ತಮ್ಮ ಕವನಗಳಲ್ಲಿ ಸಾವು, ಪ್ರೀತಿ, ಆಧ್ಯಾತ್ಮ, ಬದುಕನ್ನು ಸಮ್ಮಿಳಿತಗೊಳಿಸುವ ಮೂಲಕ ನಾಡಿನ ಜನರ, ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ರಜನಿ ಅವರ ಈ ಕವನ ಸಾವಿನಂಚಿಗೆ ಹೋಗುವವರು, ಸಾವಿನ ಭಯದಲ್ಲಿ ನಲುಗುತ್ತಿರುವವರಿಗೆ ಬದುಕಿನ ಸಂಜೀವಿನಿಯಂತೆ ಕಂಡು ಬರುತ್ತದೆ. ಕೊರೊನಾ ಸಾವಿನ ತಲ್ಲಣ, ಭಯಗಳನ್ನು ಹೋಗಲಾಡಿಸಿ ಬದುಕಿನ ಹೊಸ ಆಸೆಯನ್ನು ಚಿಗುರಿಸುವಂತಿದೆ ಕವನ. ನಿರಾಸೆಯ ನಡುವೆಯೇ ಭರವಸೆ ಮೂಡಿಸಿಕೊಳ್ಳಬೇಕು. ಕಪ್ಪು ಮೋಡಕ್ಕೂ ಒಂದು ಬೆಳ್ಳಿ ರೇಖೆ ಮೂಡಿರುವಂತೆ ಎಂಥದೇ ಸಂದರ್ಭದಲ್ಲಿ ಬದುಕಿ ತೋರಿಸಲು ಒಂದು ಭರವಸೆ ಇದ್ದೇ ಇರುತ್ತದೆ ಎಂದು ಕವನ ಹೇಳುತ್ತದೆ
ಚೆಲ್ಲ ಬೇಡ ಉಸಿರು … ಸೋತು ಈ ದಿನ
ಬರುವ ನಾಳೆ…
ಹೊತ್ತು ತರುವುದು ಹೊಸ ಉತ್ಸಾಹ
ಏದುಸಿರು ಸಮ ಮಾಡಿ
ನೂಕು…ಈ ದಿನವನ್ನು ಚರಿತ್ರೆಗೆ
ನಾಳೆಯ ಉತ್ಕಟ ಕ್ಷಣಕ್ಕೆ…
ಮುಸ್ಸಂಜೆಯ ಸೂರ್ಯ
ಮರೆಯಾದನೇ?
ಏಳಲಿಲ್ಲದೇ ಮೇಲೆ ಸಮುದ್ರದಲ್ಲಿ ಸ್ನಾನ ಮಾಡಿ…
ನಿನ್ನ ಕಾಯಲು ಬಿಡಲಿಲ್ಲವೆ?
ಚುಕ್ಕಿ ಚಂದ್ರಮ
ಬೆಳದಿಂಗಳನ್ನ?
ಬಂದೆವೆ? ನಾವು
ಬಿಳಿ ಬಟ್ಟೆ ಹೊದೆಯಲು ?
ನಲ್ಲನ ಬಿಸಿಯುಸಿರು
ಕಂಪು …. ನೆನೆದು
ಹೀರು ಗಾಳಿಯನ್ನು …
ಒದ್ದು ಬಿಳಿ ಹೊದಿಕೆ..
ಅಂಗೈ ಊರಿ
ಎದ್ದು ಇಳಿದು ಬಾ
ನಡೆ ಬೆಳದಿಂಗಳ
ಸವಿಯೂಟಕ್ಕೆ…
ಕೆಂಪು ರಸಗವಳಕ್ಕೆ
ಹುಗಿದ ದೇಹ …
ಭೂಮಿಗೆ ಬಿದ್ದ ಬೀಜ
ಹಸಿರೊಡೆದು ಚಿಗುರಿ…
ಒದರಿ ಹಿಡಿ ಮಣ್ಣು..
ಅರಳಿ ಕೆಂಪು ಗುಲಾಬಿ
ಅದೇ ಕಂಪು ಉಸಿರಿನಲಿ…
ತೆರೆ ಸರಿದು
ಮಂಜು ಹರಿದು
ಎಳೆ ಬಿಸಿಲು..ಹೀರಿ ಇಬ್ಬನಿ
ಬಿಸಿಲು ಮಳೆ…
ತುಂಬಿಕೋ ತಂಗಾಳಿ
ಎದೆಗೂಡ ತುಂಬಾ..
ಗುರಿ ಗೋರಿಯಲ್ಲ..
ಮರುಜೀವನೋತ್ಸಾಹದಲೀ…
ಆತ್ಮ ಮರುಹುಟ್ಟು…
ಶತ ಶತಮಾನದ
ಹಸಿವು
ಮೊಳಕೆಯೊಡೆಯಲು…..
ಎರಡೇ ಎಲೆ
ಆ ದಿಕ್ಕಿಗೊಂದು…
ಈ ದಿಕ್ಕಿಗೊಂದು…
Super mam, 3rd para 3rd line ಏಳಲಿಲ್ಲದೆ or ಏಳಲ್ಲಿಲವೇ? Sorry if iam wrong mam