ಕೊರಟಗೆರೆ (ತುಮಕೂರು):
ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ರದ್ದುಗೊಳಿಸಿ ಮುಜುರಾಯಿ ಇಲಾಖೆ ಶನಿವಾರ ಆದೇಶ ನೀಡಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕಮನೀಯ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಆಂಜನೇಯ ಬ್ರಹ್ಮ ರಥೋತ್ಸವಕ್ಕೆ ಕೊರೊನಾ ಅಡ್ಡಿಯಾಗಿದೆ.
ಬೆಂಗಳೂರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸುತ್ತೋಲೆಯಂತೆ ಕ್ಯಾಮೇನಹಳ್ಳಿ ಬ್ರಹ್ಮ ರಥೋತ್ಸವ ಸ್ಥಗಿತಗೊಳಿಸಿ ಕೊರಟಗೆರೆ ತಹಶೀಲ್ದಾರ್ ಗೋವಿಂದರಾಜು ಆದೇಶ ಮಾಡಿದ್ದಾರೆ.
ಪ್ರತಿ ವರ್ಷದಂತೆ ಜಾತ್ರೆಗೆ ಬಂದ ದನಗಳು
ಸಂಕ್ರಾಂತಿ ಹಬ್ಬದ ಮಾರನೇಯ ದಿನದಿಂದ ಪ್ರಾರಂಭ ಆಗುವ ಕ್ಯಾಮೇನಹಳ್ಳಿ ಧನಗಳ ಜಾತ್ರೆಗೆ ಈಗಾಗಲೇ ನೂರಾರು ಜೋಡಿ ರಾಸುಗಳ ಆಗಮನವಾಗಿ ಅರ್ಧದಷ್ಟು ಜಾತ್ರೆಯು ಕೂಡಿದೆ. ಮುಜರಾಯಿ ಇಲಾಖೆಯ ದಿಢೀರ್ ಆದೇಶದಿಂದ ರಾಜ್ಯ ಮತ್ತು ಹೊರರಾಜ್ಯದಿಂದ ಆಗಮಿಸಿರುವ ರೈತರಿಗೆ ಈಗ ಸಮಸ್ಯೆ ಎದುರಾಗಿದೆ.
ಕ್ಯಾಮೇನಹಳ್ಳಿ ಕ್ಷೇತ್ರದಲ್ಲಿ ಫೆ.17ರಿಂದ ಫೆ.28ರವರೇಗೆ ನಡೆಯಬೇಕಿದ್ದ ಶ್ರೀಆಂಜನೇಯ ದೇವರ ದನಗಳ ಜಾತ್ರೆ, ಬ್ರಹ್ಮ ರಥೋತ್ಸವ, ಅನ್ನ ಸಂತರ್ಪಣೆ, ದಾಸೋಹ ವ್ಯವಸ್ಥೆಯನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ.
ಕೋವಿಡ್ ನಿಯಮಾವಳಿ ಅನುಸರಿಸಿ ಪೂಜೆಯಲ್ಲಿ ಸೇವಾಕರ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ದೇಗುಲದಲ್ಲಿ ಧಾರ್ಮಿಕ ವಿಧಿ ವಿಧಾನ, ಪೂಜಾ ಕಾರ್ಯಕ್ರಮ, ಕಂದಾಯ ಇಲಾಖೆ ಸಿಬ್ಬಂದಿ ಒಳಗೊಂಡು 25ಜನ ಮೀರದಂತೆ ಉತ್ಸವ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ.