Friday, October 4, 2024
Google search engine
Homeಸಾಹಿತ್ಯ ಸಂವಾದಅಂತರಾಳಅಂಬಾಸಿಡರ್ ಕಾರು ಹಾಗೂ ಅಣ್ಣನ ನೆನಪು

ಅಂಬಾಸಿಡರ್ ಕಾರು ಹಾಗೂ ಅಣ್ಣನ ನೆನಪು

ಮಹೇಂದ್ರ ಕೃಷ್ಣಮೂರ್ತಿ


ನಿನ್ನೆ ಅಂದರೆ ಜನವರಿ 17 ರಂದು ಪಾವಗಡದ ಹಳ್ಳಿಯೊಂದರಿಂದ ಬಂದಿದ್ದ ಶಿವಶಂಕರ್ ಅವರ ಅಂಬಾಸಿಡರ್ ಕಾರಿನೊಳಗೆ ಕುಳಿತ ತಕ್ಷಣ ಅಣ್ಣನ ಲೋಕಕ್ಕೆ ಕರೆದುಕೊಂಡು ಹೋಯಿತು. ಇದೇ ದಿನ ಅಣ್ಣನ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆ ಕಾಕತಾಳೀಯವಷ್ಟೇ ಆಗಿತ್ತು.

ಬನ್ನಿ ಗುರುಗಳೇ ಎಂದೇ ಕರೆಯುವ ಶಿವ ಶಂಕರ್ ಅವರ ಕಾರು ನೋಡಿದಾಗ ಅಚ್ಚರಿಯಾಯಿತು.

ಹೊಸ ತಲೆಮಾರಿನ ಜನರಿಂದ ಮರತೇ ಹೋದಂತಿರುವ ಅಂಬಾಸಿಡರ್ ಕಾರನ್ನು ಅವರು ಜತನದಿಂದ ಕಾಪಿಟ್ಟುಕೊಂಡು ಬಂದಿದ್ದಾರೆ.

ಇದು ಪ್ರಧಾನ ಮಂತ್ರಿಗಳ ಕಾರು, ಭಯ ಬೀಳಬೇಡಿ ಎಂದರು. ಹಿಂದೆಲ್ಲ ಅಂಬಾಸಿಡರ್ ಕಾರು ಎಂದರೆ ಅದು ಪ್ರಧಾನಿಗಳು, ಮುಖ್ಯಮಮಂತ್ರಿಗಳ ಭದ್ರತೆಯ ಕಾರಾಗಿತ್ತು. ಹೀಗಾಗಿ ಅದನ್ನು ಬಳಸುವುದು ಅತಿ ಪ್ರತಿಷ್ಠೆಯ ವಿಷಯವಾಗಿತ್ತು.

ಅಂಬಾಸಿಡರ್ ಕಾರು ನನ್ನ ತಂದೆಯವರ ಅಚ್ಚುಮೆಚ್ಚಿನ ಕಾರು. ನಾವು ಸಣ್ಣವರಿದ್ದಾಗ ಅಣ್ಣ ಸಾಕಷ್ಟು ಸಲ ಅದರ ಬಗ್ಗೆ ಹೇಳುತ್ತಿದ್ದರು. ಮಧ್ಯ ರಾತ್ರಿಗಳಲ್ಲಿ ಯಾರು, ಯಾರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುವ ಪ್ರಸಂಗಗಳು, ಜೀವ ಬದುಕಿಸಿದ ಸಂತಸಗಳನ್ನು ಹಂಚಿಕೊಳ್ಳುತ್ತಿದ್ದರು. ನಾವು ಸಣ್ಣವರಿದ್ದ ಕಾರಣ ಅಷ್ಟೊಂದು ನೆನಪಿಲ್ಲ. ಆದರೆ ಈ ಎಲ್ಲ ಅವರ ಸಹಾಯ ಹಸ್ತದ ಕತೆಗಳನ್ನು ಹೇಳುವ ವೇಳೆಗೆ ಅವರು ಕಾರು ಮಾರಾಟ ಮಾಡಿದ್ದರು. ತೀರಾ ಬಡತನದಲ್ಲಿದ್ದರು.

ಕನ್ನಡದ ಹೋರಾಟದ ಹುಚ್ಚು ಹತ್ತಿಸಿಕೊಂಡಿದ್ದ ಅಣ್ಣನಿಗೆ ಕನ್ನಡ ಹೋರಾಟಗಾರ, ಮ.ರಾಮಮೂರ್ತಿ ಅವರ ಬಗ್ಗೆ ವಿಶೇಷ ಪ್ರೀತಿ. ಅವರ ನೆನಪಿಗಾಗಿ ಅಣ್ಣ ತಮ್ಮ ಸಹಿಯನ್ನು ಬದಲಿಸಿಕೊಂಡಿದ್ದರು.

