ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಪಾಡಿಕೊಂಡು ಬಂದಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿ.ಸುರೇಶಗೌಡರು ಗೆಲುವಿನ ನಗೆ ಬೀರಿದ್ದಾರೆ.
ಮಾಜಿ ಶಾಸಕ ಜೆಡಿಎಸ್ ನ ಡಿ.ಸಿ.ಗೌರಿಶಂಕರ್ ಅವರಿಗೆ ಸರಿಯಾದ ಪಾಠ ಕಲಿಸಿದ್ದಾರೆ. ಜನರ ವಿಶ್ವಾಸಗಳಿಸಲು ಹೃದಯವಂತಿಕೆ ಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಅಂಚೆ ಮತ ಎಣಿಕೆಯಲ್ಲು ಮುಂದೆ ಇದ್ದ ಅವರು ಯಾವುದೇ ಸುತ್ತಿನಲ್ಲೂ ಹಿನ್ನಡೆ ಅನುಭವಿಸಲಿಲ್ಲ.
ಜೆಡಿಎಸ್ ಜಿದ್ದಾಜಿದ್ದಿ ಪೈಪೋಟಿ ನೀಡಲಿದೆ ಎಂಬ ಲೆಕ್ಕಾಚಾರ ಸಹ ತಲೆಕೆಳಗಾಗಿದೆ.
ನಕಲಿ ಬಾಂಡ್ ವಿಚಾರ, ಕ್ಷೇತ್ರದಲ್ಲಿ ಹೆಚ್ಚಿದ್ದ ಕುಡುಕರ ಹಾವಳಿ ಹಾಗೂ ಅಭಿವೃದ್ಧಿ ಯಲ್ಲಿ ಹಿಂದೆ ಬಿದ್ದಿರುವುದನ್ನು ಪ್ರಚಾರದ ವೇಳೆ ಸುರೇಶಗೌಡರು ಮುಂದೆ ಮಾಡಿದ್ದರು.
ಚುನಾವಣಾ ದಿನಾಂಕ ಘೋಷಣೆಗೆ ಮುನ್ನವೇ ಅವರು ಕ್ಷೇತ್ರದ ಜನರ ವಿಶ್ವಾಸಗಳಿಸಿದ್ದರು. ಕೊರೊನಾ ಕಾಲದಲ್ಲಿ ಮೊದಲಿಗೆ ಕ್ಷೇತ್ರದ ಜನರಿಗೆ ಕಿಟ್ ಹಂಚಿಕೆ ಮಾಡಿ ಇಡೀ ರಾಜ್ಯದ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು.
ಅಲ್ಲದೇ ಕೊರೊನಾ ಪೀಡಿತ ರೋಗಿಯನ್ನು ಆಸ್ಪತ್ರೆಗೆ ತೆರಳಿ ನೋಡಿ ಬಂದಿದ್ದರು. ಆದರೆ ಮಾಜಿ ಶಾಸಕ ಗೌರಿಶಂಕರ್ ನಕಲಿ ಕೊರೊನಾ ವ್ಯಾಕ್ಸೀನ್ ನೀಡಿದ್ದಾರೆ ಎಂಬ ಆರೋಪ ಎದುರಿಸಿದರು. ಇದು ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದೆ.
ಜಿಲ್ಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಕುರಿತು ಸ್ಪಷ್ಟ ಮುನ್ನೋಟ ನೀಡಿದ ಹೆಗ್ಗಳಿಕೆಯೂ ಅವರಿಗಿದೆ.
ರಫ್ತು ಉದ್ಯಮ ಕೇಂದ್ರ, ಶಾಲೆ,ಕಾಲೇಜು, ಸಮುದಾಯ ಭವನಗಳನ್ನು ಕಟ್ಟುವ ಭರವಸೆಗಳನ್ನು ನೀಡುವ ಮೂಲಕ ಜನರ ವಿಶ್ವಾಸಗಳಿಸಿದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ್ದ ರಸ್ತೆ, ಉಚಿತ ಟ್ರಾನ್ಸ್ ಫಾರ್ಮರ್, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಇಂಥ ಕೆಲಸಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಕೆಲಸ ಮಾಡಿದರು.
ಜಾತಿವಾರು ಸಮಾವೇಶಗಳನ್ನು ಮಾಡಿ ಎಲ್ಲ ಜಾತಿ ಜನರಿಗೂ ಅವರ ಕಷ್ಟಕ್ಕೆ ಆಗುವ ಭರವಸೆ ತುಂಬಿದ್ದು ಸಹ ಅವರ ಕೈ ಹಿಡಿಯಿತು.
ಸುರೇಶಗೌಡರ ಬಾಯಿ ಸರಿ ಇಲ್ಲ ಎಂಬ ಮಾಜಿ ಶಾಸಕ ಗೌರಿಶಂಕರ್ ಅಂಡ್ ಟೀಮ್ ನ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಿದ್ದು, ಸಹ ಅವರಿಗೆ ಅನುಕೂಲವಾಯಿತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರುಗಳು ಸಹ ಸುರೇಶ್ ಗೌಡರ ಸಹೃದಯತೆ, ಸಿಟ್ಟು ಯಾಕೆ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆಯೇ ಮಾತನಾಡಿದ್ದು, ಅವರ ವಿರುದ್ಧದ ಅಪಪ್ರಚಾರ ತಡೆಯಲು ಅನುಕೂಲವಾಯಿತು. ಇದು ಸಹ ಗೆಲುವಿಗೆ ಕಾರಣವಾಯಿತು.
ಮುಸ್ಲಿಂರು ಸಹ ಸುರೇಶಗೌಡರನ್ನು ಬೆಂಬಲಿಸುವುದಾಗಿ ಬಹಿರಂಗ ಹೇಳಿಕೆ ನೀಡಿದರು. ಅಭಿವೃದ್ಧಿ ಗೆ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದ್ದು, ಬಹುಸಂಖ್ಯೆಯ ಜನರು ಅವರನ್ನು ಬೆಂಬಲಿಸಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.