Tumkur: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಗಮನ ಕೊಡುವುದರ ಮೂಲಕ ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಸಿದ್ಧರಾಗಿ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್ ರವಿಪ್ರಕಾಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನೀಯರಿಂಗ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ‘ಮಷಿನ್ ಲರ್ನಿಂಗ್ ಯೂಸಿಂಗ್ ಪೈಥಾನ್ ಅಂಡ್ ಇಂಟರ್ನೆಟ್ ಥಿಂಗ್ಸ್’ ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೂರು ವರ್ಷಗಳಲ್ಲಿ ಸರಿಯಾದ ಮಾರ್ಗದರ್ಶನದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕೆಂದರು.
ವಿಚಾರಮಂಥನ, ಕಾರ್ಯಗಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಭವಿಷ್ಯದಲ್ಲಿ ಉದ್ಯೋಗ ಮತ್ತು ಕೌಶಲ್ಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಜೀವನದಲ್ಲಿ ಅನುಭವಗಳು ಉತ್ತಮ ಪಾಠಗಳನ್ನು ಕಲಿಸುತ್ತವೆ. ಆ ಪಾಠಗಳನ್ನು ಸದುದ್ದೇಶಗಳಿಗೆ ಬಳಸಿಕೊಳ್ಳಬೇಕೆಂದು ಪ್ರಾಂಶುಪಾಲರು ಹೇಳಿದರು.
ಕಲಿಕಾ ಹಂತದಲ್ಲಿ ಸವಾಲುಗಳು ಎದುರಾಗುವುದು ಸಾಮಾನ್ಯ. ಆದರೆ, ಅವುಗಳನ್ನು ಮೆಟ್ಟಿನಿಂತಾಗ ಸಾಧನೆಯ ಹಾದಿ ಸುಗಮವಾಗುತ್ತದೆ. ಮತ್ತು ಕಲಿಯುವ ತುಡಿತದ ಜತೆಗೆ ಸತತ ಪ್ರಯತ್ನ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ರವಿಪ್ರಕಾಶ್ ಕಿವಿಮಾತು ಹೇಳಿದರು.
ಸಾಹೆ ರಿಜಿಸ್ಟ್ರಾರ್ ಡಾ.ಎಂ.ಝಡ್ ಕುರಿಯನ್ ಮಾತನಾಡಿ, ಕಲಿಕಾ ಮಟ್ಟದಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಳ್ಳಬೇಕು, ಆ ಶಿಸ್ತು ಭವಿಷ್ಯದಲ್ಲೂ ರೂಢಿಯಲ್ಲಿರುತ್ತದೆ ಹಾಗೂ ವ್ಯಕ್ತಿತ್ವ ಘನತೆಗೆ ಶಿಸ್ತು ಬಹುಮುಖ್ಯ. ವಿದ್ಯಾರ್ಥಿಗಳು ಸಮಯಕ್ಕೆ ಬೆಲೆ ಕೊಡಬೇಕು, ಅಂದಾಗ ಮಾತ್ರ ಜೀವನದಲ್ಲಿಯೂ ಒಳ್ಳೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯ ಎಂದರು.