ಪಾವಗಡ: ತಾಲ್ಲೂಕಿನಾದ್ಯಂತ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಬೇಜವಬ್ಧಾರಿತನ ಪ್ರದರ್ಶಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವತ್ತ ಗಮನಹರಿಸದಿದ್ದರೆ ನವೆಂಬರ್-21 ರಂದು ತಾಲ್ಲೂಕು ಬಂದ್ ನಡೆಸಲಾಗುವುದು ಎಂದು ಹಸಿರು ಸೇನೆ ಅಧ್ಯಕ್ಷ ಪುಜಾರಪ್ಪ ಎಚ್ಚರಿಸಿದರು.
6 ತಿಂಗಳಿಂದ ಸರ್ಕಾರ ನೀಡುವ ವೃದ್ಧಾಪ್ಯ ವೇತನ, ಅಂಗ ವಿಕಲ ವೇತನವಿಲ್ಲದೆ ಬಡ ಜನತೆ ಅಂಚೆ ಕಚೇರಿ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದಾರೆ. ಆಧಾರ್ ಮಾಡಿಸಿಕೊಳ್ಳಲು ಆಂಧ್ರ ಸೇರಿದಂತೆ ಬೇರೆಡೆ ಹೋಗಬೇಕಿದೆ. ರೈತರ ಸಾಲ ಮನ್ನಾ ಕೇವಲ ಕಡತಗಳಿಗೆ ಸೀಮಿತವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮನೆ ಇರುವರಿಗೆ, ಹಣ ಕೊಡುವರಿಗೆ ಮನೆ ಹಾಕಿ ಕೊಡುತ್ತಿದ್ದಾರೆ. ಸರ್ಕಾರ ಕೊಡುವ 1.5 ಲಕ್ಷ ರೂಪಾಯಿ ಪಾಯ ಹಾಕಿಸಲೂ ಸಾಲುತ್ತಿಲ್ಲ ಎಂದು ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಪಿಸಿದರು.
ಜೆಡಿಎಸ್ ಪಕ್ಷದ ವಕ್ತಾರ ಅಕ್ಕಲಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾಗೆ ಅಗತ್ಯವಿರುವ ಅನುದಾನ ಮೀಸಲಿಟ್ಟಿದ್ದರು. ಈಗಿನ ಸರ್ಕಾರ ಕೂಡಲೇ ಸಾಲ ಮನ್ನಾ ಅನುದಾನವನ್ನು ರೈತರ ಖಾತೆಗೆ ವರ್ಗಾಯಿಸಬೇಕು. ರೈತರ ಬಗ್ಗೆ ಬಿಜೆಪಿ ಸರ್ಕಾರ ತಾತ್ಸಾರ ಮನೋಭಾವ ಪ್ರದರ್ಶಿಸಬಾರದು. ಜೆಡಿಎಸ್ ತಾಲ್ಲೂಕು ಘಟಕ ರೈತರು ನಡೆಸಲಿರುವ ಬಂದ್ ಗೆ ಬೆಂಬಲ ನೀಡಲಿದೆ ಎಂದರು.
ರೈತ ಮುಖಂಡ ಗಂಗಾಧರ್ ಮಾತನಾಡಿ, ಸರ್ಕಾರ, ಜನಪ್ರತಿನಿಧಿಗಳ ಅಸಮರ್ಥತೆಯಿಂದ ಬಡ ಜನತೆಗೆ ಅನ್ಯಾಯವಾಗುತ್ತಿದೆ. ಸಾಕಷ್ಟು ಮಂದಿ ರೈತರ ಖಾತೆಗೆ ಸಾಲ ಮನ್ನಾ ಹಣ ಬಂದಿಲ್ಲ ಎಂದು ದೂರಿದರು.
ಮುಖಂಡ ಅಶ್ವಥಪ್ಪ, ಪಾತಣ್ಣ, ಹನುಮಂತರಾಯಪ್ಪ, ಶಿವಕುಮಾರ್, ಸಿದ್ದಪ್ಪ, ನರಸಪ್ಪ, ಈರಣ್ಣ, ಗಿರಿಯಪ್ಪ, ಮೂಡಲಪ್ಪ, ತಿಮ್ಮಣ್ಣ, ಚನ್ನಗಿರಪ್ಪ ಉಪಸ್ಥಿತರಿದ್ದರು.