ನ್ಯಾಯಕ್ಕಾಗಿ, ಶಾಂತಿಯ ಗ್ರಾಮಾಂತರಕ್ಕಾಗಿ ಬಿಜೆಪಿ ನಗರದಲ್ಲಿ ಇಂದು ಮೌನ ಪ್ರತಿಭಟನೆ, ಧರಣಿ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ಸುರೇಶಗೌಡರು ತಿಳಿಸಿದ್ದಾರೆ.
ಇದೇ ವೇಳೆ ಅವರು ಗ್ರಾಮಾಂತರದ ಜನರಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರವನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.
ಪಂಚರತ್ನ ರಥಯಾತ್ರೆಯ ವೇಳೆ ನನ್ನ ಪಕ್ಷದ ಕಾರ್ಯಕರ್ತನ ಮೇಲೆ ಶಾಸಕರಾದ ಸನ್ಮಾನ್ಯ ಗೌರಿಶಂಕರ್ ಅವರ ಕುಮ್ಮಕ್ಕಿನಿಂದ ಅವರ ಪಿಎ ಸುರೇಶ್ ಹಾಗೂ ಬೆಂಬಲಿಗರು ಹಿಗ್ಗಾಮಗ್ಗಾ ಥಳಿಸಿರುವುದನ್ನು ಮಾಜಿ ಶಾಸಕನಾಗಿ, ನಾನು ಉಗ್ರವಾಗಿ ಖಂಡಿಸುತ್ತೇನೆ.
ಗ್ರಾಮಾಂತರ ಕ್ಷೇತ್ರವು ಶಾಂತಿಯ ಕೈತೋಟ, ಸಮೃದ್ಧಿಯ ನೆಲೆಯಾಗಿರಬೇಕೆಂದು ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಎಡೆಯೂರು ಸಿದ್ದಲಿಂಗೇಶ್ವರರು, ಉದ್ದಾನಸ್ವಾಮಿಗಳು, ಶಿವಕುಮಾರಸ್ವಾಮೀಜಿಗಳು ನಡೆದಾಡಿದ ತಪೋಭೂಮಿಯೊಳಗೆನೆಲಮಂಗಲದಿಂದ ಬಂದಿರುವ ಜನರು ಹಿಂಸೆಯನ್ನು ಪ್ರಚೋದಿಸಲು ಮಾಡುತ್ತಿರುವ ಪ್ರಯತ್ನವನ್ನು ಗ್ರಾಮಾಂತರದ ಜನರು ವಿಫಲಗೊಳಿಸುತ್ತಾರೆ.
ನನ್ನ ಕೊಲೆಗೆ ಸುಫಾರಿ , ಏನು ಅರಿಯದ ಕಂದಮ್ಮಗಳಿಗೆ ನಕಲಿ ಬಾಂಡ್ ಗಳನ್ನು ನೀಡಿ ಎಳೆಯ ಮಕ್ಕಳ ಎದೆಯಲ್ಲಿ ಮೋಸ, ವಂಚನೆಯನ್ನು ಬೆಳೆಸುವುದು, ಹಣ, ಹೆಂಡದ ಮೂಲಕ ಮುಗ್ದ ಯುವಕರನ್ನು ಕುಡಿತದ ದಾಸರಾಗಿ ಮಾಡಿರುವುದು ಇವೆಲ್ಲವನ್ನು ಜನರು ಗಮನಿಸಿದ್ದಾರೆ.
ತುಮಕೂರು ಜಿಲ್ಲೆಗೆ ತನ್ನದೇ ಘನತೆ, ಗೌರವವಿದೆ. ಹೊರ ಜಿಲ್ಲೆಯಿಂದ ರೌಡಿಸಂ ಎಳೆದು ತರುವ ಜನರಿಗೆ ಇಲ್ಲಿಯ ಜನರೇ ಉತ್ತರ ನೀಡುಬೇಕೆಂದು ಬಿಜೆಪಿ ಬಯಸುತ್ತದೆ.
ವೈ.ಕೆ.ರಾಮಯ್ಯ, ಎಚ್.ನಿಂಗಪ್ಪ, ಮುದ್ದಹನುಮೇಗೌಡರು, ಕೆ.ಎನ್.ರಾಜಣ್ಣ, ಆರ್. ನಾರಾಯಣ್ ,ಇಂಥವರೆಲ್ಲರೂ ಇಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಶಾಂತಿ, ಸೌಹಾರ್ದತೆ ಗ್ರಾಮಾಂತರ ಮಣ್ಣಿನ ಗುಣವಾಗಿದೆ. ಇಂಥ ನೆಲದಲ್ಲಿ ಕೊಲೆ, ಸುಲಿಗೆ, ಹಲ್ಲೆಗಳಿಗೆ ನಮ್ಮ ಜನರು ಅವಕಾಶ ಕೊಡಲಾರರು.
ಹಿಂದಿನ ಹತ್ತು ವರ್ಷದ ಅವಧಿಯಲ್ಲಿ ಕ್ಷೇತ್ರ ಶಾಂತಿಯುತವಾಗಿತ್ತು. ಕಳೆದ ಐದು ವರ್ಷಗಳಿಂದ ಹಲ್ಲೆ,, ಅಧಿಕಾರಿಗಳಿಂದ ಸುಲಿಗೆ, ಬೆದರಿಕೆಗಳು, ಹಪ್ತಾ ವಸೂಲಿ ಮಾಡಲಾಗುತ್ತಿದೆ. ಹೊರಗಿನ ರೌಡಿಗಳನ್ನು ಕರೆತಂದು ಜನರನ್ನು ಹೆದರಿಸಿ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ.
ಸುಮ್ಮನೇ ಒಬ್ಬನೇ ತನ್ನ ಹೆಂಡತಿಯೊಂದಿಗೆ ಇದ್ದ ಬಿಜೆಪಿ ಕಾರ್ಯಕರ್ತನ ಮೇಲಿನ ಹಲ್ಲೆಯನ್ನು, ಒಂದು ಜನಾಂಗವನ್ನು ಕೀಳಾಗಿ ಹೀಯ್ಯಾಳಿಸುವುದನ್ನು ಬಲವಾಗಿ ಖಂಡಿಸಿ ಈ ಮೌನ ಧರಣಿ ನಡೆಸಿದ್ದೇನೆ.
ಬಿಜೆಪಿ ಕಾರ್ತಕರ್ತರು, ಅಭಿವೃದ್ಧಿ ಪರವಾದ ಗ್ರಾಮಾಂತರದ ಎಲ್ಲ ವರ್ಗದ ಜನರು ಹೊರ ಭಾಗದ ರೌಡಿಯಿಸಂನ ಬೆದರಿಕೆಯನ್ನು ಒಗ್ಗಟ್ಟು, ಮೌನದಿಂದಲೇ ಹಿಮ್ಮೆಟ್ಟಿಸಬೇಕೆಂದು ಮಾಜಿ ಶಾಸಕನಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ.
ಇಂತಿ
ಸುರೇಶಗೌಡರು
ಮಾಜಿ ಶಾಸಕರು, ತುಮಕೂರು ಗ್ರಾಮಾಂತರ ಕ್ಷೇತ್ರ