ದಲಿತ ಬಂಡಾಯದ ಸಂದರ್ಭದಲ್ಲಿ ಬರೆಯಲಾರಂಭಿಸಿದ ಸಾರಾ ಅಬೂಬಕರ್ ಇಸ್ಲಾಂಧರ್ಮ ಹಾಗೂ ಮಲೆಯಾಳಂ ಭಾಷೆಯ ಸತ್ವವನ್ನು ತಮ್ಮಲ್ಲಿ ರೂಢಿಸಿಕೊಂಡು ಬರೆದವರು. ಧರ್ಮದ ಹೆಸರಿನಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆ ದಬ್ಬಾಳಿಕೆಗಳನ್ನು ತಮ್ಮ ಕೃತಿಗಳ ಮೂಲಕ ಪ್ರಶ್ನಿಸುತ್ತಾ ಬಂದವರು. ಚಂದ್ರಗಿರಿಯ ತೀರದಲ್ಲಿ, ಸಹನಾ, ವಜ್ರಗಳು – ಈ ಮುಂತಾದ ಕಾದಂಬರಿಗಳಲ್ಲಿ ಸಾರಾ ಪ್ರಶ್ನಿಸ ಹೊರಡುವುದು ಧರ್ಮದ ಹೆಸರನ್ನು ತಮಗೆ ಬೇಕಾದಂತೆ ಬಳಸಿ ಅಮಾಯಕರನ್ನು, ಮುಗ್ಧ ಸ್ರೀಯರನ್ನು ಶೋಷಿಸ ಹೊರಟ ಭ್ರಷ್ಟ ವ್ಯವಸ್ಥೆಯನ್ನು. ಅವರ ಕೆಲ ಕಾದಂಬರಿಗಳು ಚಲನಚಿತ್ರವಾಗಿಯೂ ಜಾಗೃತಿ ಮೂಡಿಸಿ ಜನರ ಮೆಚ್ಚುಗೆಗೆ ಒಳಗಾಗಿವೆ.
ವ್ಯವಸ್ಥೆಯ ಅರಾಜಕತೆಯನ್ನು ಮುಗ್ಧವಾಗಿ ಅನುಭವಿಸುತ್ತಾ ಬಂದವರೇ ಪ್ರತಿಭಟಿಸತೊಡಗುವುದು ನಿಜವಾದ ಅರ್ಥದಲ್ಲಿ ಬಂಡಾಯವೇ ಆಗಿದೆ. ಗಂಡ ಹಾಗೂ ತಂದೆಯ ಪ್ರತಿಷ್ಠೆಗೆ ಬಲಿಪಶುವಾಗುವ ‘ಚಂದ್ರಗಿರಿಯ ತೀರ’ದಲ್ಲಿನ ಅಸಹಾಯಕ ನಾದಿರಾ, ಬದುಕಿನ ಕಹಿಯಲ್ಲಿ ನೊಂದು ಅರಳಿ ಕ್ಷಮಯಾಧರಿತ್ರಿ ಎನಿಸಿಕೊಂಡು ಕ್ರಮೇಣ ಕಲ್ಲಾಗುತ್ತಾ ಹೋಗುವ ‘ಸಹನಾ’ ಕಾದಂಬರಿಯ ನಸೀಮಾ ಸಾರಾ ಕಟ್ಟಿಕೊಡುವ ವಾಸ್ತವ ಪಾತ್ರಗಳು. ಎಲ್ಲಾ ಕಾದಂಬರಿಗಳು ಕೊನೆಗೊಳ್ಳುವುದು ಪ್ರತಿಭಟನೆ ಹಾಗೂ ದಿಟ್ಟತನದ ನಿರ್ಧಾರಗಳಿಂದ.
ಹಿರಿಯ ಲೇಖಕಿಯಾದ ಸಾರಾ ಇತ್ತೀಚೆಗೆ ಅನಾರೋಗ್ಯಪೀಡಿತರಾಗಿ ಜನಸಂಪರ್ಕದಿಂದ ದೂರವೇ ಉಳಿದಿದ್ದರು. ಲಂಕೇಶ್ ಪತ್ರಿಕೆಯ ಮೂಲಕ ತಮ್ಮ ಬರಹದ ದಾರಿಯನ್ನು ಕಂಡುಕೊಂಡ ಸಾರಾ ಅವರು ಮುಸ್ಲಿಂ ಸಮುದಾಯದ ಬರಹಗಾರರಿಗೆ ಹಿರಿಯಕ್ಕನಂತೆ ಅಭಿವ್ಯಕ್ತಿಯಲ್ಲಿ ವಾಸ್ತವತೆಯ, ಪ್ರತಿಭಟನೆಯ ದಾರಿ ನಿರ್ಮಿಸಿದವರು. ಆ ನಂತರದ ಮುಸ್ಲಿಂ ಸಮುದಾಯದ ಬರಹಗಾರರು ಭಿನ್ನ,ಭಿನ್ನ ನೆಲೆಗಳಲ್ಲಿ ತಮ್ಮದೇ ಆದ ದಾರಿಗಳನ್ನು ಕಂಡುಕೊಂಡರು. ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಒಳಗೊಂಡಂತೆ ಅತ್ತಿಮಬ್ಬೆ, ನಾಡೋಜ ಮುಂತಾದ ಶ್ರೇಷ್ಠ ಪುರಸ್ಕಾರಗಳನ್ನು ಅವರು ಪಡೆದಿದ್ದರು. ಸಾರಾ ಅಬೂಬಕರ್ ಅವರ ಸಾವು ಕನ್ನಡದ ಪಾಲಿಗೆ ಕಳಚಿದ ಒಂದು ಮುಖ್ಯವಾದ ಕೊಂಡಿಯೆಂದೇ ಹೇಳಬಹುದು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಹೆಚ್ ಎಲ್ ಪುಷ್ಪಾ ಅವರು ಸಂತಾಪ ಸೂಚಿಸಿದ್ದಾರೆ