ಕೊರಟಗೆರೆ(ತುಮಕೂರು ಜಿಲ್ಲೆ):
ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯೊಂದು ಜನಿಸಿದ ಅಚ್ಚರಿಯ ಘಟನೆ ಕೊರಟಗೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಪಾತಗಾನಗಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಂಗಳಮ್ಮನ ಹಳ್ಳಿಯ ರೈತ ಕುಮಾರ್ ಎಂಬುವರ ಮನೆಯಲ್ಲಿ ಈ ವಿಚಿತ್ರವಾದ ಮೇಕೆ ಮರಿ ಜನಿಸಿದೆ.
ಗ್ರಾಮೀಣ ಪ್ರದೇಶವಾಗಿರುವ ಕಾರಣದಿಂದಾಗಿ ಮನೆಯವರು ಸೇರಿದಂತೆ ಗ್ರಾಮ ಹಾಗೂ ಅಕ್ಕಪಕ್ಕದ ಗ್ರಾಮದ ಜನ ಆತಂಕಕ್ಕೆ ಈಡಾಗಿದ್ದಾರೆ. ಮನುಷ್ಯನ ಮುಖ ಮತ್ತು ಗೂಬೆ ಆಕಾರದ ಕಣ್ಣಿನ ಮೇಕೆ ಮರಿಯನ್ನು ನೋಡಲು ಗ್ರಾಮದ ಜನರು ಕುಮಾರ್ ಮನೆಗೆ ಕಿಕ್ಕಿರಿದು ಬಂದು ನೋಡುತ್ತಿರುವುದು ಸಾಮಾನ್ಯವಾಗಿದೆ.
ಮರಿಯನಾಲ್ಕು ಕಾಲುಗಳು ಮತ್ತು ಎರಡು ಕಿವಿಗಳು ಮೇಕೆಯನ್ನೇ ಹೋಲುತ್ತಿದ್ದು, ಮನುಷ್ಯ ರೂಪದ ತಲೆ ಮತ್ತು ಗೂಬೆಯನ್ನು ಹೋಲುವ ಕಣ್ಣು ಮಾತ್ರ ವಿಚಿತ್ರವಾಗಿ ಕಾಣಿಸಿದೆ. ಇನ್ನುಳಿದಂತೆ ಮೇಕೆ ಮರಿಯ ನಾಲಿಗೆ ಬಾಯಿಯಿಂದ ಹೊರಗಡೆ ಚಾಚಿದೆ. ಗೂಬೆ ಕಣ್ಣಿನಂತೆ ಕಾಣುತ್ತಿರುವ ಮಿಂಚಿನ ನೋಟದ ಅದರ ಕಣ್ಣು ರೈತಾಪಿ ಜನಕ್ಕೆ ವಿಚಿತ್ರವಾಗಿ ಕಂಡು ಬಂದಿದ್ದು, ನೋಡುಗರ ಗಮನ ಸೆಳೆದಿದೆ.
ರೈತ ಕುಮಾರ್ ಅವರು ಕಳೆದ ಕೆಲವಾರಗಳ ಹಿಂದೆ 14ಸಾವಿರ ವೆಚ್ಚದ ಮೇಕೆಯನ್ನು ಖರೀದಿ ಮಾಡಿದ್ದರು. ಗರ್ಭಿಣಿಯಾಗಿದ್ದ ಮೇಕೆ ಶುಕ್ರವಾರ ಮಧ್ಯಾಹ್ನ ವಿಚಿತ್ರ ರೂಪದ ಮರಿಗೆ ಜನನ ನೀಡಿರೋದು ಈ ಭಾಗದ ಜನರಲ್ಲಿ ಅಚ್ಚರಿ ಮೂಡಿಸಿದೆ.