ತುಮಕೂರು: ಕನ್ನಡ ಸಂಶೋಧನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದ ಡಾ.ಚಿದಾನಂದಮೂರ್ತಿಯನ್ನು ಕಳೆದುಕೊಂಡಿರುವುದು ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾ.ಹ.ರಮಾಕುಮಾರಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಅವರು ಚಿದಾನಂದಮೂರ್ತಿ ಕನ್ನಡ ಸಾಹಿತ್ಯ, ನಾಡು-ನುಡಿಗೆ ಅಪಾರ ಕೊಡುಗೆಯನ್ನು ನೀಡಿದ್ದರು. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.
ಸಂಶೋಧನಾ ಕ್ಷೇತ್ರದಲ್ಲಿ ಚಿದಾನಂದಮೂರ್ತಿ ಅವರು ಗಣನೀಯ ಕೆಲಸ ಮಾಡಿದ್ದಾರೆ. ಕನ್ನಡ ಶಾಸನಗಳ ಸಾಂಸ್ಕೃತಿಕ ಆಧ್ಯಯ ಎಂಬ ಸಂಶೋಧನ ಪ್ರಬಂಧವನ್ನು ಬರೆದು ಡಾಕ್ಟರೇಟ್ ಪಡೆದರು. ಕರ್ನಾಟಕದಲ್ಲಿ ಶಾಸನಗಳು ಎಲ್ಲೆಂದರಲ್ಲಿ ಬಿದ್ದುಹೋಗಿದ್ದವು. ಶಿಲಾಶಾಸನಗಳಿಗೆ ಎತ್ತು, ಎಮ್ಮೆ ಕಟ್ಟುತ್ತಿದ್ದರು. ಅವುಗಳಿಗೆ ಸಗಣಿ ಮೆತ್ತಿಕೊಂಡಿದ್ದವು. ಇಂತಹ ಶಾಸನಗಳನ್ನು ಪತ್ತೆ ಮಾಡಿ ಅವುಗಳ ಸಂರಕ್ಷಣೆಯ ಜೊತೆಗೆ ಆ ಶಾಸನಗಳಲ್ಲಿರುವುದನ್ನು ಕೃತಿಗೆ ಇಳಿಸಿದ ಕೆಲಸ ಮಾಡಿದ ಹಿರಿಯರು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲೂ ಅವರು ಕಾರ್ಯಕ್ಷೇತ್ರದಲ್ಲಿ ತೊಡಗಿದ್ದರು. ಹಿರೇಗುಂಡಕಲ್ ನಲ್ಲಿರುವ ಶಾಸನಗಳನ್ನು ಪತ್ತೆ ಮಾಡಿ ಅವುಗಳನ್ನು ಬೆಳಕಿಗೆ ತಂದರು. ವಿಮರ್ಶ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ. ಸಣ್ಣಸಣ್ಣ ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ಕನ್ನಡ ನಾಡು, ಸಂಸ್ಕೃತಿಯನ್ನು ಉಣಬಡಿಸಿದ್ದಾರೆ. ಕನ್ನಡ ಉಳುವಿಗಾಗಿ ಆತ್ಮಹತ್ಯೆಗೂ ಮುಂದಾಗಿದ್ದರು ಎಂದರು.
ಗೋಕಾಕ್ ಚಳವಳಿಯ ನಂತರ ಕರ್ನಾಟಕದಲ್ಲಿ ಸಾಹಿತಿ ಕಲಾವಿದರ ಬಳಗವನ್ನು ಕಟ್ಟಿ ನಾಡುನುಡಿಗೆ ಶ್ರಮಿಸಿದರು. ಕನ್ನಡ-ಕನ್ನಡಿಗೆ-ಕರ್ನಾಟಕ ಕೃತಿಯಂತಹ ಹಲವು ಪುಸ್ತಕಗಳನ್ನು ಹೊರತಂದ ಕೀರ್ತಿ ಚಿದಾನಂದಮೂರ್ತಿ ಅವರಿಗೆ ಸಲ್ಲುತ್ತದೆ. ಅವರು ಕನ್ನಡದ ನಿಜವಾದ ಆಸ್ತಿಯಾಗಿದ್ದರು. ಅವರಿಲ್ಲದೆ ದೊಡ್ಡದೊಂದು ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.