ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿದ್ಧರಾಜು ಚಾಲನೆ ನೀಡಿದರು
ತುಮಕೂರು : ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಜತೆಗೆ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೆನರಾ ಬ್ಯಾಂಕ್ ಮಾಡಿಕೊಂಡು ಬಂದಿದೆ ಎಂದು ಕೆನರಾ ಬ್ಯಾಂಕ್ ತುಮಕೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿದ್ಧರಾಜು ತಿಳಿಸಿದರು.
ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಜೊತೆಗೆ ಸಾಲವನ್ನು ಪಡೆದ ಉದ್ದೇಶಕ್ಕೆ ಬಳಸಿದಾಗ ಆರ್ಥಿಕವಾಗಿ ಸದೃಢರಾಗಬಹುದು. ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದರು.
ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ೧೯೦೬ರಲ್ಲಿ ಆರಂಭವಾಗಿ ಪ್ರಸ್ತುತ ಗ್ರಾಹಕರ ವಿಶ್ವಾಸದಿಂದ ಮುನ್ನೆಡಿಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ ೬೮೦೦ ಕೋಟಿ ವ್ಯವಹಾರ ಇದೆ, ೩೫೦೦ಕೋಟಿ ಸಾಲ ನೀಡಲಾಗಿದೆ. ಕೆನರಾ ಬ್ಯಾಂಕ್ ಸಂಸ್ಥಾಪಕರು ಎತ್ತಿನ ಗಾಡಿಯಲ್ಲಿ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ತೆರೆಸಿ ಬ್ಯಾಂಕ್ ಆರಂಭಿಸಿದ್ದರು ಎಂದು ಸ್ಮರಿಸಿದರು.
ರೈತರಿಗೆ ನೆರವಾಗುವಂತೆ ಕೆನರಾ ಬ್ಯಾಂಕ್ ನ ಅರ್ಧ ಶಾಖೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತರು ಬ್ಯಾಂಕ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದಾಯಕ ಕೃಷಿ ಮಾಡಬಹುದಾಗಿದೆ. ಬೆಳೆ ಸಾಲ, ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯಗಳು ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ೨೭ ಶಾಖೆಗಳನ್ನು ಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವಂತೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಬೆಳವಣಿಗೆಯ ಜೊತೆ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದರು.
ಅರೆಯೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಆರ್ ಮಾತನಾಡಿ, ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಿದ್ಧಗಂಗಾ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿಗಳು ಹಾಗೂ 40 ಮಂದಿಗೆ ಹಸು ಸಾಲದ ಚೆಕ್ ವಿತರಣೆ ಮಾಡಲಾಗಿದೆ. ಕೆನರಾ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡು ಸರಿಯಾಗಿ ಕಟ್ಟಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ರೈತರಿಗೆ ಅನುಕೂಲವಾಗವಂತೆ ಕೃಷಿ ಸಾಲ ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಕ್ರೀಡಾ ಸಾಮಗ್ರಿ ಹಾಗೂ ಅರೆಯೂರು ವೈದ್ಯನಾಥೇಶ್ವರ ದೇಗುಲಕ್ಕೆ ಕುಡಿಯುವ ಶುದ್ಧ ನೀರಿನ ಘಟಕ ಸೇರಿದಂತೆ ಹಾಲು ಉತ್ಪಾದಕರಿಗೆ ಸಾಲದ ಚೆಕ್ ವಿತರಿಸಲಾಯಿತು.
ಕೆನರಾ ಬ್ಯಾಂಕ್ ನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬಾರಾವ್ ಪೈ ಅವರ ಭಾವ ಚಿತ್ರಕ್ಕೆ ಹೂ ಮಾಲೆ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಉಪಾಧ್ಯಕ್ಷೆ ರೇಖಾ, ಕಟ್ಟೆಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀರಂಗಮ್ಮ, ಗ್ರಾಪಂ ಸದಸ್ಯರಾದ ಪ್ರಭುದೇವರು, ಕೆ.ಎಂ.ಕಿರಣ್, ಸಿದ್ದಲಿಂಗಮ್ಮ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಗಂಗಣ್ಣ, ಗಿರೀಶ್, ಅರೆಯೂರು ಕೆನರಾ ಬ್ಯಾಂಕ್ ನ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.
ಫೋಟೋ: ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಹಸು ಸಾಕಾಣಿಕೆ ಸಾಲದ ಚೆಕ್ ವಿತರಣೆ ಮಾಡಲಾಯಿತು