Publicstory/prajayoga
ತಿಪಟೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಸೂತ್ರವಾಗಿ ಸಮಾಜ ನಡೆಯಲು ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಹಿರಣ್ಣಯ್ಯ ತಿಳಿಸಿದರು.
ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ ಪೋಟೋಗಳ ಪಾತ್ರ ದೊಡ್ಡದಿದೆ ಎಂದರು.
ಇದರಲ್ಲಿ ಛಾಯಾಚಿತ್ರಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಛಾಯಾಚಿತ್ರ ಎಂಬುದು ಕೇವಲ ಒಂದು ಫೋಟೋ ಅಲ್ಲ ಅದು ಸಮಾಜದ ಹುಳುಕುಗಳನ್ನು, ವ್ಯವಸ್ಥೆಯನ್ನು, ಘೋಷಣೆಗಳನ್ನು, ರಾಜಕೀಯ ವ್ಯಕ್ತಿಗಳ ವರ್ಚಸ್ಸನ್ನು ಹಾಗೂ ವ್ಯವಸ್ಥೆಯ ಪರಿಯನ್ನು ವಿವರಿಸುತ್ತದೆ. ಛಾಯಾಚಿತ್ರ ಎಂಬುದು ಇಂದು ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅರ್ಥಶಾಸ್ತ್ರ ವಿಭಾಗದ ಡಾ. ವೆಂಕಟಚಲಯ್ಯ ಮಾತನಾಡಿ, ನಾವು ಮೊದಲು ಒಂದು ನಮ್ಮ ಪೋಟೋ ತೆಗೆಸಲು ದೂರದ ಊರುಗಳಿಗೆ ಹೋಗಿ ಬರಬೇಕಾಗಿತ್ತು. ಇಂದು ಛಾಯಾಚಿತ್ರಗಳಲ್ಲಿ ಅತ್ಯಧಿಕ ತಂತ್ರಜ್ಞಾನಿದೆ. ಈ ಹಿಂದೆ ಒಂದು ವಿಭಾಗಕ್ಕೆ ಸೀಮಿತವಾದ ವಿದ್ಯಾರ್ಥಿಗಳು ಆಸಕ್ತಿದಾಯಕ ವಿಚಾರಗಳನ್ನು ಓದುವ ಅವಕಾಶವಿರಲಿಲ್ಲ. ಇಂದು ಎನ್‌ಇಪಿ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ. ಇದು ಸಂತೋಷದಾಯಕ, ಪತ್ರಿಕೋದ್ಯಮ ಇಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಃಶಾಸ್ತ್ರ ವಿಭಾಗದ ಜಗದೇವಪ್ಪ , ವಾಣಿಜ್ಯ ವಿಭಾಗದ ಮುಖ್ಯಸ್ಥರು ರಮೇಶ್, ಪತ್ರಿಕೋದ್ಯಮ ವಿಭಾಗದ ಶಂಕರಪ್ಪ (ಶಿರಾ), ದೇವರಾಜು ಸಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.