ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ
ಇವರು ಬಹುತೇಕ ಜನರಿಗೆ ಗೊತ್ತಿಲ್ಲ. ಮೊನ್ನೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ ಯಾರಿವರು ಎಂದವರೇ ಹೆಚ್ಚು ಜನರು. ಮುಖವಂತೂ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಬಿಡಿ. ಇವರನ್ನು ತುಮಕೂರು ರೈಲುಗಳ ಹಿಂದೆ ಓಡಿದ ಯುವಕ ಎಂದು ಕರೆದರೆ ತಪ್ಪಿಲ್ಲ.
ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಬಳಿಕ ಇವರು ಆಯ್ಕೆ ಮಾಡಿಕೊಂಡಿದ್ದು ತುಮಕೂರು ರೈಲು ಸಂಚಾರ ಸುಧಾರಣೆಯ ಕೆಲಸವನ್ನು. ಇದಕ್ಕೆ ಇವರು ಯಾರನ್ನೂ ಕಾಯಲಿಲ್ಲ. ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್ ಸ್ನೇಹಿತರಾದ ಬಳಿಕ ಈ ಇಬ್ಬರರೂ ಒಂದೇ ಧ್ಯಾನ. ತುಮಕೂರು ರೈಲು ಸಂಪರ್ಕದ ಸುಧಾರಣೆ ಹೇಗೆ?
ಅಂದ ಹಾಗೆ ಇವರ ಹೆಸರು ರಘೋತ್ತಮ ರಾವ್. ಸಾದ ಸೀದಾ ಸರಳ ಮನುಷ್ಯ, ರಾತ್ರಿ ಹನ್ನೆರಡು- ಒಂದು ಗಂಟೆಯಾದರೂ ರೈಲ್ವೆ ಇಲಾಖೆಯ ಹೊಸ ಹೊಸ ಯೋಜನೆಗಳ ಬಗ್ಗೆ ಕಣ್ಣಾಡಿಸುತ್ತಲೇ ಇರುತ್ತಾರೆ. ಈ ಯೋಜನೆಗಳಲ್ಲಿ ಯಾವವು ತುಮಕೂರು ಮೇಲೆ ಹಾದು ಹೋಗರೆ ಎಲ್ಲಿಗೆ ಸಂಪರ್ಕ ಕಲ್ಪಿಸಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.
ಹದಿನೈದು-ಇಪ್ಪತ್ತು ವರ್ಷಗಳ ಮಾತು. ಈ ರಘೋತ್ತಮ ರಾವ್ ಯಾವಾಗಲೂ ಸಂಸದ ಜಿ.ಎಸ್.ಬಸವರಾಜ್ ಕಚೇರಿಗೂ ಸುತ್ತಾಡುತ್ತಿದ್ದರು. ಮಾತೆತ್ತಿದ್ದರೆ ಸಾಕು ರೈಲು, ಸಂಸದರಿಗೂ ಬೇಜಾರು. ಇವನ್ಯಾರಪ್ಪ ದಿನಾ ಆಫೀಸಿಗೆ ಅಲೆಯುತ್ತಾನೆ ಎಂದು ಕುಂದರನಹಳ್ಳಿ ರಮೇಶ್ ಬಳಿ ಹಂಚಿಕೊಂಡರು., ನಂತರದು ಇತಿಹಾಸ,
ತುಮಕೂರಿನ ಅನೇಕ ರೈಲು ಗಾಡಿಗಳ ಸಂಪರ್ಕ, ಹೊಸ ಯೋಜನೆಗಳ ಜಾರಿ ಈ ಇಬ್ಬರ ಪರಿಶ್ರಮ ಇದೆ. ಈ ಇಬ್ಬರೂ ಸಂಸದ ಬಸವರಾಜ್ ಅವರನ್ನು ಕಾಡಿಬೇಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮಾಡಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ. ಇದಕ್ಕಾಗಿ ದೆಹಲಿಗೂ ಹೋಗಿ ಬಂದಿದ್ದಾರೆ.
ಇವರ ಪರಿಶ್ರಮ, ಆಸಕ್ತಿ ಗಮನಿಸಿ ರೈಲ್ವೆ ಇಲಾಖೆಯ ನಾಗರಿಕರ ಸಮಿತಿಗೆ ರಘೋತ್ತಮರಾವ್ ಅವರನ್ನು ಸದಸ್ಯರನ್ನಾಗಿ ಸಹ ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಬೆಂಗಳೂರಿನಿಂದ ತುಮಕೂರಿಗೆ ಡೆಮು ರೈಲು ಬರಬೇಕೆಂದು ಕನಸು ಕಂಡ ಮೊದಲಿಗ ಈ ರಘೋತ್ತಮ ರಾವ್.
ಈಗ ಡೆಮು ರೈಲು ಬಂದಿದೆ, ಅದು ಬರುಬರುತ್ತಲೇ ರಘೋತ್ತಮ ರಾವ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಹೊತ್ತು ತಂದಿದೆ. ಪ್ರಶಸ್ತಿಯ ಮೌಲ್ಯವೂ ಹೆಚ್ಚಿದೆ. ಸಮಾಜ ಸೇವೆಯನ್ನು ಗುರುತಿಸುವ ಪರಿಗೂ ಹೊಸ ಕಣ್ಣೋಟ ಸಿಕ್ಕಿದೆ ಎನ್ನಬಹುದೇನೋ?