(ಚಿ ನಾ ಹಳ್ಳಿ ಪುರಸಭೆ ಗದ್ದುಗೆ ; ಸಾಮಾಜಿಕ ನ್ಯಾಯ ಮತ್ತು ಮೈತ್ರಿ-ಧರ್ಮ ; ಎರಡಲಗಿನ ಕತ್ತಿ)
ಚಿ ನಾ ಹಳ್ಳಿ ಪುರಸಭೆ ; ಅಧ್ಯಕ್ಷ ಗಾದಿ ಎಸ್ಟಿ ಮೀಸಲು
(
ಚಿಕ್ಕನಾಯಕನಹಳ್ಳಿ : ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲು ರಾಜಕೀಯ ಪಕ್ಷ ಮತ್ತು ಸದಸ್ಯರುಗಳ ನಡುವೆ ರಾಜಕೀಯ ಲೆಕ್ಕಾಚಾರ ನಡೆಯುತ್ತಿದೆ. ಒಂದೂವರೆ ವರ್ಷದಿಂದಲೂ ಪಟ್ಟಣದ ಪುರಸಭೆಯ ಅಧ್ಯಕ್ಷಗಾದಿ ಖಾಲಿಯಿದೆ. ಈಗ ಆ ಸ್ಥಾನಗಳಿಗೆ ಸರ್ಕಾರದ ಮೀಸಲಾತಿ ಪ್ರಕಟಗೊಂಡಿರುವುದು ಹೊಸ ರಾಜಕೀಯಕ್ಕೆ ನಾಂದಿ ಹಾಡಿದೆ.
ಹಿಂದಿನಿಂದಲೂ ಪಟ್ಟಣದ ಪುರಸಭೆಯ ಅಧಿಕಾರ ಹಂಚಿಕೆಯಲ್ಲಿ ಶಾಸಕ ಸುರೇಶ್ ಬಾಬು’ರವರ ಮಾತೇ ಅಂತಿಮ. ಆದರೆ, ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮವನ್ನು ಪಾಲಿಸಬೇಕಾದ ಸಂಕಷ್ಟವೂ ಇದೆ. ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡೇ ಕಣಕ್ಕಿಳಿಯಲಿದೆ ಎಂಬುದನ್ನು ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕ ಹಾಗೂ ಶಾಸಕ ಸಿ ಬಿ ಸುರೇಶ್ ಬಾಬು’ರವರು ಹೇಳಿದ್ದಾರೆ.
ಮೈತ್ರಿ-ಧರ್ಮ ಪಾಲಿಸುವ ಅನಿವಾರ್ಯತೆಯಿದ್ದರೂ ಸಾಮಾಜಿಕ ನ್ಯಾಯವನ್ನೂ ಪರಿಗಣಿಸಬೇಕಾದ ತುರ್ತಿದೆ. ಇಂಥದ್ದರಲ್ಲಿ ಪುರಸಭೆಯ ರಾಜಕೀಯ ಈ ಬಾರಿ ಯಾವ ಕಡೆಗೆ ವಾಲುವುದೋ ಎಂದು ಸ್ಥಳೀಯ ರಾಜಕೀಯ ಕಾರ್ಯಕರ್ತರು ಕಾದು ನೋಡುತ್ತಿದ್ದಾರೆ.
ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ (ಮೀಸಲು) ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳಲ್ಲಿ ಜಾತಿ ಮೀಸಲಾತಿ ಇರುವ ಅಭ್ಯರ್ಥಿಗಳೇ ಇಲ್ಲ. ಇದು ಜೆಡಿಎಸ್ ಪಕ್ಷಕ್ಕೆ ಅನುಕೂಲಕರವಾಗಿದೆ. ಹೀಗಾಗಿ, ಪ್ರಸಕ್ತ ಪುರಸಭೆಗೆ ಜೆಡಿಎಸ್ ಅಭ್ಯರ್ಥಿಗಳೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಗದ್ದುಗೆ ಏರುವ ಸಾಧ್ಯತೆಯೇ ಹೆಚ್ಚಿದೆ. ಇನ್ನು ಮೈತ್ರಿ-ಧರ್ಮ ಪರಿಪಾಲನೆಗಾಗಿ ಶಾಸಕರು ಮನಸ್ಸು ಮಾಡಿದರೆ, ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಬೆಂಬಲಿತ ಪುರಸಭಾ ಸದಸ್ಯರಿಗೆ ಬಿಟ್ಟುಕೊಡುವ ಸಾಧ್ಯತೆಯಿದೆ.
