Public story
ತುಮಕೂರು: ಸಮಾಜ ಕಲ್ಯಾಣ ಇಲಾಖೆಯು 2021-22ನೇ ಸಾಲಿಗಾಗಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ಪಡೆಯುವ ವೃತ್ತಿ ತರಬೇತಿ ಅವಧಿಯಲ್ಲಿ ಶಿಷ್ಯವೇತನ ಸೌಲಭ್ಯಕ್ಕಾಗಿ ಆಯ್ಕೆ ಮಾಡಲು ಅರ್ಹ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವೆಂದು ನಿಗಧಿಪಡಿಸಿತ್ತು.
ಆದರೆ ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮತ್ತು ತಾಂತ್ರಿಕ ತೊಂದರೆಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ತಂತ್ರಾಂಶ ತೆರೆಯದೇ ಇದ್ದುದರಿಂದ ಅರ್ಜಿ ಸಲ್ಲಿಸಲು ಜುಲೈ 1 ರಿಂದ ಆಗಸ್ಟ್ 14ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಪರಿಶಿಷ್ಟ ಜಾತಿಯ ಕಾನೂನು ಪದವೀಧರರು ತಮ್ಮ ಅರ್ಜಿಯನ್ನು ಇಲಾಖೆಯ ಜಾಲತಾಣ www.sw.kar.nic.inನಲ್ಲಿ ಸಲ್ಲಿಸಬಹುದು.
ತರಬೇತಿಯು 2 ವರ್ಷಗಳ ಅವಧಿಯದಾಗಿದ್ದು, ಒಮ್ಮೆ ತರಬೇತಿಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಮಧ್ಯೆ ತರಬೇತಿ ಬಿಡಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಉದ್ಯೋಗಕ್ಕೆ ಆಯ್ಕೆಯಾದಲ್ಲಿ ತರಬೇತಿ ಬಿಡಲು ನಿಯಮಾನುಸಾರ ಅವಕಾಶವಿರುತ್ತದೆ. ತರಬೇತಿ ಅವಧಿಯಲ್ಲಿ ಮಾಹೆಯಾನ 10000 ರೂ.ಗಳ ಶಿಷ್ಯವೇತನವನ್ನು ಹಾಜರಾತಿ ಮತ್ತು ದಿನಚರಿ ಆಧಾರದ ಮೇಲೆ ಪಾವತಿಸಲಾಗುವುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕಾನೂನು ಪದವಿ ಪಡೆದು ಎರಡು ವರ್ಷದೊಳಗಿರಬೇಕು.
ಕಡ್ಡಾಯವಾಗಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿರಬೇಕು(ದೃಢೀಕೃತ ಪತ್ರ ಲಗತ್ತಿಸಿರಬೇಕು). ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆ ದಿನಾಂಕದೊಳಗೆ 40 ವರ್ಷ ವಯೋಮಿತಿಯನ್ನು ದಾಟಿರಬಾರದು. ಕುಟುಂಬದ ವಾರ್ಷಿಕ ಆದಾಯ 2.50ಲಕ್ಷ ರೂ.ಗಳನ್ನು ಮೀರಿರಬಾರದು. ಅಭ್ಯರ್ಥಿಯು ಯಾವುದೇ ಕಾರಣಕ್ಕೂ ತರಬೇತಿಯನ್ನು ತೊರೆದಲ್ಲಿ ಅಲ್ಲಿಯವರೆಗೆ ಪಾವತಿಸಲಾದ ಶಿಷ್ಯವೇತನವನ್ನು ಸರ್ಕಾರಕ್ಕೆ ವಾಪಸು ಜಮಾ ಮಾಡಬೇಕಾಗುತ್ತದೆ. ತಪ್ಪಿದ್ದಲ್ಲಿ ಈ ಹಣಕ್ಕೆ ಶೇ.10%ರಷ್ಟು ಬಡ್ಡಿ ವಿಧಿಸಿ, ಕಂದಾಯ ರೂಪದಲ್ಲಿ ವಸೂಲಾತಿ ಮಾಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ 2 ವರ್ಷಗಳ ತರಬೇತಿಗಾಗಿ ಸರ್ಕಾರಿ ಅಭಿಯೋಜಕರು/ಸರ್ಕಾರಿ ವಕೀಲರು ಹಾಗೂ 15 ವರ್ಷಗಳಿಗಿಂತ ಹೆಚ್ಚಿನ ಅವಧಿ ನ್ಯಾಯಾಲಯಗಳಲ್ಲಿ ವಾದ ಮಂಡಿಸಿದ ಖಾಸಗಿ ಕ್ರಿಮಿನಲ್/ಸಿವಿಲ್ ವಕೀಲರುಗಳ ಬಳಿಯಲ್ಲಿ ತರಬೇತಿಗಾಗಿ ನಿಯೋಜಿಸಲಾಗುವುದು. ಅಭ್ಯರ್ಥಿಯನ್ನು ಆಯ್ಕೆ ಸಮಿತಿಯು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಜಂಟಿ ನಿರ್ದೇಶಕಿ ಪ್ರೇಮ ತಿಳಿಸಿದ್ದಾರೆ.