Publicstory.in
ತುಮಕೂರು: ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿ ನರೇಂದ್ರಮೋದಿ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಅದು ನಿಜರೂಪಕ್ಕೆ ಬರಲಿದೆಯೇ ಎಂಬ ಕುತೂಹಲ ಮನೆ ಮಾಡಿದೆ.
2022ರ ವೇಳೆಗೆ ರೈತರ ಈಗಿನ ಆದಾಯ ಎರಡು ಪಟ್ಟು ಹೆಚ್ಚಾಗಬೇಕೆಂಬುದು ಪ್ರಧಾನಿ ಕನಸು. ರೈತರ ಆದಾಯ ದುಪ್ಪಟ್ಟು ಆಗಬೇಕಾದರೆ ಕೃಷಿಗೆ ನೀರು ಹಾಗೂ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ ಸಿಗಬೇಕು. ಈ ಮೂರು ನಿಟ್ಟಿನಲ್ಲಿ ತುಮಕೂರಿನಲ್ಲಿ ಸದ್ದಿಲ್ಲದೇ ಕೆಲಸ ಆರಂಭಿಸಲಾಗಿದೆ.
ಸಂಸದ ಜಿ.ಎಸ್.ಬಸವರಾಜ್, ತುಮಕೂರು ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಅವರು ಎರಡು ಯೋಜನೆಗಳನ್ನು ಕೈಗೆತ್ತಿಗೊಂಡಿದ್ದಾರೆ.
ತುಮಕೂರು ಜಿಲ್ಲೆಯ ಎಲ್ಲ ಕೆರೆಗಳಿಗೆ, ಕೆರೆಗಳು ಇಲ್ಲದ ಊರುಗಳಿಗೆ ಹೊಸದಾಗಿ ಕೆರೆಕಟ್ಟಿಸಿ ನದಿ ನೀರು ನೀಡುವ ಬೃಹತ್ ಯೋಜನೆ ಜಾರಿಯ ಹಿಂದೆ ಸಂಸದ ಬಸವರಾಜ್ ಬಿದ್ದಿದ್ದಾರೆ. ಇದೇ ಕಾರಣಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹಕಾರ ಪಡೆಯಲು ಹಿಂದೆ-ಮುಂದೆ ನೋಡುವುದಿಲ್ಲ ಎಂದಿದ್ದಾರೆ.
ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಅಭಿವೃದ್ಧಿ ಕೆಲಸ ಮಾಡುವಲ್ಲಿ ದೇವೇಗೌಡರು ರಾಕ್ಷಸ ಇದ್ದಂತೆ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ತುಮಕೂರು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಕೊಟ್ಟರೆ ಜಿಲ್ಲೆಯ ಅಂತರ್ಜಲ ಸಮಸ್ಯೆಯೇ ಬಗೆಹರಿಯಲಿದೆ. ಇದಕ್ಕಾಗಿ ಎತ್ತಿನಹೊಳೆ, ಹೇಮಾವತಿ ಫ್ಲಡ್ ಕೆನಾಲ್, ಕುಮಾರಧಾರ ಯೋಜನೆಯಿಂದ ಜಿಲ್ಲೆಗೆ ನೀರು ತರುವ ಯೋಜನೆ ಜಾರಿಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ಆರಂಭಗೊಂಡಿದೆ.
