ತುಮಕೂರು : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂದಿಗೂ ಬಿಜೆಪಿ ಪ್ರಬಲವಾಗಿದೆ. ಕರ್ನಾಟಕದ ವಿಚಾರದಲ್ಲಿ ಪಕ್ಷ ಸದೃಢವಾಗಿದ್ದರೂ ಕೆಲ ವಿಷಯಗಳಲ್ಲಿ ಆದ ಹೊಂದಾಣಿಕೆ ಕೊರೆತೆಯಿಂದ ಕಡಿಮೆ ಸ್ಥಾನಗಳು ಬಂದಿವೆ. ಮುಂದಿನ ಬಾರಿ ಸರಿ ಹೋಗಲಿದೆ ಎಂದು ಶಾಸಕ ಬಿ.ಸುರೇಶಗೌಡ ಅವರು (B sureshgowda) ಹೇಳಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್‍ನವರು ನಮ್ಮ ಪಕ್ಷದ ಬಗ್ಗೆ ಮಾಡಿದ ಅಪಪ್ರಚಾರದಿಂದ ಕಡಿಮೆ ಸೀಟು ಬಂದಿವೆ. ಗ್ಯಾಸ್ ಬೆಲೆ ಹೆಚ್ಚಳ, ಪಡಿತರ ಅಕ್ಕಿ ಇನ್ನಿತರ ವಿಚಾರಗಳ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಂಡು ಹೋಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಸರ್ಕಾರ ಯಾವುದಿದ್ದರೇನು, ಅನುದಾನ ತರುವ ತಾಕತ್ತು ನನಗಿದೆ. ಸರ್ಕಾರ ಒಂದು ರೀತಿಯಲ್ಲಿ ಬಾವಿಯಿದ್ದಂತೆ. ಯಾರಿಗೆ ಶಕ್ತಿ ಇದೆಯೋ ಅವರು ಹೆಚ್ಚು ನೀರು ಸೇದಿಕೊಳ್ಳುತ್ತಾರೆ. ಈ ಹಿಂದೆ 2013ರಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಕೇತ್ರದ ಅಭಿವೃದ್ದಿಗೆ 800 ಕೋಟಿ ಅನುದಾನ ತಂದಿದ್ದೆ. ಈ ಬಾರಿಯೂ ಪ್ರಬಲ ವಿರೋಧ ಪಕ್ಷವಾಗಿ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಅನುದಾನ ತರಲಿದ್ದೇನೆ. ನಾನು ಅನುದಾನವನ್ನು ನನ್ನ ಮನೆಗೆ ಕೇಳೋದಿಲ್ಲ. ಬಡವರಿಗೆ ಮನೆ, ಬಗರಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲವನ್ನು ಅದ್ಯತೆಯ ಮೇರೆಗೆ ಮಾಡಲಿದ್ದೇನೆ ಎಂದರು.
ಕ್ಷೇತ್ರವನ್ನು ಹಾಗೂ ಶಾಲೆಗಳನ್ನು ಸಿ.ಎಸ್.ಆರ್.ನಿಧಿಯಿಂದ ಅಭಿವೃದ್ದಿ ಪಡಿಸುವ ಯೋಚನೆ ಇದೆ. ಮುಂದಿನ ಐದು ವರ್ಷಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಒಂದೊಂದು ಶಾಲೆಯನ್ನು ಮಾದರಿ ಶಾಲೆ ಮಾಡಬೇಕೆಂಬ ಮಹದಾಸೆ ಇದೆ. ಈಗಾಗಲೇ ಆಕ್ಷನ್ ಪ್ಲಾನ್ ಇದೆ. ಮಾಜಿ ಶಾಸಕರ ಕಾಲದಲ್ಲಿ ಹಾಳಾಗಿರುವ, ನೆನೆಗುದಿಗೆ ಬಿದ್ದಿರುವ ಎಲ್ಲಾ ಯೋಜನೆಗಳನ್ನು ಒಂದು ತಿಂಗಳ ಒಳಗೆ ಸರಿದಾರಿಗೆ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ದಿ ಪಡಿಸುವತ್ತ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.
ಸುರೇಶ್‍ಗೌಡ ಅವರು ಹಳೇ ಮಠಕ್ಕೆ ತೆರಳಿ ನೂತನ ಉತ್ತರಾಧಿಕಾರಿ ಶ್ರೀ ಶಿವ ಸಿದ್ದೇಶ್ವರ ಸ್ವಾಮಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮುಖಂಡರಾದ ಮೈದಾಳ ಗ್ರಾ.ಪಂ.ಅಧ್ಯಕ್ಷ ಮಾಲಾ ಮಂಜುನಾಥ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಂಕರಣ್ಣ, ಉಮಾಶಂಕರ್, ಗೂಳೂರು ಶಿವಕುಮಾರ್, ಅರಕೆರೆ ರವೀಶ್, ನಾರಾಯಣಪ್ಪ, ಗೂಳೂರು ವಿಜಯಕುಮಾರ್, ಗಂಗಾಂಜನೇಯ, ಪಂಚೆ ರಾಮಚಂದ್ರಪ್ಪ, ವಿಜಯಕುಮಾರ್, ಹೊನ್ನೇಶಕುಮಾರ್, ಹೆತ್ತೇನಹಳ್ಳಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.