ಮಹೇಂದ್ರ ಕೃಷ್ಣಮೂರ್ತಿ
ಇಂದು ಪ್ರಧಾನಿ ಮೋದಿ ಅವರು ಗುಬ್ಬಿ ಬಳಿ ಬಿದರೆಕಾವಲ್ ನಲ್ಲಿ ಲೋಕಾರ್ಪಣೆ ಮಾಡುತ್ತಿರುವ ಎಚ್ ಎಎಲ್ ಲಘು ಯುದ್ಧ ವಿಮಾನ ತಯಾರಿಕಾ ಘಟಕ ಇಲ್ಲಿಗೆ ಬರಲು ಕಡೇ ಕ್ಷಣದ ಪ್ರಯತ್ನ ರೋಚಕವಾಗಿತ್ತು.
ಕಡೇ ಕ್ಷಣದಲ್ಲಿ ಅಳೆದು ತೂಗಿ ಈ ವ್ಯಕ್ತಿಯ ಪ್ರಯೋಜನ ಪಡೆಯುವಾಗ ರಾತ್ರಿ ಹತ್ತು ದಾಟಿತ್ತು!
ಇಲ್ಲಿ ಎಚ್ ಎ ಎಲ್ ತರುವ ಹಿಂದೆ ನಡೆದ ಅನೇಕ ಕಥನಗಳು ಜನಜನಿತ. ಎಲ್ಲಿಯ ಯುದ್ಧ ವಿಮಾನ, ಎಲ್ಲಿಯ ಗುಬ್ಬಿ ಎಂದು ಆಡಿಕೊಂಡುವರು ಇದ್ದರು.
ಈ ಘಟಕದ ಹಿಂದಿನ ಮೊದಲ ಕನಸು ಅಭಿವೃದ್ಧಿ ರೆಸಲ್ಯೂಷನ್ ಫೋರಂ ನ, ಈಗ ಶಕ್ತಿ ಪೀಠದ ಕುಂದನರನಹಳ್ಳಿ ರಮೇಶ್ ಅವರದು. ನಂತರ ಈ ಯೋಜನೆ ಜಾರಿಗೆ ತರಬೇಕೆಂದು ಸಂಸದ ಜಿ.ಎಸ್.ಬಸವರಾಜ್ ಅವರಿಗೆ ಭಿನ್ನವಿಸಿಕೊಂಡರು. ನಂತರ ಎರಡು ದಶಕದ ಕಾಲ ಹೋರಾಟದ ಕಥನ ಅದು. ಈ ಬಗ್ಗೆ ಈಗಾಗಲೇ ರಮೇಶ್ ಬರೆದುಕೊಂಡಿದ್ದಾರೆ.
ಆದರೆ ಕಡೇ ದಿನಗಳಲ್ಲಿ ಈ ಘಟಕವನ್ನು ಶಿರಾಗೆ ತೆಗೆದುಕೊಂಡು ಹೋಗಲು ಮಾಜಿ ಸಚಿವ ಟಿ.ಬಿ.ಜಯಚಂದ್ರ ಪ್ರಯತ್ನ ಪಟ್ಟು ಸೋತರು. ಯೋಜನೆಗಾಗಿ ತುಮಕೂರಿಗರ ನಡುವೆ ಪೈಪೋಟಿಯ ತೆರೆಮರೆಯ ಕತೆಗಳು ಚೆನ್ನಾಗಿತ್ತು.
ಇದರ ನಡುವೆ ಗೋವಾಗೆ ಯೋಜನೆ ತೆಗೆದುಕೊಂಡು ಹೋಗಲು ಆಗ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ತೀವ್ರ ಪ್ರಯತ್ನಪಟ್ಟರು. ಯೋಜನೆ ಉಳಿಸಿಕೊಳ್ಳಲು ಆಗಿನ ರಾಜ್ಯ ಸರ್ಕಾರ ಸ್ವಲ್ಪ ಉದಾಸೀನದಂತೆಯೇ ನಮಗೆ ತೋರಿತು.
ಯೋಜನೆಯ ಮಂಜೂರಾತಿಯ ಕಡೇ ದಿನಗಳ ಪ್ರತಿ ದಿನದ ಬೆಳವಣಿಗೆಗಳನ್ನು ಕುಂದರನಹಳ್ಳಿ ರಮೇಶ್ ನನ್ನೊಂದಿಗೆ ಚರ್ಚಿಸುತ್ತಿದ್ದರು. ಕೆಲವೊಂದನ್ನು ಪ್ರಜಾವಾಣಿಯಲ್ಲಿ ವರದಿ ಮಾಡುತ್ತಿದ್ದೆ. ಕೆಲವೊಂದನ್ನು ವರದಿ ಮಾಡು ವಂತಿರಲಿಲ್ಲ.
