ಪಬ್ಲಿಕ್ ಸ್ಟೋರಿ: ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಆರಂಭಿಸಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಅಂಗನವಾಡಿ ನೌಕರರ ವಿವಿಧ ಒತ್ತಾಯಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಕರೆ ನೀಡಿದ್ದ ಪಾದಯಾತ್ರೆಗೆ ಪೊಲೀಸ್ ರು ತಡೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಜ್ಯದ ವಿವಿಧ ಭಾಗಗಳಿಂದ ತುಮಕೂರಿಗೆ ಅಂಗನವಾಡಿ ನೌಕರರು ಆಗಮಿಸಿ ಅಲ್ಲಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸುವ ಕರೆಯನ್ನು ನೀಡಲಾಗಿತ್ತು. ಈಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಗಮನಕ್ಕೆ ಲಿಖಿತ, ಮೌಖಿಕವಾಗಿ ತರಲಾಗಿದೆ ಎಂದು ಅಂಗನವಾಡಿ ನೌಕರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ವರಲಕ್ಷ್ಮಿ ತಿಳಿಸಿದರು.
ಕೋಲಾರ ಸೇರಿದಂತೆ ರಾಜ್ಯದ ಹಲವೆಡೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಬರುತ್ತಿದ್ದವರನ್ನು ಪೊಲೀಸರು ತಡೆದು ದೌರ್ಜನ್ಯ ಎಸಗುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ನಡೆಸುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎಂದು ಮುಖಂಡರು ದೂರಿದ್ದಾರೆ.
ಪತ್ರಿಕಾ ಗೋಷ್ಠಿ ನಡೆಯುವಾಗಲೇ ತುಮಕೂರು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಮುಖಂಡರಾದ ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಸೈಯದ್ ಮುಜೀದ್, ಬಸವರಾಜು ಅವರೊಂದಿಗೆ ಮಾತು ಕತೆ ನಡೆಸುತ್ತಿದ್ದಾರೆ.
ಈ ವೇಳೆಗಾಗಲೇ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪಾದಯಾತ್ರೆಗೆ ಚಾಲನೆ ನೀಡಬೇಕಿತ್ತು. ವಿವಿಧೆಡೆಯಿಂದ ಪಾದಯಾತ್ರೆಗಾಗಿ ತುಮಕೂರಿಗೆ ಆಗಮಿಸಿರುವ ಕಾರ್ಯಕರ್ತೆಯರು ಪೊಲೀಸರ ನಡೆಗೆ ಬೇಸತ್ತು ಕಾದು ಕುಳಿತಿದ್ದಾರೆ.