, ಅವರನ್ನು ನೋಡಿಯೇ ನಾನು ಕೂಡ ಸಮುದಾಯದಲ್ಲಿ ಮಾತನಾಡುವುದನ್ನು ಮತ್ತು ಸಮುದಾಯಕ್ಕೆ ಎಲ್ಲಾ ಅರೋಗ್ಯ ಕಾರ್ಯಕ್ರಮದ ಕುರಿತು ಅರಿವು ಮೂಡಿಸುವುದನ್ನು ಕಲಿತಿರುವೆ Thank you so much Dr ರಜನಿ mam

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?