ತುಮಕೂರು: ತಾಲ್ಲೂಕಿನ ಹೆಬ್ಬೂರು ಸುತ್ತಮುತ್ತಲ ಗ್ರಾಮಗಳಲ್ಲಿ ಒಂದು ತಿಂಗಳಿಂದ ಜನರ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆ ಕೊನೆಗೂ ಮಂಗಳವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಹೆಬ್ಬೂರು ಸಮೀಪದ ಗಿಡದಪಾಳ್ಯದಲ್ಲಿ ಬೋನು ಇಡಲಾಗಿತ್ತು. ಈ ಚಿರತೆ ಇಬ್ಬರ ರಕ್ತ ಹೀರಿ ಕೊಂದಿತ್ತು.
ಚಿರತೆ ಹಿಡಿಯಲು ಅರಣ್ಯ ಇಲಾಖೆ ಹರ ಸಾಹಸ ಪಟ್ಟಿತ್ತು. ಒಮ್ಮೆ ನಾಯಿಯನ್ನು ಕಟ್ಟಿದರೂ ಬೋನಿಗೆ ಬಿದ್ದಿರಲಿಲ್ಲ. ಬೋನಿನ ಬಳಿ ಬಂದು ನಾಯಿಯನ್ನು ನೋಡಿಕೊಂಡು ವಾಪಸ್ ಆಗಿತ್ತು.
ಇದಾದ ಬಳಿಕ ಬೋನಿಗೆ ದನದ ಮಾಂಸದ ವಾಸನೆ ಬಡಿಯುವ ದ್ರವ ಸಹ ಸಿಂಪಡಿಸಲಾಗಿತ್ತು. ಆದರೂ ಚಿರತೆ ಬೋನಿನೊಳಗೆ ಹೋಗಿರಲಿಲ್ಲ.
ಇದರಿಂದ ಕೊನೆಗೆ ಅರಣ್ಯ ಸಿಬ್ಬಂದಿ ಬೇಸತ್ತಿದ್ದರು.ನಿನ್ನೆ ನಾಯಿ ತೆಗೆದು ಕುರಿ ಕಟ್ಟಿದ್ದರು. ಕುರಿ ತಿನ್ನಲು ಹೋಗಿ ಸಿಕ್ಕಿ ಬಿದ್ದಿದೆ.
ಅರಣ್ಯ ಇಲಾಖೆ ಕೆಲಸಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೀಪು ಬೋರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂದೆ ಕಾಡು ಪ್ರಾಣಿಗಳ ಇರುವಿಕೆ ಬಗ್ಗೆ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಚಿರತೆ ದಾಳಿಗೆ ಬಲಿಯಾದ ಇಬ್ಬರ ಮಕ್ಕಳಿಗೂ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.