ಇಡೀ ರಾಜ್ಯದ ಎಲ್ಲ ಕೆರೆಗಳಿಗೂ ನೀರು ಕೊಡಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಟೆಂಡರ್ ಕರೆಯಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿದ್ದು, ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಸದ ಜಿ.ಎಸ್.ಬಸವರಾಜ್ ಅವರ ಒತ್ತಡ ಹಾಗೂ ಮನವಿ ಮೇರೆಗೆ ಈ ಯೋಜನೆಯಡಿ ಪ್ರಾಯೋಗಿಕವಾಗಿ ತುಮಕೂರು ಜಿಲ್ಲೆಯನ್ನು ಮೊದಲಿಗೆ ಆಯ್ಕೆ ಮಾಡಲಾಗಿದೆ. ಆ ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಬಿಡಲು ಸುಮಾರು 2000 ಕೋಟಿ ರೂಪಾಯಿ ವೆಚ್ಚದ ಯೋಜನೆ ಬೇಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮುಖ್ಯಮಂತ್ರಿ ಅವರ ಆದೇಶದ ಮೇರೆಗೆ ಸಂಸದರು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪ್ರಸ್ತಾವನೆಯನ್ನು ನೀತಿ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ. ಹೀಗಾಗಿ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ ಎಂದರು.ಈ ಪ್ರಾಯೋಗಿಕ ಯೋಜನೆ ಜಾರಿಗಾಗಿ ಸಂಸದರು ಅಧಿಕಾರಿಗಳು ಹಾಗೂ ಅಭಿವೃದ್ಧಿ ತಜ್ಞರ ತಂಡ ರಚಿಸಿದ್ದು, ಅವರೆಲ್ಲರ ಸಲಹೆ ಸೂಚನೆಗಳನ್ನು ಸಹ ಪಡೆಯುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪುವ ಸಾಧ್ಯತೆ ಇದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದು ಅವರು ಹೇಳಿದರು.ಕೆರೆಗಳಿಗೆ ನೀರು ಹರಿಸಿದರೆ ರೈತರು ಬೇರೆ ಏನನ್ನು ಕೇಳುವುದಿಲ್ಲ. ತುಮಕೂರು ಎಲ್ಲ ಕೃಷಿ ಉತ್ಪನ್ನಗನ್ನು ಬೆಳೆಯುವ ಯೋಗ್ಯವಾದ ಜಿಲ್ಲೆಯಾಗಿದೆ. ನೀರು ಕೊಡುವುದರಿಂದ ರೈತರ ಆದಾಯ ದುಪ್ಪಟ್ಟು ಆಗುವುದರಲ್ಲಿ ಅನುಮಾನ ಇಲ್ಲ ಎಂದರು.
ರಫ್ಯೋದ್ಯಮಕ್ಕೆ ಸ್ಮಾರ್ಟ್ ಸಿಟಿ ಹಣ
ರಫ್ಯೋದ್ಯಮಕ್ಕೆ ಸ್ಮಾರ್ಟ್ ಸಿಟಿ ಹಣ ಬಳಕೆ
ತುಮಕೂರು ನಗರದ ಸ್ಮಾರ್ಟ್ ಸಿಟಿ ಹಣವನ್ನು ಬಳಸಿಕೊಂಡು ರೈತರ ಆದಾಯ ದುಪ್ಪಟ್ಟು ಮಾಡುವ ಯೋಜನೆಯತ್ತ ನಗರ ಶಾಸಕ ಜ್ಯೋತಿ ಗಣೇಶ್ ಗಮನ ಹರಿಸಿದ್ದಾರೆ.
ರೈತರು ಏನೇ ಬೆಳೆದರೂ ಮಾರುಕಟ್ಟೆ, ಬೆಲೆ ಇಲ್ಲದಿದ್ದರೆ ಅವರ ಆದಾಯ ದುಪ್ಪಟ್ಟುಗೊಳಿಸಲು ಸಾಧ್ಯವಿಲ್ಲ. ಇನ್ನೊಂದು ದಶಕದಲ್ಲಿ ತುಮಕೂರು ದೇಶದ ನಂ- 1 ಕೃಷಿ ರಫ್ತೋದ್ಯಮ ಜಿಲ್ಲೆಯಾಗಿ ಬೆಳೆಯಬೇಕು. ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ನಲ್ಲಿ 20 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಈ ಹಣದಲ್ಲಿ ನಗರ ವ್ಯಾಪ್ತಿಯಲ್ಲಿ 342 ಉತ್ಪನ್ನಗಳ ಕ್ಲಸ್ಟರ್ ಗಳನ್ನು ಆರಂಭಿಸಲಾಗುವುದು. ಈ ಕ್ಲಸ್ಟರ್ ಗಳು ರಫ್ತು, ಮಾರುಕಟ್ಟೆ, ಮೌಲ್ಯವರ್ಧನೆ, ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ, ತಂತ್ರಜ್ಞಾನವನ್ನು ನೀಡುವ ಸಂಬಂಧ ಸಂಶೋಧನೆ, ಮಾರುಕಟ್ಟೆ ವಿಶ್ಲೇಷಣೆ, ರೈತರಿಗೆ ನೆರವು ನೀಡುವ ಕೆಲಸ ಮಾಡಲಿವೆ ಎಂದು ತಿಳಿದುಬಂದಿದೆ.
