ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರತ್ ಎಂ ಎಸ್ ಅವರ
‘ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಕೃತಿಯನ್ನು ವಿಸ್ತಾರ ಚಾನಲ್ ನ ಸಿ ಇ ಒ ಹರಿಪ್ರಕಾಶ್ ಕೋಣೆಮನೆ ಬಿಡುಗಡೆ ಮಾಡಿದರು. ವಿಜಯವಾಣಿ ಸಂಪಾದಕರಾದ ಕೆ ಎನ್ ಚನ್ನೇಗೌಡ, ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಶರತ್ ಎಂ ಎಸ್, ಜಿ ಎನ್ ಮೋಹನ್, ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಅವರು ಉಪಸ್ಥಿತರಿದ್ದರು.
ಬೆಂಗಳೂರು: ದೇಶದ ಪ್ರತಿಯೊಬ್ಬರೂ ಆರ್ಥಿಕವಾಗಿ ಸುಭದ್ರರಾಗಿದ್ದರೆ ಮಾತ್ರ, ರಾಷ್ಟ್ರ ಆರ್ಥಿಕವಾಗಿ ಸುಭದ್ರವಾಗಿರಲು ಸಾಧ್ಯ. ಆದ್ದರಿಂದ ಸುರಕ್ಷಿತವಾದ ಸಣ್ಣ ಹೂಡಿಕೆಗಳನ್ನು ಮಾಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ವಿಸ್ತಾರ ನ್ಯೂಸ್ ನ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಹಾಗೂ ‘ಬಹುರೂಪಿ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುರೂಪಿಯ ಪ್ರಕಟಣೆ, ಶರತ್ ಎಂ.ಎಸ್. ಅವರ ‘ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್’ ಎಂಬ ಜಂಟಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕೃತಿ: ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್
ಕೃತಿಕಾರ: ಶರತ್ ಎಂ ಎಸ್
ಪ್ರಕಾಶನ :ಬಹುರೂಪಿ
ಬೆಲೆ: ರೂ 300
ಸಂಪರ್ಕ: 70191 82729
ಹಿಂದೆ ನಾವು ಇದ್ದಷ್ಟೇ ಹಣದಲ್ಲಿ ಬದುಕುವುದನ್ನು ಕಲಿತಿದ್ದೆವು. ಸಾಂಪ್ರದಾಯಿಕ ಮಾರ್ಗಗಳಲ್ಲಿ ಉಳಿತಾಯ ಮಾಡುತ್ತಿದ್ದೆವು. ಆದರೆ, ಈಗ ಈ ಹಣವನ್ನು ವಿವಿಧ ಆಯಾಮಗಳಲ್ಲಿ ಹೂಡಿಕೆ ಮಾಡಿ, ಹಣ ಗಳಿಸಲು ಜನ ಮುಂದಾಗುತ್ತಿದ್ದಾರೆ. ಇಂಥ ಹೂಡಿಕೆಗಳನ್ನು ಮಾಡುವಾಗ ಆರ್ಥಿಕ ಜ್ಞಾನ ಹೊಂದಿರುವುದು ಮುಖ್ಯವಾಗುತ್ತದೆ. ಇಂಥ ಜ್ಞಾನವನ್ನು ಒದಗಿಸುವಲ್ಲಿ ಮನಿ ಸೀಕ್ರೆಟ್ಸ್ ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್ ಪುಸ್ತಕ ಯಶಸ್ವಿಯಾಗುತ್ತದೆ ಎಂದು ಪ್ರಶಂಸಿದರು.
ಆರ್ಥಿಕ ಸಾಕ್ಷರತೆ ಇಲ್ಲದೆ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಯಶಸ್ಸು ಸಿಗುವುದಿಲ್ಲ. ಅಡ್ಡದಾರಿಯಲ್ಲಿ ಸಾಗಿ ಕೂಡ ಹಣ ಮಾಡಲು ಸಾಧ್ಯವಿಲ್ಲ. ಆದರೆ, ಅಧ್ಯಯನ ಪೂರ್ವಕವಾಗಿ ಹೂಡಿಕೆ ಮಾಡಿದಾಗ ಆರ್ಥಿಕವಾಗಿ ಲಾಭ ಗಳಿಸಲು ಸಾಧ್ಯ ಎಂದು ‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ ಹೇಳಿದರು.
ಪುಸ್ತಕದ ಕರ್ತೃ, ವಿಸ್ತಾರ ಚಾನಲ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಶರತ್ ಎಂ.ಎಸ್ ಮಾತನಾಡಿ ನಮ್ಮ ಶಿಕ್ಷಣ ವ್ಯವಸ್ಥೆ ಆರ್ಥಿಕ ಶಿಕ್ಷಣ ನೀಡದಿರುವುದು ದೊಡ್ಡ ದುರಂತ. ಶೇ.24 ಮಾತ್ರ ಆರ್ಥಿಕ ಸಾಕ್ಷರತೆ ಇದೆ ಇದನ್ನು ಹೆಚ್ಚಿಸುವಲ್ಲಿ ಗಮನ ನೀಡುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, ಹೂಡಿಕೆ ಕುರಿತು ಜನಸಾಮಾನ್ಯರಿಗೆ ಸಾಮಾನ್ಯ ಜ್ಞಾನ ಒದಗಿಸುವಂತೆ ಇರುವ ಮನಿ ಸೀಕ್ರೆಟ್ಸ್ ಪುಸ್ತಕ ತುಂಬಾ ಭಿನ್ನವಾಗಿದೆ. ಇಂಥ ಪುಸ್ತಕಗಳು ದೇಶದ ಧಿಕ್ಕನ್ನು ಬದಲಾಯಿಸುತ್ತದೆ ಎಂದರು.
ಹಿರಿಯ ಪತ್ರಕರ್ತ, ಬಹುರೂಪಿಯ ಜಿ ಎನ್ ಮೋಹನ್, ಕೆಯುಡಬ್ಲುಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಫ್ರೀಡಂ ಆಪ್ ಸಂಸ್ಥಾಪಕ ಸಿ.ಎಸ್. ಸುಧೀರ್ ಅವರು ಉಪಸ್ಥಿತರಿದ್ದರು.