(ಹೆಣ್ಣುಮಕ್ಕಳೇ ತುಂಬಿರುವ ದಕ್ಕಲಿಗರ ‘ಗಾಂಧಿ’ನಗರದಲ್ಲಿ ಒಂದೇ ಒಂದು ಶೌಚಗೃಹವೂ ಇಲ್ಲ ; ಶೌಚಾಲಯವೂ ಇಲ್ಲ!!)
(ಅಲೆಮಾರಿಗಳು ಮೊದಲು ಎಲ್ಲರಿಗೂ ಅರ್ಥವಾಗುವಂತಾಗಲಿ….)
ಈ ಅಲೆಮಾರಿ ದಿಟ್ಟೆಯರು ಯಾವುದಕ್ಕೂ ದಿಕ್ಕುಗೆಡದೆ, ಕಂಗೆಡದೆ ಹೀಗೆ ಬದುಕು ದೂಡುತ್ತಿರುವುದನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಒಮ್ಮೆ ಬಂದು ನೋಡಿದರೆ, ಇಲ್ಲಿನ ತಬ್ಬಲಿತನಕ್ಕೆ ಒಂದಿಷ್ಟು ನೆಳಲೀದಂತಾದೀತು ಎಂಬ ನಿರೀಕ್ಷೆಯಿದೆ.
ಚಿಕ್ಕನಾಯಕನಹಳ್ಳಿ : ಪಟ್ಟಣದ ಹುಳಿಯಾರು ಗೇಟ್’ನಿಂದ ಕೆರೆಮುಂದಲಪಾಳ್ಯ, ರಾಯಪ್ಪನಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿರುವ ರುದ್ರಭೂಮಿಯ ಬಳಿ, ಅಲೆಮಾರಿ ದಕ್ಕಲಿಗ ಜನಾಂಗದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕುಟುಂಬಗಳು ವಾಸವಾಗಿವೆ. ಎರಡೇ ಎರಡು ಮುಖ್ಯಬೀದಿಗಳನ್ನು ಹೊಂದಿರುವ ಈ ಪುಟ್ಟ ಕಾಲೊನಿಗೆ, “ಗಾಂಧಿ’ನಗರ” ಎಂದು ಕರೆಯಲಾಗಿದೆ.
ಇಪ್ಪತ್ತೆಂಟಕ್ಕೂ ಹೆಚ್ಚಿನ ಸಂಖ್ಯೆಯ ಶಾಲಾ ಮಕ್ಕಳು ಇಲ್ಲಿವೆ. ಈ ಅಲೆಮಾರಿ ಕುಟುಂಬಗಳು ಬದುಕುತ್ತಿರುವ ದುಸ್ಥಿತಿಯಲ್ಲೇ ಇಲ್ಲಿನ ಮಕ್ಕಳೂ ಸಹಾ ತಮ್ಮ ಪೋಷಕರ ಜೊತೆ ಅನಿವಾರ್ಯ ಇಲ್ಲೇ ಬದುಕುತ್ತಿದ್ದಾರೆ. ಇಲ್ಲಿರುವ ಯಾವ ಕುಟುಂಬಕ್ಕೂ ಕನಿಷ್ಠ ಶೌಚಗೃಹ ಮತ್ತು ಶೌಚಾಲಯದ ವ್ಯವಸ್ಥೆಯಿಲ್ಲ. ಬಹಿರ್ದೆಸೆಗೆ ಬಯಲ ಆಲಯವೇ ಇವರ ಶೌಚಾಲಯ.
ಗಾಂಧಿನಗರದ ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಣ್ಣುಮಕ್ಕಳಿದ್ದಾರೆ. ಇಲ್ಲಿ ವೃದ್ಧ ಮಹಿಳೆಯರು, ಗೃಹಿಣಿಯರು, ಕೂಲಿ ಕಾರ್ಮಿಕ ಮಹಿಳೆಯರು, ಹರೆಯದ ಹುಡುಗಿಯರು, ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಸೇರಿದ್ದಾರೆ. ಇವರಿಗೆಲ್ಲ ಬಯಲ ಆಲಯವೇ ಶೌಚಾಲಯ. ಕಾಲೊನಿ ಪಕ್ಕದ ಹೊಲ, ಹೊಲದ ಬಾರೆ, ರುದ್ರಭೂಮಿಯ ಬಡ್ಡೆ ಇತ್ಯಾದಿ ಕಣ್ಮರೆಯ ಜಾಗಗಳಲ್ಲಿ ಇಲ್ಲಿನ ಹೆಣ್ಣುಮಕ್ಕಳು ಜೋಪಾನವಾಗಿ ಬಹಿರ್ದೆಸೆಗೆ ಹೋಗಿ ಬರಬೇಕು.
