ತುರುವೇಕೆರೆ: ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ಬ್ಲಾಕ್ ಕಾಂಗ್ರೆಸ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್ ಹೊರಡಿಸಿರುವುದನ್ನು ಖಂಡಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ, ಮೈಸೂರಿನ ಮೂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಏನೂ ಇರದಿದ್ದರೂ ಕೂಡ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರು ನಡೆ ಖಂಡನೀಯ ಮತ್ತು ಅವರು ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದ್ದು ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಕೂಡಲೇ ರಾಜ್ಯಪಾಲರ ಪ್ರಾಸಿಕ್ಯೂಷನ್ಅನ್ನು ವಜಾಗೊಳಿಸಬೇಕು ಎಂದರು.
ರಾಜ್ಯದ ರಾಜ್ಯಪಾಲರ ಈ ನೆಡೆಯಿಂದ ದೇಶದ ಇತಿಹಾಸದಲ್ಲಿಯೇ ರಾಜಭವನಕ್ಕೆ ಕಪ್ಪು ಚುಕ್ಕಿ ತರಲಾಗಿದೆ.
ಯಾರೋ ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡಿ ಪ್ರಾಸಿಕೂಷನ್ಗೆ ಅನುಮತಿ ನೀಡಿ ಎಂದು ಅರ್ಜಿ ಹಾಕಿದರೆ. ಕೂಡಲೇ ರಾಜ್ಯಪಾಲರು ನೀಡುವುದು ಎಷ್ಟು ಸರಿ. ಸಾಂವಿಧಾನಿಕ ಹುದ್ದೆಯಲ್ಲಿರುವರು ಸಂವಿಧಾನಬದ್ದವಾಗಿ ಕಾರ್ಯ ನಿರ್ವಹಿಸಬೇಕು.
ರಾಜ್ಯಪಾಲರು ಸಂವಿಧಾನದ ಕಗ್ಗೋಲೆ ಮಾಡಿದ್ದಾರೆ. ಬಿಜೆಪಿಯವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ರಾಜಭವನವನ್ನು ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ.
ಬೆಜೆಪಿ, ಜೆಡಿಎಸ್ ಪಕ್ಷದ ಮುಖಂಡರ ಮೇಲೆ ಮತ್ತು ಮಾಜಿ ಮುಖ್ಯಮಂತ್ರಿಗಳ ಮೇಲೆ ಹಲವು ಭ್ರಷ್ಟಾಚಾರಗಳ ಕೇಸ್ಗಳಿದ್ದು ಲೋಕಾಯುಕ್ತರು ಪ್ರಾಸಿಕೂಷನ್ಗೆ ಅನುಮತಿ ನೀಡಿ ಎಂದು ಕೇಳಿದರೂ ರಾಜ್ಯಪಾಲರು ನೀಡುತ್ತಿಲ್ಲ. ಮುಖ್ಯ ಮಂತ್ರಿಗಳು ಯಾವುದೇ ತಪ್ಪು ಮಾಡದಿದ್ದರೂ ಈ ಪ್ರಕರಣದಲ್ಲಿ ಸಿಕ್ಕಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯಪಾಲರು ಸರಿಯಾಗಿ ಪರಿಶೀಲಿಸಿ ಅನುಮತಿ ಕೊಡಬೇಕಿತ್ತು. ಇಂದು ಸಾಂಕೇತಿಕವಾಗಿ ಪ್ರತಿಭಟನೆ ನೆಡೆಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಗೃಹ ಸಚಿವ ಪರಮೇಶ್ವರ್, ಕೆ.ಎನ್.ರಾಜಣ್ಣರ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡುತ್ತೇವೆ ಎಂದರು.
ಇದೇ ವೇಳೆ ತಹಶೀಲ್ದಾರ್ ಎನ್.ಎ.ಕುಂಇ ಅಹಮ್ಮದ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಳಾಲನಾಗರಾಜು, ಪ್ರಸನ್ನಕುಮಾರ್ ಮುಖಂಡರಾದ ಸುಬ್ರಮಣಿಶ್ರೀಕಂಠೇಗೌಡ, ನಂಜುಂಡಪ್ಪ, ಹನುಮಂತಯ್ಯ, ಗೋಣಿತುಮಕೂರು ಲಕ್ಷ್ಮೀಕಾಂತ್, ಗುರುದತ್, ಕೊಂಡಜ್ಜಿಕುಮಾರ್, ಕೆಂಪರಾಜು, ಉದಯಕುಮಾರ್, ತ್ರೈಲೋಕಿನಾಥ್, ದೇವರಾಜು, ಕಲ್ಕರೆರಾಘು, ಶಿವರಾಜು, ರೇವಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.