ತುಮಕೂರು: ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಲೋಕಸಭೆ ಬಾರದಂತೆ ತಡೆಯಲು ಕಾಂಗ್ರೆಸ್ ಯತ್ನಿಸಿತು. ಇದೇ ಕಾರಣದಿಂದಾಗಿಯೇ ಬಾಂಬೆ ಕ್ಷೇತ್ರದ ಚುನಾವಣೆಯಲ್ಲಿ ಅವರನ್ನು ಇನ್ನಿಲ್ಲದಂತೆ ಸೋಲಿಸಿತು ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.
ತಾಲ್ಲೂಕಿನ ಹೊನಸಿಗೆರೆ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಅಂಬೇಡ್ಕರ್ ಅವರಿಗೆ ಆರ್ ಎಸ್ ಎಸ್ ( ಆಗಿನ ಜನಸಂಘ) ಬೆಂಬಲ ನೀಡಿ ರಾಜ್ಯಸಭಾ ಸದಸ್ಯರಾಗಿ ಮಾಡಲಾಯಿತು. ಇದನ್ನು ಪರಿಶಿಷ್ಟ ವರ್ಗದವರು ಮರೆಯಬಾರದು ಎಂದರು.
ಅತಿ ಬಡ ವಿದ್ಯಾರ್ಥಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಕನಸಿನೊಂದಿಗೆ ಸರ್ಕಾರಿ ಶಾಲೆಗಳನ್ನು ನಾನು ಕಟ್ಟಿದೆ. ಶಿಕ್ಷಣ ಸಿಕ್ಕಾಗ ಮಾತ್ರವೇ ಅಭಿವೃದ್ಧಿ ಸಾಧ್ಯ ಎಂದರು.
ಕಾಲೋನಿಗಳ ಸ್ವಚ್ಛತೆಗೆ ನನ್ನ ಅವಧಿಯಲ್ಲಿ ಆದ್ಯತೆ ನೀಡಿದೆ. ಸಿ.ಸಿ. ರಸ್ತೆ, ಚರಂಡಿಗಳನ್ನು ಮಾಡಿಸಿದ್ದೇನೆ. ಆದರೆ ಈಗಿನ ಶಾಸಕರು ಒಂದು ಹಿಡಿ ಮಣ್ಣನ್ನು ಸಹ ಹಾಕಿಸಿಲ್ಲ. ಪರಿಶಿಷ್ಟ ರ ಕಾಲೋನಿಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಪ್ರತಿ ಕುಟುಂಬದ ಒಬ್ಬೊಬ್ಬರಿಗೆ ಕೈಗಾರಿಕೆಗಳಲ್ಲಿ ಕೆಲಸ ಕೊಡಿಸಬೇಕೆಂಬುದು ನನ್ನ ಕನಸಾಗಿದೆ. ಸಮುದಾಯ ಹಿಂದುಳಿದಿದೆ ಎಂದರು.
ಅಂಬೇಡ್ಕರ್ ಇಲ್ಲದಿದ್ದರೆ ಶ್ರಮಿಕರಿಗೆ ನ್ಯಾಯವೇ ಸಿಗುತ್ತಿರಲಿಲ್ಲ. ಅಂಬೇಡ್ಕರ್ ಕೊಡುಗೆ ಅಪಾರ. ಕಾಂಗ್ರೆಸ್ ಗೆ ಅಂಬೇಡ್ಕರ್ ಕಂಡರೆ ಆಗುತ್ತಿರಲಿಲ್ಲ. ಹೀಗಾಗಿಯೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿರಲಿಲ್ಲ ಎಂದು ಕಿಡಿಕಾರಿದರು.