ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗ ತೊಡಗಿದೆ.
ಕಾಂಗ್ರೆಸ್ ನಿಂದ ಷಣ್ಮುಖಪ್ಪ ಅವರಿಗೆ ಟಿಕೆಟ್ ನೀಡಿದ ಬಳಿಕ ಆ ಪಕ್ಷದಲ್ಲಿ ಅಳಿದುಳಿದ ನಾಯಕರು, ಕಾರ್ಯಕರ್ತರು ಸಹ ಅಲುಗಾಡ ತೊಡಗಿದ್ದಾರೆ.
ಗ್ರಾಮಾಂತರ ಶಾಸಕ ಗೌರಿಶಂಕರ್ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಪಕ್ಷದಿಂದ ದೂರವೇ ಉಳಿದಿದ್ದ ಎಚ್.ನಿಂಗಪ್ಪ ಅವರು ಏಕಾಏಕಿ ಕಾಂಗ್ರೆಸ್ ಸೇರಿದ್ದರು. ಗ್ರಾಮಾಂತರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಗ್ಯಾರಂಟಿ ಅವರಿಗೆ ಇತ್ತು. ಟಿಕೆಟ್ ನೀಡದ ಕಾರಣ ಅವರಿಗೆ ನಿರಾಶೆಯಾಗಿದೆ.
ಕಾಂಗ್ರೆಸ್ ನ ಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ. ತಮ್ಮ ಹಿಂಬಾಲಕರು, ಅಭಿಮಾನಿಗಳು, ಸಂಬಂಧಿಕರ ಜತೆ ಸಂಪರ್ಕ ಇಟ್ಟುಕೊಂಡಿರುವ ಅವರು ಚುನಾವಣೆಯಲ್ಲಿ ಯಾವ ದಾಳ ಉರುಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ನಿಂಗಪ್ಪ ಅವರಿಗೆ ಟಿಕೆಟ್ ಕೊಡದ ಕಾರಣ ಕಲ್ಲಹಳ್ಳಿ ದೇವರಾಜ್ ಸಹಿತ ಕಾಂಗ್ರೆಸ್ ನ ಹಲವು ಮೂಲ ಮುಖಂಡರು ಅಸಮಾಧಾನದಿಂದ ಕುದಿಯುತ್ತಿದ್ದಾರೆ.
ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸ್ಥಿತಿಯ ಬಗ್ಗೆ ಆ ಪಕ್ಷದ ಕಾರ್ಯಕರ್ತರೇ ನಗಾಡುವಂತೆ ಆಗಿದೆ.
ಕಾಂಗ್ರೆಸ್ ನ ಈ ಪರಿಸ್ಥಿತಿಯ ಲಾಭ ಬಿಜೆಪಿಗೆ ಆಗತೊಡಗಿದೆ. ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ಬಹುತೇಕ ಬೆಂಬಲಿಗರು ಬಿಜೆಪಿಯನ್ನು ಬೆಂಬಲಿಸುವ ಮಾತುಗಳನ್ನಾಡುತ್ತಿರು ವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗಿದೆ.
ಮಾಜಿ ಶಾಸಕ ಎಚ್.ನಿಂಗಪ್ಪ ಅವರು ಶಾಸಕ ಗೌರಿಶಂಕರ್ ಅವರನ್ನು ಸೋಲಿಸುವಂತೆ ತಮ್ಮ ಆಪ್ತರಿಗೆ ಕರೆ ಮಾಡಿ ಹೇಳುತ್ತಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಇದು ಬಿಜೆಪಿಗೆ ನೆರವಾಗಲಿದೆ ಎಂಬುದು ಯಾರೂ ಬಿಡಿಸಿ ಹೇಳಬೇಕಾಗಿಲ್ಲ.
ಕಾಂಗ್ರೆಸ್ ನ ಗೂಳೂರು ವಿಜಯಕುಮಾರ್ ಸಹ ಈಗಾಗಲೇ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ಉರುಳಿಸಿದ ರಾಜಕೀಯ ದಾಳ ಆ ಪಕ್ಷದ ಮೂಲ ಬೇರುಗಳನ್ನೇ ಕತ್ತರಿಸಿದೆ. ಅದರ ಲಾಭ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
JDS ನ ಪ್ರಮುಖ ಮುಖಂಡರಾದ ಬೆಳ್ಳಿ ಲೋಕೇಶ್, ವೈ.ಟಿ.ನಾಗರಾಜ್, ಎಚ್.ಟಿ.ಕೃಷ್ಣಪ್ಪ ಅವರು ಸಹ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನ ಇನ್ನೂ ಕೆಲ ಮುಖಂಡರು ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್, ಜೆಡಿಎಸ್ ನವರ ಮನೆ ಖಾಲಿ ಮಾಡುವವರ ಸಂಖ್ಯೆ ಹೆಚ್ಚತೊಡಗಿದ್ದು, ಬಿಜೆಪಿ ಜೋಳಿಗೆ ತುಂಬುವಂತೆ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.