ತುಮಕೂರು: ಮಂಗಳೂರಿನ ಪೂಂಜಾಲ ಕಟ್ಟೆಯ ವಕೀಲ ಕುಲದೀಪ ಶೆಟ್ಟಿ ನಿವಾಸಕ್ಕೆ ರಾತ್ರೋರಾತ್ರಿ ಪೊಲೀಸರು ಅತಿಕ್ರಮ ಪ್ರವೇಶಿಸಿ, ದೌರ್ಜನ್ಯ ಎಸಗಿ ಬಂಧಿಸಲಾಗಿದ್ದು ಇದನ್ನು ಖಂಡಿಸಿ ತುಮಕೂರಿನಲ್ಲಿ ವಕೀಲರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕುಲದೀಪ ಶೆಟ್ಟಿ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅಜಯ್ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮನೆ ಗೋಪಾಲಗೌಡ ಮಾತನಾಡಿ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಮತ್ತು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ವಕೀಲರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ದೌರ್ಜನ್ಯಕ್ಕೆ ಒಳಗಾದ ಕುಲದೀಪ ಶೆಟ್ಟಿ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಹಲ್ಲೆ ಮಾಡಿದ ಎಸ್.ಐ ಸತೀಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹಿಮಾನಂದ, ಉಪಾಧ್ಯಕ್ಷ ಕೆ.ಸಿ.ವೆಂಕಟೇಶ್, ಜಂಟಿ ಕಾರ್ಯದರ್ಶಿ ಭಾರತಿ, ಸದಸ್ಯರಾದ ರೇಖಾರಾಜ್, ನವೀನ್ ನಾಯಕ್, ರಾಮಕೃಷ್ಣ, ರಾಮಾಂಜಿನೇಯ ಎಲ್. ಷಣ್ಮುಖ ಎಲ್. ಎಸ್.ಮಂಜುನಾಥ್, ರಂಗಧಾಮಯ್ಯ ಜೆ.ಸಿ. ಸುರೇಶ್, ಈ ಶಿವಣ್ಣ ಮೊದಲಾದವರು ಭಾಗವಹಿಸಿದ್ದರು.
ವರದಿ: ಇ.ಶಿವಣ್ಣ, ವಕೀಲರು