ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಜನ ಕೊರೊನಾ ವೈರಸ್ ಎಂಬುದೊಂದು ಇದೆ ಅನ್ನೋದನ್ನೇ ಮರೆತು ಹೋಗಿದ್ದಾರೆ. ಶಾಪಿಂಗ್, ಓಡಾಟ ಅಂತ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕನಿಷ್ಟಪಕ್ಷ ಸರಿಯಾಗಿ ಮಾಸ್ಕ್ ಅನ್ನು ಧರಿಸುತ್ತಿಲ್ಲ. ಹೀಗಾಗಿ ಜನರಿಗೆ ಡಾ. ಮಂಜುನಾಥ್ ಎಚ್ಚರಿಕೆಯ ಸಂದೇಶವನ್ನ ನೀಡಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಮಂಜುನಾಥ್, ಕೊರೊನಾ ಇಳಿಕೆಯಾಗುತ್ತಿದೆ ಎಂದು ಮೈಮರೆಯಬೇಡಿ ಎಂದಿದ್ದಾರೆ.
ಕೊರೊನಾ ಅಲೆ ರಾಜ್ಯದಲ್ಲಿ ಈ ವರ್ಷಾಂತ್ಯದಲ್ಲಿ ಕೊನೆಗೊಳ್ಳಲಿದೆ ಎಂಬುದೆಲ್ಲಾ ಸುಳ್ಳು. ಈ ವೈರಸ್ ಮತ್ತೆ ಹೊಸ ರೂಪದಲ್ಲಿ ಬರುವ ಸಾಧ್ಯತೆಗಳಿವೆ. ಕೊರೊನಾ ಇಳಿಮುಖವಾಗುತ್ತಿದೆ ಎಂದು ಯಾರು ಮೈಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇಷ್ಟು ದಿನ ಶೀತ, ಜ್ವರ, ಕೆಮ್ಮು, ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳುವುದು ಕೊರೊನಾ ಲಕ್ಷಣವಾಗಿತ್ತು. ಆದ್ರೀಗ ಅದು ಬೇರೆಯದೇ ರೂಪದಲ್ಲಿ ಬರಬಹುದು. ಇನ್ನು ಕೊರೊನಾದಿಂದ ಗುಣಮುಖರಾದವರಿಗೆ ಅಡ್ಡಪರಿಣಾಮಗಳು ಎದುರಾಗುತ್ತಿವೆ. ರಕ್ತನಾಳ ಹೆಪ್ಪುಗಟ್ಟುವುದು. ಹೃದಯದ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ಹೀಗಾಗಿ ಸ್ವಲ್ಪ ಎಚ್ಚರದಿಂದಿರ ಬೇಕು ಎಂದು ಡಾ. ಮಂಜುನಾಥ್ ಸೂಚಿಸಿದ್ದಾರೆ.