ತುರುವೇಕೆರೆ; ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಅಂತ್ಯಸಂಸ್ಕಾರವನ್ನೂ ಒಂದು ಪವಿತ್ರ ಕಾರ್ಯ ಎಂದೇ ಪರಿಗಣಿಸಲಾಗಿದೆ. ಮನುಷ್ಯನಿಗೆ ಬದುಕಿದ್ದಾಗ ಸಿಗುವ ಘನತೆ ಅವನ ಸಾವಿನ ನಂತರವೂ ಸಿಗಬೇಕು. ಆ ನಿಟ್ಟಿನಲ್ಲಿ ರಾತ್ರಿ, ಹಗಲೆನ್ನದೆ 18 ವರ್ಷಗಳಿಂದ ಶವಗಳನ್ನು ಸಾಗಿಸುವ ಮೂಲಕ ಮನುಕುಲದ ಸೇವೆಯಲ್ಲಿ ನಿರತರಾಗಿರುವ ಆಟೋಚಾಲಕರಾದ ಅಶ್ವತ್ಥ್ ಮತ್ತು ಖಲೀಲ್ ಅವರ ಮಾನವೀಯ ಸ್ಪಂದನೆ ಅನುಕರಣೀಯ ಮಾದರಿ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಶವಸಾಗಣೆ ಮಾಡುವ ಆಟೋಚಾಲಕರಾದ ಅಶ್ವತ್ಥ್ ಮತ್ತು ಖಲೀಲ್ ಅವರ ಉದಾತ್ತ ಕಾರ್ಯವನ್ನು ಅಭಿನಂದಿಸಿ ಮಾತನಾಡಿದರು.
ಗ್ರಂಥಾಲಯದ ವತಿಯಿಂದ ಅಶ್ವತ್ಥ್ ಮತ್ತು ಖಲೀಲ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶ್ವತ್ಥ್ “ಕಳೆದ 18 ವರ್ಷಗಳಿಂದ ಅಂಜಿಕೆ,ಅಳುಕಿಲ್ಲದೆ, ಅಸಹ್ಯ ಪಡದೆ ಶವ ಸಾಗಣೆ ಮಾಡಿರುವೆ. ಅನಾಥ ಶವಗಳು, ಅಪಘಾತಕ್ಕೀಡಾದ, ಆತ್ಮಹತ್ಯೆ ಮಾಡಿಕೊಂಡ ಶವಗಳನ್ನೂ ಯಾವ ಪ್ರತೀಫಲಾಪೇಕ್ಷೆ ಇಲ್ಲದೆ ಸಾಗಿಸಿರುವೆ. ಈ ಕಾರ್ಯದಿಂದ ಬದುಕಿನಲ್ಲಿ ಧನ್ಯತೆ ಸಿಕ್ಕಿದೆ”ಎಂದರು.
ಚಿದಂಬರೇಶ್ವರ ಗ್ರಂಥಾಲಯದ ಸಂಸ್ಥಾಪಕರಾದ ಲಲಿತಾ, ರಾಮಚಂದ್ರ ದಂಪತಿ, ಉಪನ್ಯಾಸಕರಾದ ಕೃಷ್ಣಚೈತನ್ಯ, ರೂಪಶ್ರೀ, ಎಸ್. ಯೋಗಾನಂದ್,ಟಿ.ಆರ್.ಶ್ರೀನಿವಾಸ್, ವಿಠ್ಠಲ್ ದೀಕ್ಷಿತ್, ಬೋರಲಿಂಗಯ್ಯ ಇತರರು ಉಪಸ್ಥಿತರಿದ್ದರು.