ತುರುವೇಕೆರೆ: ರೈತರು ಕೆರೆಯಿಂದ ಮಣ್ಣು ತೆಗೆದರೆ ವಾಹನ ಜಪ್ತಿ ಮಾಡಿ, ಮಾಲೀಕರ ವಿರುದ್ದ ಪ್ರಕಣ ದಾಖಲಿಸಲಾಗುವುದೆಂದು ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭುರವರು ಹೊರಡಿಸಿರುವ ಆದೇಶವನ್ನು ಹಿಂಪಡೆಯ ಬೇಕು. ಇಲ್ಲವಾದರೆ ಸಾವಿರಾರು ರೈತರೊಡಗೂಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಟ್ರ್ಯಾಕ್ಟರ್ ಚಳವಳಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮಾಜಿ ಶಾಸಕ ಜಯರಾಮ್ ಎ.ಎಸ್ ಎಚ್ಚರಿಕೆ ನೀಡಿದರು.
ಪಟ್ಟಣದ ಚಿಕ್ಕೋನಹಳ್ಳಿ ಗೇಟ್ನಲ್ಲಿ ಗುರುವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರವೇ ಕೆರೆಗಳಲ್ಲಿ ಹತ್ತಾರು ವರ್ಷಗಳಿಂದ ತುಂಬಿರುವ ಹೂಳೆತ್ತಿ ಆ ಮೂಲಕ ಕೆರೆಯಲ್ಲಿ ನೀರಿನ ಸಾಮರ್ಥವನ್ನು ಹೆಚ್ಚಿಸಬೇಕೆಂದು ಅಭಿಯಾನ ಮಾಡುತ್ತಿರುವಾಗ ಈ ಅಧಿಕಾರಿಗಳ ಆದೇಶ ರೈತ ವಿರೋಧಿಯಾಗಿದೆ ಎಂದರು.
ಕೆರೆಯ ಮಣ್ಣನ್ನು ತೆಗೆಯುವಾಗ ಜಿಲ್ಲಾಡಳಿತದಿಂದ ಅನುಮತಿ ಪಡೆದುಕೊಳ್ಳಬೇಕು ಎನ್ನುವ ಅಧಿಕಾರಿಗಳು ತುರುವೇಕೆರೆ ಸೇರಿದಂತೆ ಜಿಲ್ಲೆಯಲ್ಲೇ ಸಣ್ಣಹಿಡುವಳಿದಾರ ರೈತರ ಸಂಖ್ಯೆನೇ ಹೆಚ್ಚು. ಇವರಲ್ಲಿ ಎಷ್ಟು ಮಂದಿ ರೈತರಿಗೆ ಅನುಮತಿ ಪಡೆಯಬೇಕೆಂಬ ತಿಳವಳಿಕೆ ಇದೆ ಎಂದರು.
ಹತ್ತಿಪ್ಪತ್ತು ಲೋಡ್ ಮಣ್ಣು ಹೊಡೆದುಕೊಳ್ಳಲು ಜಿಲ್ಲೆಗೆ ದಣಿಯಬೇಕೆ ಈಗಾಗಲೇ ನೀರಿಲ್ಲದೆ ರೈತರು, ತೆಂಗು, ಅಡಿಕೆ ಬೆಳೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ, ತಾಲ್ಲೂಕಿನಲ್ಲಿ ಯಾರೂ ಕಮರ್ಷಿಯಲ್ ಆಗಿ ಮಣ್ಣು ಹೊಡೆದುಕೊಳ್ಳುತ್ತಿಲ್ಲ. ರೈತರ ಕಷ್ಟ ಅಧಿಕಾರಿಗಳಿಗೇನು ಗೊತ್ತು. ಒಂದು ವೇಳೆ ಕೆರೆಯ ಮಣ್ಣನ್ನು ರೈತರು ತೆಗೆಯುವಾಗ ಯಾವ ಯಾವ ನಿಯಮಗಳನ್ನು ಪಾಲಿಸಬೇಕೆಂದು ಸೂಚನೆಗಳನ್ನಾದರೂ ಜಿಲ್ಲಾಧಿಕಾರಿಗಳು ಮತ್ತ ಸಿಇಒ ನೀಡಲಿ ಅದು ಬಿಟ್ಟು ರೈತರ ಮೇಲೆ ಗದಾಪ್ರಹಾರ ನಡೆಸಬಾರದು ಎಂದರು.
