ಭೂ ದಿನದ ಅಂಗವಾಗಿ ಭೂಮಿಯ ಬಗ್ಗೆ ಒಂದು ಕವಿತೆ
ದೇವರಹಳ್ಳಿ ಧನಂಜಯ
ನಾನು ಭೂಮಿ
ನಾನು ತಾಯಿ
ಕಾಯುತ್ತಿರುವೆ
ಸಕಲ ಚರಾಚರವ
ನಿನ್ನ ಕುಟಿಲವ
ಹೇ! ಮಾನವ
ನೀನು ಒಳ್ಳೆಯವನಾಗಿದ್ದರೆ
ನಗುತ್ತಿದ್ದೆ ನಾ ವಸುಂಧರೆ.
ನಾನು ಊರ್ವಿ
ನಾನು ನಿಗರ್ವಿ
ಉರಿಯುತ್ತಿದ್ದೇನೆ .
ಮಲೆ ಕಾನು ನೆಲ ಬಾನು
ಉರಿದು ಮುಕ್ಕಿರುವೆ.
ಹೇ! ಮನುಜ
ನೀನೊಬ್ಬ ಒಳ್ಳೆಯವಾನಾಗಿದ್ದರೆ.
ಉಳಿಯುತ್ತಿದ್ದೆ ಈ ಧರೆ.
ನಾನು ಅವನಿ.
ನಾನು ಜನನಿ.
ಕೊರಗುತ್ತಿದ್ದೇನೆ,
ನಿನಗೆ ಜನ್ಮ ನೀಡಿದ್ದಕ್ಕೆ.
ಸಕಲ ಕೂಲಕೋಟಿಯ,
ವಿಪತ್ತಿಗೆ ದೂಡಿದ್ದಕ್ಕೆ.
ಹೇ!ನರ
ನೀ ಬಿಟ್ಟಿದ್ದಾರೆ ಹುನ್ನಾರ
ಬೀಗುತ್ತಿದ್ದೆ ನಾ ಕ್ಷಿತಿ.
ನಾ ಮಣ್ಣು
ತೆರೆ ನಿನ್ನ ಕಣ್ಣು
ನಾ ಶಾರ್ವರಿ
ನಿನ್ನ ಸ್ಥಾನವ ಅರಿ
ನಾ ಪ್ರಶ್ನಿ ಕೇಳುತ್ತಿದ್ದೇನೆ.
ಗುಡಿಕಟ್ಟಿ,ಗಡಿಕಟ್ಟಿ
ದ್ವೇಷವೇಕೆ ಬಿತ್ತುತಿರುವೆ
ನಾನು ಇಳೆ ಇಳಿದು ನೋಡು
ಕೆಡುಕ ಕೊಂದ ಹಲಾಹಲೆ.
ನಾನು ಧರಣಿ
ಸಹನೆಯ ಗಣಿ
ಗರ್ಭದ ಕೋಪ
ಜ್ವಾಲೆ ಆಗುವ ಮುನ್ನ
ನಿಲ್ಲಿಸು ನಿನ್ನ ಆಟಾಟೋಪ
ಸಹನೆ ಸಂಯಮದ ಅರ್ಥ ತಿಳಿ
ಸಹಜೀವಿಗಳೊಟ್ಟಿಗೆ ಸಹಬಾಳ್ವೆಗೆ ಇಳಿ
ಉಳಿ ಉಳಿಸು ಹೇಳುತಿರುವೆ ಕರುಣ.
ಇಲ, ಇಳೆ, ಇಲೆ, ಈಡ, ಉರ್ಬರೆ, ಉರ್ವಿ, ಕರಣ, ಕ್ಷಮ, ಕ್ಷಯ, ಕಾಂತಾ, ಕಾಶ್ಯಪ, ಕ್ಷಿತಿ, ಕ್ಷಿತಿವಧು, ಕುಂಬಿನಿ, ಕುವ, ಕುವಲಯ, ಕ್ಷೋಣಿ, ಗಂಧವತಿ, ಗಹ್ವರಿ, ಗ್ರಹ, ಗೋತ್ರೆ, ಚತುರಂತ, ಜಗತಿ, ಜಮೀನ, ಜಲರಶನೆ, ತಿರ‍್ಯಕ್‌ಲೋಕ, ತಿರೆ, ಧನಸ್, ಧನ್ವಾ, ಧರಣಿ, ಧರಣೀಚಕ್ರ, ಧರಣಿತಲ, ಧರಣಿಮಂಡಲ, ಧರಾ, ಧರಾಗ್ರ, ಧರಾತಲ, ಧರಾಧಾರೆ, ಧರೆ, ಧರಿತ್ರಿ, ಧಾತ್ರಿ, ಧೇನು, ನಗಧರೆ, ನಿಪತ್ಸೆ, ನೆಲ, ಪರಿಗ್ರಹ, ಪೃಥಿ, ಪೃಥು, ಪ್ರಶ್ನಿ, ಪುಣ್ಯಭೂಮಿ, ಪೊಡವಿ, ಬುವಿ, ಭುವನ, ಭೂ, ಭುಗೋಳ, ಭೂತಲ, ಭೂತಧಾತ್ರಿ, ಭೂದೇವಿ, ಭೂಮ, ಭೂಮಿಕೆ, ಭೂಮಂಡಲ, ಮಟ್ಟಿ, ಮಣ್ಣು, ಮರ್ತ್ಯಲೋಕ ಮೃತ, ಮೃತ್ತಿಕಾ, ಮಹೀಮಂಡಲ, ಮಹೀತಲ, ಮಾತೃ, ಮಾತೆ, ಮಾಧವಿ, ಮೇದಿನಿ, ರತ್ನಗರ್ಭ, ರನ್ನವಸಿರ್, ರಸನೆ, ರಸಾ, ರಸೆ, ರೂಢಿ, ರೋಧಸಿ, ವಲ್ಲಿ, ವಸುಂಧರ, ವಸುಧಾ, ವಸುಮತಿ, ವಾಸವಿ, ವಿಪುಲ, ಶಾರ್ವರಿ, ಶೈಲಧರೆ, ಸಮುದ್ರವಸನ, ಸರ್ವಂಸಹ, ಸ್ಥಂಡಿಲ, ಸಾಗರಾಂಭಾರ, ಸಾರಂಗ, ಸ್ಥಿರ, ಹಲಾಹಲೆ, ಹಾಳು, ಹಿರಣ್ಯಗರ್ಭೆ, ಹೇಮಗರ್ಭೆ..ಇವು ಭೂತಾಯಿಗೆ ಇರುವ ಹೆಸರುಗಳು.ಇವುಗಳಲ್ಲಿನ ಕೆಲ ಹೆಸರುಗಳನ್ನು ಬಳಸಿಕೊಂಡು ಕವಿತೆ ಕಟ್ಟಲಾಗಿದೆ.