Wednesday, January 15, 2025
Google search engine
Homeತುಮಕೂರು ಲೈವ್ಏನಿದು ಪರಿಸರ ಪ್ರಣಾಳಿಕೆ

ಏನಿದು ಪರಿಸರ ಪ್ರಣಾಳಿಕೆ

ಶಿರಾ:- ಸಿರಾ ತಾಲ್ಲೂಕಿನ ಚಿಗುರು ಯುವಜನ ಸಂಘವು ದೊಡ್ಡಆಲದಮರ ಗ್ರಾಮದಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪರವಾಗಿ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ನೀಡಲು ಪರಿಸರ ಪ್ರಣಾಳಿಕೆ ಬಿಡುಗಡೆ ಮಾಡಿದರು.


ಚಿಗುರು ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ್‌ಅಮಲಗೊಂದಿ ರವರು ಮಾತನಾಡಿ, ಚಿಗುರು ಯುವಜನ ಸಂಘವು ಗ್ರಾಮೀಣ ಪ್ರದೇಶದ ಸಮಾನ ಮನಸ್ಕ ಯುವಜನರು ಕಟ್ಟಿಕೊಂಡ ಒಂದು ಸ್ವಯಂಸೇವಾ ಸಂಘವಾಗಿದೆ. . ಈಗ ಚುನಾವಣೆಯ ಸಂದರ್ಭದಲ್ಲಿ ಸಿರಾ ವಿಧಾನಸಭೆಯ ಮತದಾರರ ಪರವಾಗಿ ತಾಲ್ಲೂಕಿನ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಈ ಕೆಳಗಿನ ನಮ್ಮ ಸಲಹೆಗಳನ್ನು ಎಲ್ಲಾ ಅಭ್ಯರ್ಥಿಗಳಿಗೆ ಇಮೇಲ್, ವಾಟ್ಸಪ್ ಮೂಲಕ ಕಳಿಸಿಕೊಡಲಾಗಿದೆ ಎಂದು ತಿಳಿಸಿದರು.

೧. ಮುಂದಿನ 25 ವರ್ಷಗಳ ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗಲಿರುವ ಗಿಡಮರಗಳಿಗೆ ಈಗಲೇ ಪರಿಹಾರ ರೂಪದಲ್ಲಿ ಅರಣ್ಯ ಬೆಳೆಸಲು ಬೆಂಗಾಡಿನಲ್ಲಿ ಸ್ಥಳ ನಿಗದಿ ಮಾಡಿ, ಅರಣ್ಯವನ್ನು ಬೆಳೆಸಲು ಆರಂಭಿಸಬೇಕು. ಇಲ್ಲಿ ಬೆಳೆಸಿದಷ್ಟೇ ಸಂಖ್ಯೆಯ ಮರಗಳನ್ನು ವಿವಿಧ ಯೋಜನೆಗಳು ಜಾರಿಯಾಗುವ ಹಂತದಲ್ಲಿ ಕಡಿಯಲು ಅನುಮತಿ ಸಿಗಬೇಕು. ಕೈಗಾರಿಕೆ ಸಂಸ್ಥಾಪಕರಿಗೆ, ಸಿವಿಲ್ ಕಾಮಗಾರಿಗಳ ಗುತ್ತಿಗೆದಾರರಿಗೆ ಅವರವರ ಶ್ರೇಣಿಗೆ ತಕ್ಕಂತೆ, ಬದಲೀ ಅರಣ್ಯ ಬೆಳೆಸಲು ಅಲ್ಲಿ ಅವಕಾಶ ಇರಬೇಕು. ಅರಣ್ಯವನ್ನು ಬೆಳೆಸಿದರೆ ಮಾತ್ರ ಅಂಥವರ ಲೈಸೆನ್ಸ್ ನವೀಕರಣ ಮಾಡಬೇಕು.

೨. ಎಲ್ಲ ಡೇರಿ ಕೇಂದ್ರಗಳಲ್ಲಿ ಗೋಬರ್ ಗ್ಯಾಸ್ ಉತ್ಪಾದನೆಯ ಪ್ರಾತ್ಯಕ್ಷಿಕೆ ಇರಬೇಕು. ಅದರಿಂದ ಸಿಗುವ ಅನಿಲವನ್ನೇ ಅಲ್ಲೇ ವಿದ್ಯುತ್ತನ್ನಾಗಿ ಪರಿವರ್ತಿಸಿ ಅಲ್ಲಿನದೇ ಶೀತಲಘಟಕಗಳಲ್ಲಿ ಬಳಸಬೇಕು.