ಯೋಜನೆಗೆ ಭೂಮಿ ಮಂಜೂರಾತಿಯ ಕಡೇ ದಿನ ಇಂಥದೇ ಇಕ್ಕಟ್ಟಿಗೆ ಸಿಲುಕಿದೆವು. ಆ ದಿನ ಹೋಟೆಲ್ ಹೊಯ್ಸಳದಲ್ಲಿ ನಾನು, ಕುಂದರನಹಳ್ಳಿ ರಮೇಶ್ ನಾಲ್ಕೈದು ಸಲ ಸಭೆ ಸೇರಿದವು. ಪ್ರಜಾಪ್ರಗತಿ ಅಯ್ಯರ್ ಅವರ ಸಲಹೆ ಕೂಡ ಪಡೆದ ನೆನಪು. ಪತ್ರಿಕೆಯಲ್ಲಿ ಸುದ್ದಿ ಬರೆದರೆ ಯೋಜನೆ ಉಳಿದುಕೊಳ್ಳಬಹದು ಅಥವಾ ಇದನ್ನು ರಕ್ಷಣಾ ಸಚಿವರು ತಮ್ಮ ಅಹಃ ಆಗಿ ತೆಗೆದುಕೊಂಡರೆ ಯೋಜನೆಯ ಕಡತವೇ ನನಗುದಿಗೆ ಬೀಳುವ ಸಂಭವ. ಹೀಗಾಗಿ ಅಂದಿನ ಘಟನೆಗಳ ವರದಿ ಮಾಡದಿರಲು ನಿರ್ಧರಿಸಲಾಯಿತು.
ಆದರೆ ರಾತ್ರಿ ಹತ್ತು ಗಂಟೆಯಲ್ಲಿ , ನಾಳೆಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಭೂಮಿ ನೀಡುವ ಕಡತ ಮಂಡಿಸಿದರೆ ಮಾತ್ರ ಯೋಜನೆ ಉಳಿಯಲಿದೆ. ಈ ಕೆಲಸ ಆಗಲೇಬೇಕು ಎಂದು ನಿರ್ಧಾರ ಮಾಡಿದೆವು.
ಆ ಕ್ಷಣವೇ ಪ್ರಜಾವಾಣಿ ಬೆಂಗಳೂರಿನಲ್ಲಿ ಹಿರಿಯ ವರದಿಗಾರರಾಗಿದ್ದ ಬಿ.ಎನ್.ಶ್ರೀಧರ್ ಅವರಿಗೆ ನಾನೇ ಕರೆ ಮಾಡಿದೆ. ಇಡೀ ವೃತಾಂತವನ್ನು ಹೇಳಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಮನಸ್ಸು ಮಾಡಿದರೆ ಕೆಲಸ ಆಗಲಿದೆ ಎಂದೂ ಹೇಳಿದೆ.
ಅಷ್ಟಾರಲ್ಲಾಗಲೇ ರಾತ್ರಿ 10.30 ದಾಟಿತ್ತು. ಈ ಸಮಯದಲ್ಲಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಕರೆ ಮಾಡಿದರೆ ಅವರು ಫೋನ್ ರಿಸೀವ್ ಮಾಡ್ತಾರೆ ಎಂಬುದೇ ಪ್ರಶ್ನೆ ಎಂದರು ಶ್ರೀಧರ್.
ಮರುದಿನದ ಪತ್ರಿಕೆಯಲ್ಲಿ ಒಂದು ಸಣ್ಣ ಸುದ್ದಿ, ಎಚ್ ಎಎಲ್ ಗೆ ಭೂಮಿಯನ್ನು ಇಂದಿನ ಸಚಿವ ಸಂಪುಟದಲ್ಲೇ ಮಂಜೂರು ಮಾಡಲು ಅನುಮೋದನೆ ನೀಡಲಾಗುವುದು. ಯೋಜನೆ ಜಾರಿಗೆ ಸರ್ಕಾರ ಶತಸಿದ್ಧ ಎಂದು ಕೌಶಿಕ್ ಮುಖರ್ಜಿ ಹೇಳಿದ್ದರು. ಮರು ದಿನವೇ ಭೂಮಿ ಮಂಜೂರಾಯಿತು. ಕನಸು ನನಸಾಯಿತು.
ಎಚ್ ಎ ಎಲ್ ಗೆ ಪ್ರಜಾವಾಣಿಯ ಕೊಡುಗೆಯೂ ಸೇರಿಹೋಯಿತು. ಹಿರಿಯ ಪತ್ರಕರ್ತ ಬಿ.ಎನ್. ಶ್ರೀಧರ್ ಅವರು ಈಗ ಬೆಂಗಳೂರಿನಲ್ಲಿದ್ದಾರೆ. ಅಂದ ಹಾಗೆ, ಅವರು ನಮ್ಮ ಜಿಲ್ಲೆಯ ಮಧುಗಿರಿಯವರು.