ಕನ್ನಡದ ಹೋರಾಟದಿಂದ ರೈತ ಹೋರಾಟದ ಕಡೆಗೆ ಆಕರ್ಷಿತರಾಗಿ ಪಿಡಬ್ಲ್ಯುಡಿ ಗುತ್ತಿಗೆದಾರಿಕೆಯನ್ನು ಬಿಟ್ಟು ಕಡುಕಷ್ಟಕ್ಕೆ ಬಂದಿದ್ದು ಬೇರೆಯದೇ ಕತೆ. ವೈ.ಕೆ.ರಾಮಕೃಷ್ಣಯ್ಯ ಅಣ್ಣನ ಸ್ನೇಹಿತರು.

ಹೋರಾಟದ ಹಾದಿಯಲ್ಲಿ ಕಳೆದುಕೊಂಡ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟವರಲ್ಲ ಅಣ್ಣ. ರೈತ ಸಂಘ ಚುನಾವಣೆಗೆ ನಿಂತು, ಸೋತು, ಮತ್ತೇ ಚುನಾವಣೆಗೆ ನಿಲ್ಲದಂತ ಸ್ಥಿತಿಗೆ ಬಂದಂತ ದಿನಗಳು ಅವು.

ರೈತ ಸಂಘದ ಚುನಾವಣೆಯ ಸೋಲು ಅವರಿಗೆ ಸಂಘದ ಸೋಲಾಗಿರಲಿಲ್ಲ. ಅವರಿಗೆ ವಿಪರೀತವಾದ ನಂಬಿಕೆ ಇತ್ತು. ರೈತ ಸಂಘದ ಸರ್ಕಾರ ಬರಲಿದೆ. ಹೀಗಿರುವ ಪಕ್ಷಗಳಿಗೆ ಉಳಿಗಾಲ ಇರುವುದಿಲ್ಲ ಎಂಬುದು ಅವರ ತರ್ಕ.

ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಸ್ಕಾಲರ ಶಿಪ್ ಸಿಗಬೇಕು ಎನ್ನುತ್ತಿದ್ದರು. ಈಗಿನ ಬಸವರಾಜ್ ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತಂದಿದೆ. ಇದು ಅಣ್ಣನ ಕಲ್ಪನೆಯಾಗಿತ್ತಲ್ಲ ಅನ್ನಿಸಿತು.

ಹೋರಾಟಗಾರರಲ್ಲಿ ನಾನು ಎರಡು ಪಂಗಡಗಳನ್ನು ಗುರುತಿಸಿಕೊಂಡಿದ್ದೇನೆ. ಹೋರಾಟಗಾರರಾದ ನಂತರ ಆಸ್ತಿ, ರಾಜಕೀಯ ಶಕ್ತಿ, ಮಾಧ್ಯಮಗಳಲ್ಲಿ ಪ್ರಚಾರ, ಮಂಚೂಣಿ ನಾಯಕತ್ವದ ಮುಂದಾಳುಗಳಾಗಿ ಎಲ್ಲವನ್ನು ಅನುಭವಿಸುವರು.

ಇನ್ನೊಂದು ಪಂಗಡ. ಆಸ್ತಿ, ಅಂತಸ್ತು, ಶ್ರೀಮಂತಿಕೆಯ ಜತೆಗೆ ಬಂದವರು, ಹೋರಾಟದ ಹುಚ್ಚು ಹತ್ತಿಸಿಕೊಂಡು ಅವರು ಏನು ಅಲ್ಲದಂತೆ ಎಲ್ಲವನ್ನು ಕಳೆದುಕೊಂಡು ಸಂಸಾರವನ್ನು ಬೀದಿ ಪಾಲು ಮಾಡುವರು ಅಥವಾ ನಿರ್ಗತಿಕ ಸ್ಥಿತಿಗೆ ತಂದುಕೊಂಡು ತಮ್ಮದೇ ಸಂಘಟನೆಗಳಲ್ಲಿ ಮೂಲೆ ಗುಂಪಾಗುವರು.

ಸಂಘಟನೆಗೆ ಬಂದು ರಕ್ತ ಕಣ್ಣೀರಾದವರ ಉದಾಹರಣೆಗಳು ಎಲ್ಲ ಕಡೆಯೂ ಇದೆ. ನಿಜವಾದ ಹೀರೋಗಳು ತೆರೆಮೆರೆಗೆ ಸರಿದು ಹೋಗಿ ಬಿಡುತ್ತಾರೆ. ಅಣ್ಣನೂ ಇಂಥವರ ಸಾಲಿನಲ್ಲಿ ಸೇರಿ ಹೋದರು. ಆದರೆ ಬಡವರು, ದಲಿತರು, ರೈತರು, ಕೂಲಿ ಕಾರ್ಮಿಕರ ಪರ ಹೋರಾಟಗಾರರು ಬೇಕು ಅನ್ನುತ್ತಿದ್ದರು. ನನ್ನನ್ನು ಸರ್ಕಾರಿ ನೌಕರ ಆಗಬೇಕು ಎಂದೂ ಹೇಳಲಿಲ್ಲ. ರೈತರ ಪರ ಹೋರಾಟಗಾರನಾಗಬೇಕು ಎಂಬುದೇ ಅವರ ಆಸೆಯಾಗಿತ್ತು. ಕಳೆದುಹೋದ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟಿದ್ದನ್ನು, ಅದನ್ನು ಮರಳಿ ಗಳಿಸಬೇಕೆಂದು ಅವರು ಎಂದೂ ಕನವರಿಸಲಿಲ್ಲ. ಆದರೆ ರೈತರ ಸರ್ಕಾರ ಬಂದೇ ಬರಲಿದೆ ಎಂಬ ಅವರ ನಂಬಿಕೆಗೆ ನಾವುಗಳು ಪದೇಪದೇ ಕಿವಿಗಳಾಗಬೇಕಿತ್ತು. ಹಾಗೇ, ನಗಾಡುತ್ತಿದ್ದವು.

