Publicstory/prajayoga
ತುಮಕೂರು: ರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 26 ರಂದು ತುಮಕೂರಿನ ಗಾಜಿನಮನೆಯಲ್ಲಿ ಗುರುವಂದನೆ ಹಾಗೂ ತಿಗಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ತಿಗಳ ಕ್ಷತ್ರಿಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ಬಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 4 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ಓರ್ವ ಶಾಸಕ, ಸಂಸದನಿಲ್ಲ. ನಮ್ಮನ್ನು ಕೇವಲ ಓಟ್‌ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿಗಣಿಸಿವೆ. 2 ಎ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಆದರೆ ತಿಗಳ ಅಭಿವೃದ್ಧಿ ನಿಗಮ ಇದುವರೆಗೂ ಸ್ಥಾಪನೆ ಮಾಡಿಲ್ಲ. ಅಲ್ಲದೆ 2 ಎ ನಲ್ಲಿರುವ ಸಮುದಾಯವನ್ನು ಪ್ರವರ್ಗ 1ರ ಜಾತಿ ಪಟ್ಟಿಗೆ ಸೇರಿಸಲು ಹಲವಾರು ಹೋರಾಟ ಮಾಡಿದರೂ ಈ ಸರಕಾರ ಕಿವಿಗೋಡುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 26 ರಂದು ರಾಜ್ಯದ ಎಲ್ಲಾ ತಿಗಳನ್ನು ಒಗ್ಗೂಡಿಸಿ, ಸಾಮಾವೇಶ ಮಾಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಬಿಬಿಎಂಪಿ ಸದಸ್ಯ ಎ.ಎಚ್.ಬಸವರಾಜು, ನಗರ ಸಭಾ ಮಾಜಿ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಹೆಚ್.ಕೃಷ್ಣಪ್ಪ ಅರ್ಜುನ್, ಟಿ.ವಿ.ರಾಮಣ್ಣ,ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.