ಪಾವಗಡ :ತಂದೆ ತಾಯಿ ಕೂಲಿ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರೆ, ಅದೇ ಮಕ್ಕಳಿಂದ ಇಟ್ಟಿಗೆ ಕೆಲಸ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಲಿಂಗದಹಳ್ಳಿ ಗ್ರಾಮದ ನಿಸರ್ಗ ಖಾಸಗಿ ಶಾಲೆಯಲ್ಲಿನ ಮಕ್ಕಳು ಶಾಲೆಗೆ ತೆರಳಿದ್ದ ವೇಳೆ ಆಡಳಿತ ಮಂಡಳಿ ಇಟ್ಟಿಗೆಗೂಡು ಕಟ್ಟುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.
ಅಕ್ಷರ ಕಲಿಯಬೇಕಾದ ಮಕ್ಕಳು ಖಾಸಗಿ ಶಾಲೆಯ ಆಡಳಿತ ಮ೦ಡಳಿಯ ನಿರ್ಲಕ್ಷ್ಯಕ್ಕೆ ಬಿರು ಬಿಸಿಲಿನಲ್ಲಿ ಇಟ್ಟಿಗೆ ಜೋಡಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಲಿಂಗದಹಳ್ಳಿ ಗ್ರಾಮದ ನಿಸರ್ಗ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಇಟ್ಟಿಗೆ ಗೂಡಿನ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪಾವಗಡದ ಖಾಸಗಿ ಶಾಲೆಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ
ನಾವು ಮಕ್ಕಳಿಗೆ ಇಟ್ಟಿಗೆ ಕೆಲಸ ಮಾಡುವಂತೆ ಹೇಳಿಲ್ಲ. ಮಕ್ಕಳು ಗೂಡನ್ನು ಹತ್ತಿರುವ ವಿಡಿಯೋ ಮಾಡಿ ಹರಿ ಬಿಡಲಾಗಿದೆ ಅಷ್ಟೆ, ನಾವು ಕೆಲಸ ಮಾಡುವಂತೆ ಹೇಳಿಲ್ಲ, ಇದೆಲ್ಲ ಸತ್ಯಕ್ಕೆ ದೂರವಾದದ್ದು. -ತಿಪ್ಪೇಸ್ವಾಮಿ, ನಿಸರ್ಗ ಶಾಲೆಯ ಮುಖ್ಯ ಶಿಕ್ಷಕ, ಲಿಂಗದಹಳ್ಳಿ
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ನೋಟಿಸ್ ನೀಡಲಾಗಿದೆ. ಮೂರು ದಿನದೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದು ಮಾಡಲಾಗುವುದು. -ಅಶ್ವತ್ಥನಾರಾಯಣ, ಬಿಇಒ, ಪಾವಗಡ
ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಂಡಿರುವುದೇ ಅಕ್ಷಮ ಅಪರಾಧ, ತಕ್ಷಣ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಶಾಲೆಯ ಮಾನ್ಯತೆ ರದ್ದು ಮಾಡಬೇಕು, ಮಾನ್ಯ ನವೀಕರಣ ಕೂಡ ಮಾಡಬಾರದು, ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು
ಲಿಂಗದಹಳ್ಳಿ ಗ್ರಾಮದ ಪೋಷಕರೊಬ್ಬರು ಒತ್ತಾಯಿಸಿದರು.