ಬಲಾಬಲ ::
ಚಿಕ್ಕನಾಯಕನಹಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್’ಗಳಿವೆ. ಅದರಲ್ಲಿ ಜೆಡಿಎಸ್ ಸದಸ್ಯರು 15 ಸ್ಥಾನಗಳಲ್ಲಿ, ಬಿಜೆಪಿ ಸದಸ್ಯರು 6 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು 2 ಸ್ಥಾನಗಳಲ್ಲಿ ಇದ್ದಾರೆ. ಈ ಬಾರಿ ಪುರಸಭೆ ಅಧ್ಯಕ್ಷ ಸ್ಥಾನ ಎಸ್ ಟಿ (ಪರಿಶಿಷ್ಟ ಪಂಗಡ) ಅಭ್ಯರ್ಥಿಗೆ ಮೀಸಲಾಗಿದೆ. 6’ನೇ ವಾರ್ಡಿನಿಂದ ಪುರಸಭಾ ಸದಸ್ಯರಾಗಿರುವ ಜೆಡಿಎಸ್ ಪಕ್ಷದ ಸಿ ಎಚ್ ದಯಾನಂದ್ ಒಬ್ಬರೇ ಎಸ್ ಟಿ ಸಮುದಾಯಕ್ಕೆ ಸೇರಿದ ಸದಸ್ಯರಾಗಿದ್ದಾರೆ. ಹಾಗಾಗಿ, ಬಹುತೇಕ ಸಿ ಎಚ್ ದಯಾನಂದರೇ ಪುರಸಭೆಯ ಅಧ್ಯಕ್ಷರಾಗುವುದು ಖಾತ್ರಿಯಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗಗಳ (ಬಿಸಿಎಂ) ಪ್ರವರ್ಗ ‘ಬಿ’ ಮೀಸಲಾತಿ ನಿಗದಿಯಾಗಿದೆ. ಈ ಸ್ಥಾನಕ್ಕಾಗಿ 3’ನೇ ವಾರ್ಡಿನ ಪುರಸಭಾ ಸದಸ್ಯೆಯಾದ ಜೆಡಿಎಸ್ ಬೆಂಬಲಿತ ಶ್ರೀಮತಿ ಸುಧಾ ಸುರೇಶ್, 21’ನೇ ವಾರ್ಡಿನ ಜೆಡಿಎಸ್ ಬೆಂಬಲಿತ ಪುರಸಭಾ ಸದಸ್ಯ ಸಿ ಎಮ್ ರಾಜಶೇಖರ್ ಹಾಗೂ 9’ನೇ ವಾರ್ಡಿನಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ಆನಂತರ ಜೆಡಿಎಸ್’ನಲ್ಲಿ ಸೇರ್ಪಡೆಯಾದ ಪುರಸಭಾ ಸದಸ್ಯ ಮಂಜುನಾಥ್’ರವರುಗಳು ರೇಸ್’ನಲ್ಲಿದ್ದಾರೆ. ಈ ಮೂವರಲ್ಲಿ ಶಾಸಕರು ಯಾರ ಮೇಲೆ ಹೆಚ್ಚು ಒಲವು ತೋರುವರೋ ಎಂದು ಕಾದು ನೋಡಬೇಕಿದೆ.
_ಸಂಚಲನ
ಚಿಕ್ಕನಾಯಕನ ಸೀಮೆಯಿಂದ