ಜಿಲ್ಲಾಡಳಿತದ ಆದೇಶದಿಂದ ಪೊಲೀಸರಿಗೆ, ಕಂದಾಯ ಇಲಾಖಾ ಅಧಿಕಾರಿಗಳಿಗೆ ದುಡ್ಡುಮಾಡಲು ರಹದಾರಿಕೊಟ್ಟಂತೆ ಆಗುತ್ತಿದೆಯೇ ವಿನಹ ರೈತರಿಗೆ ಅನುಕೂವಾಗುತ್ತಿಲ್ಲ,
ಸುಕಾಸುಮ್ಮನೆ ರೈತರ ಮೇಲೆ ಜಿಲ್ಲಾಧಿಕಾರಿ ಮತ್ತು ಸಿಇಒ ಸರ್ವಾಧಿಕಾರಿ ಧೋರಣೆ ಎಂದು ದೂರಿದರು.
ತಾಲ್ಲೂಕಿನಲ್ಲಿ ಮೇವು ಬ್ಯಾಂಕ್ ಪ್ರಾರಂಭ ಮಾಡುವ ಬಗ್ಗೆ ರೈತರಿಗೆ ಸರಿಯಾಗಿ ಜಿಲ್ಲಾಧಿಕಾರಿಯಾಗಲಿ ಅಥವಾ ತಹಶೀಲ್ದಾರ್ ಆಗಲಿ ಪ್ರಚಾರನೇ ನಡೆಸಿಲ್ಲ, ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಕೊಳವೆ ಬಾವಿಯಲ್ಲಿ ನೀರಿಲ್ಲದೆ ಜನ ಟ್ಯಾಂಕರ್ ಮೊರೆ ಹೋಗಿದ್ದಾರೆ ಬರಗಾಲದಿಂದ ರೈತರು, ಜನರು ತತ್ತರಿಸಿ ಹೋಗಿದ್ದಾರೆ ಇದಕ್ಕೆ ಜಿಲ್ಲಾಧಿಕಾರಿಗಳು, ಸಿಇಒ ಏನು ಕ್ರಮ ಕೈಕೊಂಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಹೇಮಾವತಿ ನಾಲೆಗೆ ಎಕ್ಸ್ ಪ್ರೆಸ್ ಲೈನ್ ಮಾಡಿ ಇಲ್ಲಿಂದ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲೆಯ ಜನ ಬಿಡುವುದಿಲ್ಲ. ರಕ್ತಕೊಟ್ಟರೂ ನೀರು ಕೊಡುವುದಿಲ್ಲ ಇದಕ್ಕೆ ನನ್ನ ವಿರೋಧವಿದೆ. ಹೇಮಾವತಿ ನಾಲಾ ನೀರು ಬೇರೆಡೆ ಬಿಟ್ಟರೆ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗುತ್ತೀರಿ ಈ ಕಾಮಗಾರಿಯನ್ನು ಇಲ್ಲಿಗೆ ನಿಲ್ಲಿಸಿ. ಇಲ್ಲವಾದಲ್ಲಿ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಹೋರಾಟಕ್ಕೆ ಇಳಿಯಾಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್ ಮುಖಂಡರುಗಳಾದ, ದಿನೇಶ್, ಸುರೇಶ್, ಕಾಳಂಜಿಹಳ್ಳಿ ಸೋಮಣ್ಣ, ನಾಗಲಾಪುರ ಮಂಜಣ್ಣ, ವಿ.ಬಿ.ಸುರೇಶ್, ನಡವನಹಳ್ಳಿ ಚಂದ್ರಣ್ಣ, ಜಗದೀಶ್, ಮದುಸೂದನ್ ಇನ್ನಿತರರು ಇದ್ದರು.