ಚಿಕ್ಕನಾಯಕನಹಳ್ಳಿ : ಶನಿವಾರ ರಾತ್ರಿ ಸುರಿದ ಭೀಕರ ಮಳೆಗೆ ತಾಲ್ಲೂಕಿನ ಹಲವು ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆಲವು ಕಡೆ ಮರಗಳು ಉರುಳಿ ವಿದ್ಯುತ್ ಲೈನ್’ನ ಮೇಲೆ ಬಿದ್ದಿರುವ ಕಾರಣ ಕಂಬಗಳು ಮುರಿದು ಬಿದ್ದಿವೆ. ಹಲವೆಡೆ ವಿದ್ಯುತ್ ಪರಿವರ್ತಕಗಳಿಗೂ ಹಾನಿಯಾಗಿದೆ ಎಂದು ಬೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಎನ್ ಬಿ ಗವಿರಂಗಯ್ಯ ತಿಳಿಸಿದ್ದಾರೆ.
ಶನಿವಾರ ರಾತ್ರಿ 8.00 ಗಂಟೆ ಸುಮಾರಿಗೆ ತಾಲ್ಲೂಕಿನ ಹಲವು ಕಡೆ ವಿದ್ಯುತ್ ವ್ಯತ್ಯಯ ಉಂಟಾಗತೊಡಗಿತು. ಕಡೆಗೆ ರಾತ್ರಿಯಿಂದಲೇ ವ್ಯತ್ಯಯವನ್ನು ಸರಿಪಡಿಸುವ ಕೆಲಸ ಪ್ರಾರಂಭಿಸಲಾಯಿತಾದರೂ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಯಿಂದ ಕೆಲಸಕ್ಕೆ ತೊಡಕಾಯಿತು. ಭಾನುವಾರ ಬೆಳಗ್ಗಿನಿಂದ ಮುರಿದು ಬಿದ್ದಿರುವ ಕಂಬಗಳನ್ನು ಹುಡುಕಿ ಅವನ್ನು ಬದಲಿಸಿ ಮತ್ತೆ ವಿದ್ಯುತ್ ಪ್ರಸರಣ ಸಂಪರ್ಕಕ್ಕೆ ಅವನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಬಹುತೇಕ ಭಾನುವಾರ ಸಂಜೆಯ ಹೊತ್ತಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ವಿದ್ಯುತ್ ಸೌಕರ್ಯ ಎಂದಿನಂತೆ ಸುಸ್ಥಿತಿಗೆ ಮರಳಲಿದೆ ಎಂದರು.
ತಾಲ್ಲೂಕಿನ ತಿಮ್ಮನಹಳ್ಳಿ, ಶೆಟ್ಟಿಕೆರೆ, ಹುಳಿಯಾರು, ಚಿ ನಾ ಹಳ್ಳಿ ಹಾಗೂ ಇತರೆಡೆಗಳಲ್ಲಿ ಬಿದ್ದಿರುವ ಕಂಬಗಳನ್ನು ಅಂದಾಜು ಲೆಕ್ಕ ಹಾಕಿದರೆ 70 ರಿಂದ 80 ಕಂಬಗಳು ಎಂಬ ಮಾಹಿತಿಯಿದೆ. ಮಳೆ ಹಾನಿಯಿಂದ ಆಗಿರುವ ವಿದ್ಯುತ್ ಕಂಬಗಳ ನಷ್ಟ ಪ್ರಮಾಣದ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲ. ಸದ್ಯಕ್ಕೆ ಇಲಾಖೆಯ ಮೊದಲ ಆದ್ಯತೆ ಸಾರ್ವಜನಿಕರಿಗೆ ಅನಿರ್ಬಂಧಿತ ವಿದ್ಯುತ್ ಪ್ರಸರಣಕ್ಕೆ ಅನುವು ಮಾಡಿಕೊಡುವ ಕೆಲಸವಾಗಿದೆ ಎಂದರು.
ಬಿದ್ದಿರುವ, ಹಾನಿಯಾಗಿರುವ ಪ್ರತಿಯೊಂದು ಕಂಬದ ಬಳಿ ಇಲಾಖೆಯ ಪ್ರತಿನಿಧಿ ಕಡೆಯಿಂದ ತೆಗೆಯಲಾಗಿರುವ ಜಿಪಿಎಸ್ ಫೋಟೋ ಮಾಹಿತಿಯನ್ನು ಪಬ್ಲಿಕ್ ಸ್ಟೋರಿ ಎಇಇ ಗವಿರಂಗಯ್ಯನವರಲ್ಲಿ ಕೇಳಿತು. ಅವರ ಬಳಿ ಆ ತರಹದ ಮಾಹಿತಿ ಲಭ್ಯವಿರಲಿಲ್ಲ. ಬಹುಶಃ ಸೋಮವಾರದವರೆಗೆ ಅದರ ಸವಿವರ ನೀಡಲಾಗುವುದು ಎಂದರು.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