ಪಾವಗಡ: ಕೊರೋನಾ ಪಾಸ್ ಎಂಬ ಕೆಟ್ಟ ಹೆಸರು ಬಾರದಿರಲಿ ಎಂಬ ದೃಷ್ಟಿಯಿಂದ ಪರೀಕ್ಷೆ ನಡೆಸಲಾಯಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ವಳ್ಳೂರು ಗ್ರಾಮದಲ್ಲಿ ಶನಿವಾರ ಸಂಜೆ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ಟ್ಯಾಬ್ ವಿತರಿಸಿ, ಪರೀಕ್ಷೆ ಇಲ್ಲದೆ ಎಲ್ಲರನ್ನೂ ಪಾಸ್ ಮಾಡಿದ್ದರೆ ಮಕ್ಕಳು ಪರೀಕ್ಷೆ ಬರೆಯದೆ ಉತ್ತೀರ್ಣರಾಗಿದ್ದಾರೆ ಎಂಬ ಕಪ್ಪು ಮಚ್ಚೆ ಜೀವನವಿಡಿ ಇರುತ್ತಿತ್ತು. ಜೂನ್ ಮಾಹೆಯಲ್ಲಿ ಪರೀಕ್ಷೆ ನಡೆಸಲಾಗುವುದು. ಮಕ್ಕಳು ಕೋವಿಟ್ 19 ಸುರಕ್ಷತಾ ಕ್ರಮ ಅನುಸರಿಸಿ ಹೊರಗಡೆ ತಿಂಡಿ, ಆಹಾರ ಸೇವಿಸದೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜನವರಿ 11 ರಿಂದ 1 ರಿಂದ 4 ನೇ ತರಗತಿ ಮಕ್ಕಳಿಗೆ ನಲಿಯುತ್ತಾ ಕಲಿಯೋಣ ಆಕಾಶವಾಣಿ ಕಾರ್ಯಕ್ರಮ ಆರಂಭಿಸಲಾಗುವುದು. ಪೋಷಕರು ಕಾರ್ಯಕ್ರಮವನ್ನು ಮಕ್ಕಳಿಗೆ ಕೇಳಿಸಬೇಕು. ಮಕ್ಕಳ ಹಾಡು, ಇತರೆ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಕಳುಹಿಸುವ ಅವಕಾಶವೂ ಇದೆ ಎಂದರು.
ಕೋವಿಡ್ ನಿಂದಾಗಿ ಕೆಲವೆಡೆ ಬಾಲಕಾರ್ಮಿಕರಾಗಿ ಮಕ್ಕಳು ದುಡಿಯುತ್ತಿದ್ದಾರೆ. ಮತ್ತೆ ಕೆಲ ತಾಲ್ಲೂಕುಗಳಲ್ಲಿ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಬಾಲ್ಯ ವಿವಾಹಗಳು ಹೆಚ್ಚಿವೆ. ಇವೆಲ್ಲ ಗಮನದಲ್ಲಿಟ್ಟುಕೊಂಡು ಜನವರಿ-1 ರಿಂದ 10, 12 ನೇ ತರಗತಿಗಳನ್ನು ಆರಂಭಿಸಲಾಗಿದೆ ಎಂದರು.
ಪುರುಷೋತ್ತಮರೆಡ್ಡಿ ತನ್ನ ತಾಯಿಯ ತವರೂರಿನ ಮಕ್ಕಳಿಗಾಗಿ ಟ್ಯಾಬ್ ಕೊಡಿಸುತ್ತಿರುವುದು ಮಾಧರಿ ಕಾರ್ಯ ಎಂದರು. ಗಡಿ ಗ್ರಾಮಗಳಲ್ಲಿ ಮಕ್ಕಳಿಗಾಗಿ ಶ್ರಮಿಸುತ್ತಿರುವ ಶಿಕ್ಷಕರ ಕಾರ್ಯ ಅಭಿನಂದನೀಯ ಎಂದರು.
ವೈದ್ಯ ಡಾ. ಪ್ರಭಾಕರರೆಡ್ಡಿ, ಬಿಇಒ ಪವನ ಕುಮಾರ್ ರೆಡ್ಡಿ, ಶಿರಸ್ತೇದಾರ್ ನರಸಿಂಹಮೂರ್ತಿ, ಕಟ್ಟಾ ನರಸಿಂಹಮೂರ್ತಿ, ಪುರುಷೋತ್ತಮರೆಡ್ಡಿ, ಬಾಲಾಜಿ ಶ್ರೀನಿವಾಸ್ ಇತರರು ಇದ್ದರು.