ಈ ಹಿಂದೆ ಜಿ.ಎಸ್.ಬಸವರಾಜ್ ಸಂಸದರಾಗಿದ್ದಾಗ ಆರ್ಟಿಸನ್ ಹಬ್ ಸ್ಥಾಪಿಸಲು ರೂಪುರೇಷೆ ಸಿದ್ಧಪಡಿಸಿದ್ದರು. ಅವರು ಸೋತ ಬಳಿಕ ಯೋಜನೆ ಸ್ಥಗಿತಗೊಂಡಿತ್ತು. ಈಗ ಅವರು ಸಂಸದರು. ಆದರೆ ಇದೇ ಯೋಜನೆಯನ್ನು ನಗರ ಶಾಸಕರು ಸ್ಕಿಲ್ ಸಿಟಿ ಹೆಸರಿನಲ್ಲಿ ಜಾರಿಗೆ ತರಲು ಹೊರಟಿದ್ದಾರೆ. ಈ ಯೋಜನೆ ಜಾರಿಗೊಂಡರೆ ರೈತರ ಬದುಕು ಬದಲಾಗಿದೆ ಎಂದು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಪ್ರತಿಕ್ರಿಯಿಸಿದರು.
.
ಸ್ಕಿಲ್ ಸಿಟಿಯಲ್ಲಿ ತಂತ್ರಜ್ಞಾನವನ್ನು ಮೀರಿ ರೈತರ ಸಮಸ್ಯೆಗಳನ್ನು ಎತ್ತಿಕೊಂಡಿರುವುದು ಸ್ವಾಗತಾರ್ಹ. ತುಮಕೂರು ತೆಂಗು, ಅಡಿಕೆ, ಶೇಂಗಾ, ಮಾವು, ಹುಣುಸೆ, ಹೂವು, ರಾಗಿ ಮತ್ತಿರರ ಬೆಳೆಗಳಿಗೆ ದೇಶದಲ್ಲೇ ಪ್ರಸಿದ್ಧಿಯಾಗಿದೆ.ಇವುಗಳ ರಫ್ತಿಗೆ ಮೊದಲ ಆದ್ಯತೆ ನೀಡಬೇಕು. ಪ್ರಾಯೋಗಿಕವಾಗಿ ತಕ್ಷಣವೇ ಸ್ಕಿಲ್ ಸಿಟಿಯಲ್ಲಿ ತೆಂಗು ಕ್ಲಸ್ಟರ್ ಆರಂಭಿಸಬೇಕು. ನಗರ ಶಾಸಕರ ಪ್ರಯತ್ನ ಶಾಘ್ಲನೀಯ. ಜಿಲ್ಲೆಯ ಎಲ್ಲ ಶಾಸಕರು ಇದಕ್ಕೆ ಕೈ ಜೋಡಿಸಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಮತ್ತಷ್ಟು ಅನುದಾನವನ್ನು ತರಬೇಕು ಎಂದು ಬೆಲೆ ಕಾವಲು ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ ಕೆಳಹಟ್ಟಿ ತಿಳಿಸಿದರು.
ನೀರಾವರಿ ವಿಷಯದಲ್ಲಿ ಈಗಾಗಲೇ ಜಿಲ್ಲೆಯ ಜನಪ್ರತಿನಿಧಿಗಳು ಒಂದಾಗಬೇಕು. ಪಕ್ಷಾತೀತವಾಗಿ ಕೈ ಜೋಡಿಸಬೇಕು. ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಪ್ರಾಯೋಗಿಕ ಯೋಜನೆ ಶೀಘ್ರವೇ ಅನುಷ್ಠಾನಕ್ಕೆ ಸಂಸದರ ನೇತೃತ್ವದಲ್ಲಿ ಮುಖ್ಯಮಂತ್ರಿ ಮೇಲೆ ಎಲ್ಲ ಶಾಸಕರು ಒತ್ತಡಹಾಕಬೇಕು ಎಂದು ರೈತ ಸಂಘದ ಮುಖಂಡ ರಾಜಣ್ಣ ಪ್ರತಿಕ್ರಿಯಿಸಿದರು.