ಶೌಚಬಾಧೆ ಹಗಲಲ್ಲೂ ಬರುತ್ತದೆ. ರಾತ್ರಿಯೂ ಬರುತ್ತದೆ. ಹಗಲಿನಲ್ಲಿ ಹೊಲದ ಮಾಲೀಕರ ಕಾಟ, ಬೈಗುಳ, ನಿಂದನೆ. ರಾತ್ರಿಯಲ್ಲಿ ಹಾವು, ಚೇಳು, ಹುಳ, ಹುಪ್ಪಟೆ ಅಥವಾ ಹೆಣ್ಣುಬಾಕರ ಕಾಟ, ಅಪಾಯ. ಇಂಥ ಅಪಾಯಕಾರಿ, ಆತಂಕಕಾರಿ ಸ್ಥಿತಿಯಲ್ಲಿ ನಮ್ಮ ಹೆಣ್ಣುಮಕ್ಕಳು ಜೀವ ಬಿಗಿಹಿಡಿದು ಬಹಿರ್ದೆಸೆಗೆ ಹೋಗಿ ಬರಬೇಕು.
ಮಹಿಳಾ ಸಬಲೀಕರಣ, ಬೇಟಿ ಬಚಾವೊ-ಬೇಟಿ ಪಡಾವೊ, ಸ್ವಚ್ಛ ಭಾರತ, ನಿರ್ಮಲ ಕರ್ನಾಟಕ ಇತ್ಯಾದಿ ಬಗೆಬಗೆಯ ಎಲ್ಲ ಸರ್ಕಾರಿ ಅಭಿಯಾನಗಳಿಂದ ಅಲೆಮಾರಿಗಳು ಪಡೆದ ಪ್ರಯೋಜನವಿದು.
ಕಟ್ಟಕಡೆಯ ಪ್ರಜೆಗಳಿಗೂ ಕನಿಷ್ಠ ಮೂಲಭೂತ ಸೌಕರ್ಯದ ಹಕ್ಕಿದೆ ಎಂದು ಭಾರತ ಸಂವಿಧಾನ ಕೊಡಮಾಡಿರುವ ನಮ್ಮ ಹಕ್ಕನ್ನು ನಾವು ಯಾರ ಬಳಿ ಕೇಳಿ ಪಡೆಯಬೇಕು, ಯಾಕೆ ನಾವು ಕೇಳಿ ಪಡೆಯಬೇಕು ಎಂದು ಅಲೆಮಾರಿ ದಕ್ಕಲಿಗರ ರಾಜ್ಯಮುಖಂಡ ಡಿ ಶಾಂತರಾಜು ಪ್ರಶ್ನಿಸುತ್ತಾರೆ.
ಪ್ರತಿ ಮನೆಗೂ ಶೌಚಾಲಯ ಕಟ್ಟಿಕೊಟ್ಟಿದ್ದೇನೆ ಎನ್ನುವ ಕೇಂದ್ರ ಸರ್ಕಾರ ಎಲ್ಲಿದೆ, ಬಯಲು ಶೌಚ ಮುಕ್ತ ಕರ್ನಾಟಕ ಮಾಡಿಬಿಟ್ಟಿದ್ದೇನೆ ಅನ್ನುವ ರಾಜ್ಯ ಸರ್ಕಾರ ಎಲ್ಲಿದೆ. ಈ ಪೌರಾಡಳಿತ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಪಂಚಾಯಿತಿ ಇಲಾಖೆ, ಇತ್ಯಾದಿ ಎಲ್ಲವೂ ಎಲ್ಲಿವೆ, ಕಟ್ಟಕಡೆಯ ಅಂಚಿನಲ್ಲಿರುವ ಅಲೆಮಾರಿಗಳ ಕನಿಷ್ಠ ಯೋಗಕ್ಷೇಮಕ್ಕಾಗಿ ಇವು ಏನು ಮಾಡುತ್ತಿವೆ ಎಂದು ಅಲೆಮಾರಿ ದಕ್ಕಲಿಗರ ರಾಜ್ಯಮುಖಂಡ ಶಾಂತರಾಜು ಆಕ್ರೋಶದಿಂದ ಪ್ರಶ್ನಿಸುತ್ತಾರೆ.
ಮಂಜಮ್ಮ, ಶಿವಮ್ಮ, ಜ್ಯೋತಿ, ಅಶ್ವಿನಿ, ರಾಧಾ ಮುಂತಾದ ಅಲೆಮಾರಿ ದಿಟ್ಟ ಹೆಣ್ಣುಮಕ್ಕಳು, ಶೌಚ ವಿಸರ್ಜನೆಗೆ ಸಂಬಂಧಿಸಿ ನಿತ್ಯ ತಮಗಾಗುತ್ತಿರುವ ಕಷ್ಟ-ತೊಂದರೆಗಳ ಬಗ್ಗೆ ಹೇಳಿದರು. ‘ಸಮಾಜದಿಂದ ದೂರ ಸರಿಸಲ್ಪಟ್ಟ ಅಂಚಿನ ಜನ ನಾವು’ ಎಂಬ ಅನಾಥತೆ ಅವರ ಕಣ್ಣುಗಳಲ್ಲಿ ಕಂಬನಿ ಮಿಡಿಸುತ್ತಿತ್ತು.
ಈ ಅಲೆಮಾರಿ ದಿಟ್ಟೆಯರು ಯಾವುದಕ್ಕೂ ದಿಕ್ಕುಗೆಡದೆ, ಕಂಗೆಡದೆ ಹೀಗೆ ಬದುಕು ದೂಡುತ್ತಿರುವುದನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಒಮ್ಮೆ ಬಂದು ನೋಡಿದರೆ, ಇಲ್ಲಿನ ತಬ್ಬಲಿತನಕ್ಕೆ ಒಂದಿಷ್ಟು ನೆಳಲೀದಂತಾದೀತು ಎಂಬ ನಿರೀಕ್ಷೆಯಿದೆ.
ಅಲೆಮಾರಿಗಳ ಸಂಕಟವನ್ನು ಅರ್ಥ ಮಾಡಿಕೊಳ್ಳದ ಆಡಳಿತ ::
ಸರ್ಕಾರ, ಸ್ಥಳೀಯ ಆಡಳಿತ, ಜನ ಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಮುಖಂಡರು ಅಷ್ಟೇ ಅಲ್ಲದೆ, ಬಹುತೇಕ ಸಂದರ್ಭಗಳಲ್ಲಿ ಕೆಲಮಂದಿ ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರರಿಗೂ ಅಲೆಮಾರಿಗಳ ಸಮಸ್ಯೆಗಳು ಅರ್ಥವೇ ಆಗುವುದಿಲ್ಲ. ಮೇಲ್’ಸ್ತರದ, ಮೇಲ್ನೋಟದ ತಿಳುವಳಿಕೆಯೇ ಅವರಲ್ಲಿರುವ ಅಲೆಮಾರಿ ಜ್ಞಾನ. ಅಲೆಮಾರಿ ಮತ್ತು ಬುಡಕಟ್ಟು-ಪಣಕಟ್ಟುಗಳನ್ನು ಆಳವಾಗಿ ತಿಳಿದು ಅರ್ಥಮಾಡಿಕೊಳ್ಳುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ.
ಹಾಗಾಗಿ, ಅಲೆಮಾರಿಗಳ ಸಾಮಾನ್ಯ ಸಮಸ್ಯೆ ಅಥವಾ ಸಂಕಷ್ಟಕ್ಕೂ ಪರಿಹಾರ ಸಿಗದೆ, ನಮ್ಮ ಅಲೆಮಾರಿಗಳ ಸ್ಥಿತಿ ಹೀಗೇ ಉಳಿದಿರುವುದು. ಅಲೆಮಾರಿಗಳು ಮೊದಲು ಎಲ್ಲರಿಗೂ ಅರ್ಥವಾಗಲಿ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಂಗನಾಥ್ ಖೇದ ವ್ಯಕ್ತಪಡಿಸಿದರು.
ಸಂಚಲನ
ಚಿಕ್ಕನಾಯಕನ ಸೀಮೆಯಿಂದ