೩. ಇನ್ನು ಐದು ವರ್ಷಗಳಲ್ಲಿ ಹಳ್ಳಿಗಳ, ನಗರಗಳ ಚರಂಡಿ ನೀರಿನ ಶೇ. 50ರಷ್ಟನ್ನು ಶುದ್ಧೀಕರಿಸಿ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಆಯಾ ಹಳ್ಳಿ, ನಗರಗಳಿಗೆ ಪೂರೈಸುವ ವ್ಯವಸ್ಥೆಯಾಗಬೇಕು.

೪. ಹಳ್ಳಕೊಳ್ಳಗಳನ್ನು ಕಸ, ಚರಂಡಿನೀರನ್ನು ಸಂಗ್ರಹಗಾರಗಳನ್ನಾಗಿಸದೆ ಅವುಗಳ ಸ್ವಚ್ಛತೆಯನ್ನು, ಅವುಗಳ ಪಾವಿತ್ರತೆಯನ್ನು ಕಾಪಾಡಬೇಕು.

೫. ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ನಿವಾಸಗಳು ತಮಗೆ ಬೇಕಿದ್ದ ನೀರು ಮತ್ತು ವಿದ್ಯುತ್ತನ್ನೂ ತಮ್ಮ ಕಟ್ಟಡದಲ್ಲೇ ಸಂಗ್ರಹಿಸಬೇಕು. ಹೊರಗಿನ ನೀರು ಮತ್ತು ವಿದ್ಯುತ್ತನ್ನು ಸಾಗಿಸಿ ತರದಂತೆ ನಿರ್ಬಂಧ ವಿಧಿಸಬೇಕು.

೬. ತಾಲ್ಲೂಕು ಕೇಂದ್ರದಲ್ಲಿ ಇನ್ನು ಐದು ವರ್ಷಗಳ ಒಳಗೆ ಒಂದು ಮಾದರಿ ಮನೆಯನ್ನು ನಿರ್ಮಿಸಬೇಕು. ಕೃಷಿತ್ಯಾಜ್ಯದಿಂದ ಪ್ಲೈವುಡ್ ಹಲಗೆ, ಒತ್ತಿಟ್ಟಿಗೆಗಳ ಗೋಡೆಯಂಥ ಸುಸ್ಥಿರ ವಿಧಾನದ ಕಟ್ಟಡ ಅದಾಗಿರಬೇಕು. ಮಳೆಕೊಯ್ಲು, ಸೋಲಾರ್ ವಿದ್ಯುತ್ತಿನ ಉತ್ಪಾದನೆಗೆ ಅದು ಮಾದರಿಯಾಗಬೇಕು. ಕೃಷಿತ್ಯಾಜ್ಯದಿಂದ ಅಡುಗೆ ಅನಿಲ ಮತ್ತು ವಿದ್ಯುತ್ ಉತ್ಪಾದನೆಯ ಪ್ರಾತ್ಯಕ್ಷಿಕೆಯೂ ಅಲ್ಲಿರಬೇಕು.

೭. ಪ್ರತಿ ಮನೆಯಲ್ಲೂ ಮಳೆನೀರಿನ ಕೊಯ್ಲನ್ನು ಮಾಡಬೇಕು. ಅದೇ ನೀರನ್ನು ಬಳಸುವಂತೆ ಕಡ್ಡಾಯ ಮಾಡಬೇಕು.

೮. ತಾಲ್ಲೂಕು ಕೇಂದ್ರವೂ ಸೇರಿದಂತೆ ತಾಲ್ಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳ ಹೂಳೆತ್ತಿಸಿ ಅಲ್ಲೆಲ್ಲ ಕಳೆರಹಿತ ಶುದ್ಧನೀರು ಸಂಗ್ರಹವಾಗುವಂತೆ ಮಾಡಬೇಕು.