ಅಪ್ರತಿಮಾ ರೈತ ಹೋರಾಟಗಾರದ ಪ್ರೊಫೆಸರ್ ನಂಜುಂಡಸ್ವಾಮಿ ಅವರು ಕಡೇ ಗಳಿಗೆಯಲ್ಲಿ ಮಲಗಿದ್ದ ಕಿದ್ವಾಯಿ ಆಸ್ಪತ್ರೆಯ ಪಕ್ಕದ ವಾರ್ಡ್ ನಲ್ಲಿ ಅಣ್ಣನೂ ಚಿಕಿತ್ಸೆ ಪಡೆದದ್ದು ಮಾತ್ರ ದುರಂತ. ಎಂದೂ ಸಿಗರೇಟ ಸೇದದ ಅವರು ರೈತದ ಸಂಘದ ಸಂಪರ್ಕಕ್ಕೆ ಬಂದ ನಂತರ ಚೈನ್ ಸ್ಮೋಮ್ಕರ್ ಆಗಿದ್ದು, ಎಷ್ಟೋ ವರ್ಷಗಳಾದ ಬಳಿಕ ಬಿಟ್ಟಿದ್ದು ಮತ್ತೊಂದು ನೆನಪು.

ಅಂದರೆ ಹೋರಾಟದ ಹಾದಿಯಲ್ಲಿ ಎಲ್ಲವನ್ನು ಕಳೆದುಕೊಂಡು ಮೂಲೆ ಗುಂಪಾದವರ ಬಗ್ಗೆ ಬರೆಯಬೇಕು ಎನ್ನಿಸುತ್ತದೆ. ಕಳೆದ ವರ್ಷ ತೀರಿಕೊಂಡ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ದೇವರಾಜಣ್ಣ ಅವರ ಕನಸು ಇದೇ ಆಗಿತ್ತು.‌ ಕಳೆದು ಹೋದವರು ಬರೀ ರೈತ ಸಂಘದಲ್ಲಿ ಮಾತ್ರವೇ ಇಲ್ಲ ಕಮ್ಯೂನಿಷ್ಟರು, ಸಂಘ ಪರಿವಾರದಲ್ಲೂ ಇದ್ದಾರೆ. ಅವರ ಮನೆಯವರನ್ನು ನೋಡಿದಾಗ, ಇಲ್ಲಾ ಅವರನ್ನೇ ನೋಡಿದಾಗ ಹೋರಾಟದ ಆಂತರ್ಯದಲ್ಲೂ ಇರುವ ಕುತಂತ್ರ, ರಾಜಕಾರಣ, ಜಾತಿಯ ಗುಮ್ಮ, ಗುಂಪುಗಾರಿಕೆ ಕಾಣ ಸಿಗುತ್ತದೆ. ಮತ್ತದೇ ಪ್ರಶ್ನೆ ಮೂಡುತ್ತದೆ… ಮಾನವ ರಾಜಕಾರಣವು ಎಲ್ಲ ಕಾಲ, ದೇಶ, ಸಿದ್ದಾಂತಿಗಳಲ್ಲಿ ಹೀಗಿಯೇ ತೆರೆಮರೆಯಲ್ಲಿ ನಗುತ್ತಿರುತ್ತದೆ. ಶಿಕಾರಿಯ ಜನಕಾರಣದಿಂದ ಚಳವಳಿ, ಸಿದ್ದಾಂತಗಳು ಸತ್ತು ಮತ್ತೇ ಹೊಸ ಮುಖಗಳಾಗಿ ರೂಪುಗೊಳ್ಳುತ್ತವೆ.

ಕಳೆದು ಹೋದ ನನ್ನ ಜನರ ಬಗ್ಗೆ ಬರವಣಿಗೆ ಆರಂಭಿಸುವುದೊಂದೇ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆ ಎಂಬುದು ನನ್ನ ಅನಿಸಿಕೆ. ಆಸಕ್ತರು ಕೈಜೋಡಿಸಿ ಬರವಣಿಗೆ ಆರಂಭಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?