Publicstory.in
Tipturu: ಎತ್ತಿನಹೊಳೆ ಹೋರಾಟ ಸಮಿತಿಯ ನೇತೃತ್ವದಲ್ಲಿ ತಿಪಟೂರು ತಾಲೂಕಿನ ನಾಗತಿಹಳ್ಳಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ, ತಿಪಟೂರಿಗೆ ನೀರಿನ ಹಂಚಿಕೆ, ಸಂತ್ರಸ್ತರಿಗೆ ಸೂಕ್ತ ಭೂ ಹಾಗೂ ಇನ್ನಿತರ ಪರಿಹಾರ, ಸಂತ್ರಸ್ತರಿಗೆ ನಿರಾಶ್ರಿತರ ಪ್ರಮಾಣ ಪತ್ರ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಮಾರ್ಚ್ ತಿಂಗಳ 20ನೇ ರಿಂದ ನಾಗತಿಹಳ್ಳಿ ಗೇಟ್‌ನಿಂದ ತಿಪಟೂರು ಎಸಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ’ ಹೋಗಲು ನಿರ್ಧರಿಸಲಾಯಿತು.
ನೂರಾರು ಸಂತ್ರಸ್ತರು ಇದರಲ್ಲಿ ಭಾಗವಹಿಸುತ್ತಾರೆ. ತಿಪಟೂರು ಜೊತೆಗೆ ಬೇರೆ ತಾಲೂಕುಗಳ ಸಂತ್ರಸ್ತರೂ ಮತ್ತು ನಾಗರಿಕರು ಸಹ ಜೊತೆ ಸೇರುತ್ತಾರೆ.
ರೈತರಿಗೆ ಕನಿಷ್ಠ ಅಧಿಸೂಚನೆಯನ್ನೂ ನೀಡದೆ ಕೆಲವೇ ಸಾವಿರಗಳನ್ನು ಕೊಟ್ಟು, ತ್ರಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡು ಪರಿಹಾರದ ಕನ್ನಡಿಗಂಟು ತೋರಿಸಿ ಹೋಗುತ್ತಿದ್ದಾರೆ.
ತಿಪಟೂರಿನ ಗುಬ್ಬಿ ತಾಲೂಕು, ಹಾಸನದ ಅರಸೀಕೆರೆ, ಬೇಲೂರು ತಾಲೂಕುಗಳಲ್ಲಿ ಐದಾರು ವರ್ಷ ಕಳೆದರೂ ತ್ರಿಪಕ್ಷೀಯ ಒಪ್ಪಂದ ಮಾಡಿಕೊಂಡವರಿಗೆ ಪರಿಹಾರದ ಹಣ ಬಂದಿಲ್ಲ. ಹಾಗಿದ್ದರೂ ಏಜೆಂಟರನ್ನು ಮುಂದಿಟ್ಟುಕೊಂಡು ತಿಪಟೂರು ಭಾಗದಲ್ಲೂ ಅದೇ ರೀತಿಯಲ್ಲಿ ತ್ರಿಪಕ್ಷೀಯ ಒಪ್ಪಂದಗಳನ್ನು ಮಾಡಲು ಏಜೆಂಟರನ್ನು ಬಿಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲವೆಂದು ಸಂತ್ರಸ್ತರು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡರು.
ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ರೈತರ ಸಭೆ ನಡೆಸಲಾಗುವುದು ಮತ್ತು ನೀರಿನ ಹಂಚಿಕೆ ಹಾಗೂ ಭೂ ಪರಿಹಾರಗಳ ಕುರಿತು ಚರ್ಚಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿದೆ. ಆದ್ದರಿಂದ ಈ ಸಭೆ ನಡೆಯುವುದಕ್ಕೂ ಮುಂಚೆ ಎತ್ತಿನಹೊಳೆ ಯೋಜನೆಯ ಯಾವುದೇ ಸಿಬ್ಬಂದಿಯನ್ನು ಜಮೀನಿನ ಒಳಗೆ ಬಿಡುವುದಿಲ್ಲವೆಂದು ನಿರ್ಧರಿಸಿದರು.
ಎತ್ತಿನಹೊಳೆ ಯೋಜನೆಯ ಜಾರಿಗೆ ಕೊರಟಗೆರೆಯಲ್ಲಿ ಆದಂತೆ ಪೊಲೀಸ್ ಬಲ ಬಳಸಿ ದೌರ್ಜನ್ಯದಿಂದ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ; ಜಿಲ್ಲಾಧಿಕಾರಿ, ತಹಸೀಲ್ದಾರರ ಆದೇಶದ ಹೆಸರಿನಲ್ಲಿ ಬಲವಂತವಾಗಿ ಕಾಮಗಾರಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಭೆ ನಿರ್ಧರಿಸಿತು. ಸಂತ್ರಸ್ತರಿಗೆ ಎಲ್ಲಾ ಪರಿಹಾರಗಳನ್ನು ನೀಡಿದ ನಂತರವೇ ಕಾಮಗಾರಿಯನ್ನು ಆರಂಭಿಸಬೇಕು; ಇಲ್ಲವಾದರೆ ಜಮೀನು ಬಿಡುವುದಿಲ್ಲ ಎಂದು ಸಂತ್ರಸ್ತರು ಒಕ್ಕೊರಲಿನಿಂದ ನಿರ್ಧರಿಸಿದರು. ಹಾಗೆಯೇ ಯಾವುದೇ ಸುಳ್ಳು ವಂದಗತಿಗಳಿಗೆ ರೈತರು ಕಿವಿಗೊಡಬಾರದೆಂದು ಸಭೆ ಕರೆ ನೀಡಿತು.
ಸಭೆಯಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಅಧ್ಯಕ್ಷ ತಿಮ್ಲಾಪುರ ದೇವರಾಜು, ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಉಪಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಸಹಕಾರ್ಯದರ್ಶಿ ಶ್ರೀಕಾಂತ್, ಜನಸ್ಪಂದನದ ಶಶಿಧರ್, ಯೋಗಾನಂದ ಸ್ವಾಮಿ, ಅರಸೀಕೆರೆಯ ಆದಿಹಳ್ಳಿ ಮಧು ಮತ್ತು ನಾಗತಿಹಳ್ಳಿ, ಮಾರಗೊಂಡನಹಳ್ಳಿ, ಬೊಮ್ಮಲಾಪುರ, ತಿಮ್ಮಲಾಪುರ ಹಾಗೂ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.