೯. ನಗರದ ಎಲ್ಲ ವಾಹನಗಳಿಗೆ ಹಾರ್ನ್ ಕೋಟಾ ನಿಗದಿ ಮಾಡಬೇಕು. ತಿಂಗಳಿಗೆ 50ಕ್ಕಿಂತ ಹೆಚ್ಚು ಬಾರಿ ಹಾರ್ನ್ ಮಾಡುವವರಿಗೆ ಶುಲ್ಕ ವಿಧಿಸಬೇಕು. ಬಾಡಿಗೆ ವಾಹನಗಳನ್ನು ಹೊರತುಪಡಿಸಿ, ಎಲ್ಲ ಪೆಟ್ರೋಲ್/ಡೀಸೆಲ್ ಚಾಲಿತ ವಾಹನಗಳಿಗೂ ತಿಂಗಳಿಗೆ ಗರಿಷ್ಠ 300 ಕಿ.ಮೀ. ಓಡಾಟದ ಕೋಟಾವನ್ನು ವಿಧಿಸಬೇಕು. ಅದನ್ನು ಮೀರಿದವರು ಹೆಚ್ಚುವರಿ ಶುಲ್ಕ ತೆರುವಂತಾಗಬೇಕು. ಹೀಗೆ ಸಂಗ್ರಹವಾದ ನಿಧಿಯನ್ನು ಟಯರ್‌ಗಳ ಮರುಸಂಸ್ಕರಣೆಗೆ ಬಳಸಬೇಕು.

೧೦. ಎಲ್ಲಡೆಯಲ್ಲೂ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹ ಮತ್ತು ಮರುಬಳಕೆಯನ್ನು ಕಡ್ಡಾಯ ಮಾಡಬೇಕು. ಟಾರ್ ರಸ್ತೆ ಮತ್ತು ಆವರಣದ ಗೋಡಗಳಿಗೆ ಶೇ. 20ರಷ್ಟನ್ನಾದರೂ ಅಂಥ ಮರುಬಳಕೆಯ ಪ್ಲಾಸ್ಟಿಕ್ ಮತ್ತು ಟಯರ್ ಚಕ್ಕೆಗಳ ಬಳಕೆಯನ್ನು ಕಡ್ಡಾಯ ಮಾಡಬೇಕು. ಎಲ್ಲ ಮದ್ಯ, ಪೇಯ, ಮತ್ತು ಔಷಧ ತಯಾರಿಸುವ ಕಂಪನಿ/ಅಂಗಡಿಗಳು ಗಾಜಿನ ಖಾಲಿ ಬಾಟಲಿಗಳನ್ನು ಹಿಂಪಡೆಯುವುದನ್ನು ಕಡ್ಡಾಯ ಮಾಡಬೇಕು.

೧೧. ಕೊಳವೆ ಬಾವಿಗಳಿಗೆ ಜಿಯೊ ಟ್ಯಾಗಿಂಗ್ ಮಾಡಬೇಕು. ಟ್ಯಾಂಕರ್‌ಗಳಿಗೆ ನಗರದ ಕೊಳವೆ ಬಾವಿಗಳಿಂದ ನೀರೆತ್ತದಂತೆ ನಿಷೇಧ ಹಾಕಬೇಕು. ನಗರ ಪ್ರದೇಶದಲ್ಲಿ ಹೊಸ ಕೊಳವೆ ಬಾವಿಗಳಿಗೆ ಲಿಲಾವಿನ ಮೂಲಕ ಲೈಸೆನ್ಸ್ ಲಭಿಸುವಂತೆ ಮಾಡಬೇಕು. ಮನೆಕಟ್ಟುವ ಮೊದಲು ಮನೆಯ ವಿಸ್ತೀರ್ಣ/ಗಾತ್ರಕ್ಕೆ ತಕ್ಕಷ್ಟು ಮಳೆನೀರಿನ ಸಂಗ್ರಹಕ್ಕೆ ನೆಲದಡಿಯಲ್ಲಿ ವ್ಯವಸ್ಥೆ ಮಾಡಿರಬೇಕು.

೧೨. ಎಲ್ಲಾ ಕಡೆ ಮೃತ ಶರೀರಗಳನ್ನು ಸುಡುವ ಪ್ರಮಾಣಕ್ಕೆ ಅನುಗುಣವಾಗಿ ನೆನಪಿನ ವೃಕ್ಷಗಳನ್ನು ಬೆಳೆಸಲು ಸ್ಥಳವನ್ನು ನಿಗದಿ ಮಾಡಬೇಕು. ಗೋಬರ್ ಗ್ಯಾಸ್ ಅಥವಾ ಜೈವಿಕ ತ್ಯಾಜ್ಯದಿಂದ ಲಭಿಸುವ ಅನಿಲದಿಂದ ಶವಸಂಸ್ಕಾರ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು. [ಶವಸಂಸ್ಕಾರಕ್ಕೆ ಪೂರಕ ಟಿಪ್ಪಣಿ: ಇಡೀ ಮಾನವ ಕಳೇವರವನ್ನೇ ಪೆಟ್ಟಿಗೆಯಲ್ಲಿಟ್ಟು ಗೊಬ್ಬರವನ್ನಾಗಿಸುವ ಕಾಂಪೋಸ್ಟಿಂಗ್ ಟೆಕ್ನಾಲಜಿ ಇದೆ. ಮಿತ್ರ ಗುರುರಾಜ ದಾವಣಗೆರೆಯವರ ಪ್ರಶಸ್ತಿವಿಜೇತ “ಡೇಟಾ ದೇವರು ಬಂದಾಯ್ತು” ಕೃತಿಯಲ್ಲಿ ಅದರ ಚಿತ್ರ ವಿವರಗಳಿವೆ. ಅಂಥ ಒಂದಾದರೂ ಘಟಕವನ್ನು ಪ್ರಾತ್ಯಕ್ಷಿಕೆಗೆಂದು ರಾಜಧಾನಿಯಲ್ಲಿ ಸ್ಥಾಪಿಸಬೇಕು. ಆ ಕಾಂಪೋಸ್ಟನ್ನು ವಾರಸುದಾರರ ತೋಟಗಳಲ್ಲಿ ಬಳಸುವಂತೆ ಪ್ರೇರಣೆ ನೀಡಬೇಕು].

೧೩. ತಾಲ್ಲೂಕಿನ ಶಾಲೆಗಳಲ್ಲಿ ಇಕೋ ಕ್ಲಬ್ ಗಳನ್ನು ಸಶಕ್ತೀಕರಗೊಳಿಸಬೇಕು. ಇದರಿಂದ ಹಳ್ಳಿಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಯುವ ತಂಡಗಳನ್ನು ರಚಿಸಲು ಪ್ರೇರೇಪಿಸಬೇಕು.

೧೪. ಕೈತೋಟಗಳನ್ನು ನಿರ್ಮಿಸಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು. ಪ್ರತಿ ಕುಟುಂಬವೂ ನುಗ್ಗೆ ಕರಿಬೇವು ನೆಡುವಂತೆ ಕಡ್ಡಾಯ ಮಾಡಬೇಕು.

೧೫. ಸಾರ್ವಜನಿಕ ಸ್ಮಶಾನಗಳಲ್ಲಿ ನೆಡುತೋಪುಗಳನ್ನು ನಿರ್ಮಿಸಬೇಕು. ಸತ್ತವರಿಗೆ ಸ್ಮಾರಕ ಮಾಡುವ ಬದಲು ಅದೇ ಜಾಗದಲ್ಲಿ ವೃಕ್ಷಗಳನ್ನು ನೆಡುವುದನ್ನು ಕಡ್ಡಾಯ ಮಾಡಬೇಕು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಮಧು ಎನ್.ಆರ್,ರವರು ಮಾತನಾಡಿ, ಪರಿಸರವು ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಆಗಾಗಿ ಮಾನವರ ಜೊತೆ ಎಲ್ಲಾ ಜೀವಿಗಳಿಗೂ ಬದುಕುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿದೆ. ಇಂದು ಅದರ ಭಾಗವಾಗಿ ನಮ್ಮ ಸಂಘದಿಂದ ಪರಿಸರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ನಂತರ ಗೆದ್ದ ಅಭ್ಯರ್ಥಿಗಳು ಪರಿಸರ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕಾರ್ಯಗತ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.

ಈ ಸಂದರ್ಭದಲ್ಲಿ ಚಿಗುರು ಯುವಜನ ಸಂಘದ ಸದಸ್ಯರಾದ ಅಂಬಿಕಾ ಎನ್, ತಿಮ್ಮೇಗೌಡ, ದರ್ಶನ್ ಜೆ, ಯಶೋಧ ಸಿ ಜೆ, ಹಾಗೂ ಹರೀಶ್ ಎಸ್ ರವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?