ತುಮಕೂರು: ಸಂವಿಧಾನದ ಆಶಯದ ವಿರುದ್ಧ ನಡೆದರೆ ಕಾನೂನು ಪ್ರಕಾರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ತುಮಕೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ರಾಜಕೀಯ, ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕು. ಒಂದು ಮತ, ಒಂದು ಮೌಲ್ಯಗಳ ವೈರುಧ್ಯವನ್ನು ನಿವಾರಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ70ರಷ್ಟು ಬಡವರಿದ್ದ ನಮ್ಮ ದೇಶ ಈಗ ಶೇ.27ಕ್ಕೆ ಇಳಿದಿದೆ.ಎಲ್ಲವೂ ಸಾಧ್ಯವಾಗಿರುವುದು ಸಂವಿಧಾನದಿಂದ. ರಾಜಕೀಯ ಪ್ರೇರಿತ, ಉದ್ದೇಶಿತ ಸಂವಿಧಾನ ಸಡಿಲಿಕೆ ಸಲ್ಲ ಎಂದರು.
ಹಿಮಾಚಲ ಪ್ರದೇಶ ಹೈಕೋರ್ಟ್ ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮಾತನಾಡಿ, ಅಸಮಾನರು ಅಸಾಮಾನ್ಯ ಸ್ಥಾನಕ್ಕೆ ಏರಿರುವುದು ಸಂವಿಧಾನದಿಂದ. ಭಾರತ ದೇಶದ ಧರ್ಮ ಸಂವಿಧಾನವಾಗಿದೆ. ಸಮಾನತೆಯ ಕಾನೂನಿನ ಅಳವಡಿಕೆ ಸಂವಿಧಾನದಿಂದ ನಮಗೆಲ್ಲರಿಗೂ ಒದಗಿರುವ ಭಾಗ್ಯ. ಸಂವಿಧಾನ ದಿನವನ್ನು ಪ್ರತಿ ಮನೆಯಲ್ಲೂ ಆಚರಿಸಬೇಕು ಎಂದು ಕರೆ ನೀಡಿದರು.
ಡಾ. ಬಿ. ಆರ್.ಅಂಬೇಡ್ಕರ್ ಅನಾರೋಗ್ಯವನ್ನು ಲೆಕ್ಕಿಸದೆ 161 ದಿನಗಳಲ್ಲಿ ಸಂವಿಧಾನವನ್ನು ರಚಿಸಿದರು. ಅಸಮಾನತೆ, ಅರ್ಸ್ಪೃಶ್ಯತೆ, ಜಾತೀಯತೆ ಹೋಗಲಾಡಿಸಿ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸಿ, ಭಾರತದ ಪ್ರಜೆಗಳನ್ನು ಸ್ವತಂತ್ರರನ್ನಾಗಿಸುವ ಮಹತ್ವದ ಆಶಯ ಸಂವಿಧಾನಕ್ಕಿದೆ ಎಂದರು.
ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಸಂವಿಧಾನದ ಬಲವನ್ನು ವಿದ್ಯಾರ್ಥಿಗಳು ಪ್ರತಿಪಾದಿಸಬೇಕು, ಅನುಸರಿಸಿ ಮುಂದಿನ ಪೀಳಿಗೆಯವರಿಗೆ ಪಸರಿಸಬೇಕು. ಸಂವಿಧಾನದ ಸಕಾರಾತ್ಮಕ ಬಳಕೆ, ರಕ್ಷಣೆ ಪ್ರಜೆಗಳಿಂದ ಮಾತ್ರ ಸಾಧ್ಯ. ಸಂವಿಧಾನ ಉನ್ನತ ಸ್ಥಾನ, ಗೌರವ, ಮಾತನಾಡುವ, ಹೋರಾಡುವ ಹಕ್ಕನ್ನು ಕೊಟ್ಟಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಅಸಮಾನತೆಯ ಕರಾಳ ದಿನಗಳು ಈಗ ಕಣ್ಮರೆಯಾಗಿವೆ ಎಂದು ಹೇಳಿದರು.
ವಿ.ವಿಯ ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ.ರಮೇಶ್ ಬಿ, ಅಂಬೇಡ್ಕರ್ ಕೇಂದ್ರದ ಡಾ. ಚಿಕ್ಕಣ್ಣ, ಲಕ್ಷ್ಮೀ ರಂಗಯ್ಯ ಇತರರು ಇದ್ದರು.